ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮೊದಲ ಅಧಿಕಾರ ಅವ ಧಿಯಲ್ಲಿಯೇ ಕೊಪ್ಪಳ ಜಿಲ್ಲೆಗೆ ಘೋಷಣೆ ಮಾಡಿರುವ “ಉಡಾನ್ ಯೋಜನೆ’ ವರ್ಷಗಳು ಕಳೆದರೂ ವಿಮಾನಯಾನ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಎಂಎಸ್‌ಪಿಎಲ್ ಒಪ್ಪದೇ ಇರುವುದಕ್ಕೆ ಇಷ್ಟೆಲ್ಲ ಅಡೆತಡೆಯಾಗುತ್ತಿದ್ದು, ಯೋಜನೆಗೆ ಸಹಕರಿಸದ ಕಂಪನಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಕಡಿತ ಮಾಡುವ ಪ್ರಯತ್ನ ನಡೆಸಿದೆ.
ಹೌದು, ಪ್ರಧಾನಿ ಮೋದಿ ಕನಸಿನಂತೆ ಸಾಮಾನ್ಯ ವ್ಯಕ್ತಿಯು ವಿಮಾನದಲ್ಲಿ ಪ್ರಯಾಣ ನಡೆಸಬೇಕು. ಶ್ರೀಮಂತರಿಗೆ ದೊರೆಯುವ ವಿಮಾನ ಸೇವೆ ಸಾರ್ವಜನಿಕರಿಗೂ ಎಟುಕುವಂತೆ ಮಾಡಲು ತಮ್ಮ ಸರ್ಕಾರದ ಮೊದಲ ಅಧಿಕಾರವಧಿ ಯಲ್ಲಿಯೇ ರಾಜ್ಯದ ಹಲವು ನಗರಗಳಿಗೆ ಉಡಾನ್ ಯೋಜನೆ ಘೋಷಣೆ ಮಾಡಿದೆ.
ಯೋಜನೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆ ಗಳಲ್ಲಿ ಉಡಾನ್ ಯೋಜನೆಯಡಿ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಕೊಪ್ಪಳ ಜಿಲ್ಲೆ ಜನರಿಗೆ ಮಾತ್ರ ಆ ಸೇವೆ ದೊರೆಯುತ್ತಿಲ್ಲ. ಪ್ರಮುಖವಾಗಿ ವಿಮಾನಯಾನ ಸೇವೆ ಆರಂಭಿಸಬೇಕೆಂದರೆ ನೂರಾರು ಎಕರೆ ಪ್ರದೇಶದ ಭೂಮಿ ಬೇಕು. ಆದರೆ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಆರಂಭಿಸಿದ್ದರಿಂದ ಕೊಪ್ಪಳದಲ್ಲಿ ಎಂಎಸ್‌ಪಿಎಲ್ ಒಡೆತನದಲ್ಲಿನ ಸ್ವಂತ ಲಘು ವಿಮಾನ ನಿಲ್ದಾಣವಿದೆ. ಇದಕ್ಕೆ ಎಂಎಸ್‌ಪಿಎಲ್ ಕಂಪನಿ ವಿಮಾನ ಸೇವೆ ಆರಂಭಿಸಲು ಸರ್ಕಾರದೊಂದಿಗೆ ಒಪ್ಪಂದ ಮಾಡಿ ಜನ ಸಾಮಾನ್ಯರಿಗೆ ಸೇವೆ ಕೊಡಬೇಕಿದೆ.
ಅನುದಾನದ ಕಥೆ ಏನು?: ಆದರೆ, ಕಂಪನಿಯು ಸರ್ಕಾರದೊಂದಿಗೆ ಒಡಂಬಡಿಕೆಗೆ ಹಿಂದೇಟು ಹಾಕುತ್ತಿದೆ. ಈ ಹಿಂದಿನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಅಧಿಕಾರ ಉಡಾನ್ ಯೋಜನೆ ಕಾರ್ಯಗತಗೊಳಿಸಲು ಪ್ರಯತ್ನಿಸಲಿಲ್ಲ. ಇನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಹ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಯೋಜನೆ ಜಾರಿಯಾಗಲಿದೆ ಎನ್ನುತ್ತಿದ್ದರು. ವಿಮಾನಯಾನ ಆರಂಭ ಮಾಡಲು, ನಿಲ್ದಾಣಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಮೊದಲು ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕು. ನಂತರ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ವೆಚ್ಚ ಮಾಡಿರುವ ಅನುದಾನವನ್ನು ಪುನಃ ಬಿಡುಗಡೆ ಮಾಡಲಿದೆ. ಆಗ ಸಂಸದರು ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಎಂದು ಇದೇ ಕಾರಣ ಹೇಳುತ್ತಲೇ ಬರುತ್ತಿದ್ದರು. ಪ್ರಸ್ತುತ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿವೆ. ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ಯೋಜನೆ ಜಾರಿ ಮಾಡಬೇಕಿದೆ.
ಅಧಿಕಾರಿಗಳ ಆಟ: ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಘೋಷಣೆ ಮಾಡಿರುವ ಉಡಾನ್ ಯೋಜನೆಯು ಹಲವು ಜಿಲ್ಲೆಯಲ್ಲಿ ಆರಂಭಗೊಂಡಿದೆ. ಕೊಪ್ಪಳದಲ್ಲಿ ಮಾತ್ರ ವಿಮಾನ ಹಾರಾಟ ನಡೆಸುತ್ತಿಲ್ಲ. ಕಂಪನಿ ಸಹಿತ ಕೊಪ್ಪಳದಿಂದ 120 ಕಿಮೀ ದೂರದಲ್ಲಿ ಹುಬ್ಬಳ್ಳಿಯಿದೆ. 70-80 ಕಿಮೀ ಬಳ್ಳಾರಿಯ ಜಿಂದಾಲ್‌ನಲ್ಲಿ ವಿಮಾನಯಾನ ಸೇವೆಯಿದೆ. ಕೊಪ್ಪಳದಲ್ಲಿ ಅವಶ್ಯಕತೆಯಿಲ್ಲ ಎನ್ನುವ ರಾಗ ತೆಗೆಯುತ್ತಿದೆ. ರಾಜ್ಯದಲ್ಲಿನ ಉನ್ನತ ಅಧಿಕಾರಿಗಳ ತಲೆಯಲ್ಲೂ ಇದೇ ವಿಷಯ ಇರುವುದರಿಂದ ಯೋಜನೆಗೆ ಮಂಕು ಬಡಿದಿದೆ.
ಪ್ರಸ್ತುತ ಎಂಎಸ್‌ಪಿಎಲ್ ಕಂಪನಿ ಸ್ಥಳೀಯ ಜಮೀನು ತೆಗೆದುಕೊಂಡು, ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡು ಇಲ್ಲಿಯ ಜನರಿಗೆ ಸರ್ಕಾರದ ಯೋಜನೆ ಸಿಗುವಂತೆ ಮಾಡದೇ ಇರುವುದಕ್ಕೂ ಸರ್ಕಾರದ ಮಟ್ಟದಲ್ಲಿ ಮುನಿಸಿದೆ. ಹಾಗಾಗಿ ಕಂಪನಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಡಿತ ಮಾಡುವ ಪ್ರಯತ್ನವೂ ನಡೆದಿದೆಯಂತೆ. ಜಿಲ್ಲಾಡಳಿತದಿಂದಲೂ ಸರ್ಕಾರಕ್ಕೆ ಪತ್ರ ಬರೆದಿರುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಸರ್ಕಾರ ಹಿಂದುಳಿದ ಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಪ್ಪಳ ಜಿಲ್ಲೆಗೆ ಘೋಷಣೆಯಾಗಿರುವ ಉಡಾನ್ ಯೋಜನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಇಲ್ಲಿನ ಶಾಸಕ, ಸಂಸದರು ಮಾಡಬೇಕಿದೆ. ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ಯೋಜನೆ ಜಾರಿಗೆ ಪ್ರಯತ್ನಿಸಲೇಬೇಕಿದೆ.
ಉಡಾನ್ ಯೋಜನೆ ಜಾರಿಗೆ ಸ್ಥಳೀಯ ಎಂಎಸ್‌ಪಿಎಲ್ ಕಂಪನಿ ಒಪ್ಪುತ್ತಿಲ್ಲ. ನಮ್ಮದೇ ಸರ್ಕಾರ ಅಧಿ ಕಾರಕ್ಕೆ ಬಂದಿದೆ. ನಾನೂ ಅಧಿವೇಶನದಲ್ಲಿ ಪಾಲ್ಗೊಂಡಿದ್ದರಿಂದ ಉಡಾನ್ ಬಗ್ಗೆ ಗಮನಿಸಲಾಗಿಲ್ಲ. ಬೆಂಗಳೂರಿಗೆ ಹೊರಟಿದ್ದೇನೆ. ಸಿಎಂ ಸೇರಿ ಸಂಬಂಧಿಸಿದವನ್ನು ಭೇಟಿ ಮಾಡಿ ಯೋಜನೆ ಕಾರ್ಯಗತಕ್ಕೆ ಒತ್ತಡ ಹಾಕುತ್ತೇನೆ. ಸರ್ಕಾರ ಸಹ ಉಡಾನ್ ಗೆ ಸಹಕಾರ ನೀಡದ ಎಂಎಸ್‌ಪಿಎಲ್ ಕಂಪನಿಗೆ ನೀಡುವ ಸೌಲಭ್ಯ ಕಡಿತಕ್ಕೆ ಮುಂದಾಗುತ್ತಿದೆ. –
ಸಂಗಣ್ಣ ಕರಡಿ, ಸಂಸದ
-ದತ್ತು ಕಮ್ಮಾರ