ಕಮಲಾಪುರ: ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಆಗಿದ್ದು, ಆ ಪಕ್ಷಕ್ಕೆ ಮತದಾನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಬಿಜೆಪಿ ಗೆಲ್ಲಿಸಿದರೆ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ತಾಲೂಕಿನ ಮಹಾಗಾಂವ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಅವರ ಪರವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆ ಮಾಡಿದರೆ, ಅದು ಮಹಾಗಾಂವಗೆ ಬರುವತನಕ ಸೋರಿಕೆಯಾಗಿ ಕೇವಲ 25 ಪೈಸೆ ತಲುಪುತ್ತಿತ್ತು. ಆದರೆ, ಪ್ರಧಾನಿ ಮೋದಿ ದೆಹಲಿಯಿಂದ ಒಂದು ರೂಪಾಯಿ ಕಳಿಸಿದರೂ, ಇಡೀ ಒಂದು ರೂಪಾಯಿ ಮಹಾಗಾಂವಗೆ ಬಂದು ತಲುಪುತ್ತದೆ. ಡಿಜಿಟಲ್ ಇಂಡಿಯಾ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಖಾತೆಗೆ ಸೇರುವಂತೆ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ಜಿ.ಪಾಟೀಲ ಅವರಿಗೆ ಮತ ನೀಡಿ ಗೆಲ್ಲಿಸಿದರೆ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಮಹಾಗಾಂವ, ಬಬಲಾದ, ಕುರಿಕೋಟಾ, ಹರಸೂರು, ಆಲಗೂಡ, ಕುಮಸಿ, ಅವರದ (ಬಿ), ಕಲ್ಲಹಾಗರಾಗ, ಭೋಪಾಲ ತೆಗನೂರ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಬಿಜೆಪಿ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಬೋಧನ ಗ್ರಾಮದಲ್ಲೂ ಬಿ.ಜಿ.ಪಾಟೀಲ ಪರವಾಗಿ ಪ್ರಚಾರ ನಡೆಸಲಾಯಿತು. ಆಳಂದ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತಿತರರು ಭಾಗವಹಿಸಿದ್ದರು.