ಕಲಾದಗಿ: ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳು ಕಳೆದರೂ ದುರಸ್ತಿ ಕೈಗೊಳ್ಳದ್ದರಿಂದ ಉದಗಟ್ಟಿ ಗ್ರಾಮಸ್ಥರುಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಪರ ಊರಿಗೆ ತೆರಳಿ ನೀರು ತರುವಂತಾಗಿದ್ದು, ಅಧಿಕಾರಿಗಳು ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಘಟಕ ದುರಸ್ತಿಗೊಳಿಸಿದ ದಿನ ಮಾತ್ರ ನೀರು ಲಭ್ಯವಾಗಿ ಮರು ದಿನ ಮತ್ತೆ ಕೆಟ್ಟುಹೋದ ಸ್ಥಿತಿಯಲ್ಲಿರುತ್ತದೆ.ಇಂತಹ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಗ್ರಾಮಸ್ಥರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನಿರ್ಲಕ್ಷé ಧೋರಣೆ ಅನುಸರಿಸುತ್ತಿದ್ದಾರೆ.
ಉದಗಟ್ಟಿಯಲ್ಲಿ 1,500ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರು ಮೂರ್‍ನಾಲ್ಕು ಕಿಲೋಮೀಟರ್ ದೂರದ ಗ್ರಾಮ ಮುಧೋಳ ತಾಲೂಕಿನ ಜುನ್ನೂರು ಗ್ರಾಮಕ್ಕೆ ಇಲ್ಲವೇ ಪಕ್ಕದ ಶಾರದಾಳ ಗ್ರಾಮಕ್ಕೆ ಹತ್ತಾರು ರೂ. ಖರ್ಚು ಮಾಡಿ ನೀರು ತಂದು ದಾಹವನ್ನು ಇಂಗಿಸಿಕೊಳ್ಳುತ್ತಿದ್ದಾರೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ದುರಸ್ತಿಗೊಳಿಸಬೆಕಾಗಿದೆ.
ಖಜ್ಜಿಡೋಣಿ ಗ್ರಾಪಂ ಮಾಜಿ ಅಧ್ಯಕ್ಷರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಕ ದುರಸ್ತಿ ಟೆಂಡರ್ ಏಜೆನ್ಸಿಯವರಿಗೆ ಮಾತನಾಡಿ ಶೀಘ್ರ ದುರಸ್ತಿ ಮಾಡಲು ತಿಳಿಸಲಾಗಿದೆ.
–ಆರ್.ವಾಯ್. ಅಪ್ಪನ್ನವರ್, ಖಜ್ಜಿಡೋಣಿ ಗ್ರಾಪಂ ಪ್ರಭಾರಿ ಪಿಡಿಒ
ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಕಾರದ ಆದೇಶದ ಅನುಸಾರ ಖಾಸಗಿ ಏಜೆನ್ಸಿಗಳಿಗೆ ನೀಡಲಾಗಿದೆ. ಗ್ರಾಮದ ಪಿಡಿಒ ಮುಖಾಂತರ ಅಲ್ಲಿನ ಖಾಸಗಿ ಏಜೆನ್ಸಿ ಬಗ್ಗೆ ಮಾಹಿತಿ ಪಡೆದು ಅವರಿಗೆ ದುರಸ್ತಿಗೊಳಿಸಲು ಕ್ರಮ ವಹಿಸಲು ಸೂಚನೆ ನೀಡಲಾಗುವುದು.
–ಎನ್.ವೈ. ಬಸರಿಗಿಡದ, ಬಾಗಲಕೋಟೆ ತಾಪಂ ಇಒ
ಕಳೆದು ಒಂದು ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒಂದು ದಿನ ಮಾತ್ರ ಸುಸ್ಥಿತಿಯಲ್ಲಿತ್ತು. ಉಳಿದ ದಿನಗಳಲ್ಲಿ ಘಟಕ ಕೆಟ್ಟ ಸ್ಥಿತಿಯಲ್ಲಿದೆ. ಗ್ರಾಮಸ್ಥರು ಬೇರೆ ಊರಿಗೆ ಹೋಗಿ ನೀರು ತರುತ್ತಿದ್ದಾರೆ. ಅಧಿಕಾರಿಗಳು ಶುದ್ಧ ನೀರಿನ ಘಟಕ ಶೀಘ್ರ ದುರಸ್ತಿ ಮಾಡಿಸಬೇಕು.
– ಬಸವರಾಜ ಪುಂಡಿಕಟಗಿ, ಗ್ರಾಮಸ್ಥ
-ಚಂದ್ರಶೇಖರ ಹಡಪದ