Advertisement

ಲಸಿಕೆ ನೀಡಿಕೆಗೆ ಕಾಲ ಮಿತಿ ಇಲ್ಲ : ವರ್ಷಾಂತ್ಯಕ್ಕೆ ಪೂರ್ತಿಗೊಳ್ಳುವ ವಿಶ್ವಾಸ

07:24 AM Jul 24, 2021 | Team Udayavani |

ಹೊಸದಿಲ್ಲಿ: ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ವರಿಗೆ ಲಸಿಕೆ ನೀಡಿ, ಮುಕ್ತಾಯಗೊಳಿಸುವುದಕ್ಕೆ ನಿಗದಿತ ಕಾಲಮಿತಿ ಹಾಕಿಕೊಳ್ಳಲಾಗಿಲ್ಲ. ಆದರೆ ವರ್ಷಾಂತ್ಯದ ಒಳಗಾಗಿ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ತಲಪುವ ವಿಶ್ವಾಸವನ್ನು ಸರಕಾರ ಹೊಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಡಾ|ಭಾರತಿ ಪ್ರವೀಣ್‌ ಪವಾರ್‌ ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. ವಯನಾಡ್‌ನ‌ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಮತ್ತು ಟಿಎಂಸಿಯ ಸಂಸದೆ ಮಾಲಾ ರಾಯ್‌ ಕೇಳಿದ್ದ ಪ್ರಶ್ನೆಗೆ ಸಚಿವೆ ಈ ಮಾಹಿತಿ ನೀಡಿದ್ದಾರೆ.

Advertisement

ಕೊರೊನಾದ ಬದಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಲಸಿಕೆ ನೀಡಿ ಪೂರ್ತಿಗೊಳಿಸುವುದಕ್ಕೆ ಕಾಲಮಿತಿ ಹಾಕಿಕೊಳ್ಳಲಾಗದು. ಸದ್ಯ ಕೇಂದ್ರ ಗುರಿ ಹಾಕಿಕೊಂಡಿರುವ ಪ್ರಕಾರ ವರ್ಷಾಂತ್ಯಕ್ಕೆ ಮುಕ್ತಾಯವಾಗಲಿದೆ ಎಂದು ಪವಾರ್‌ ಹೇಳಿದ್ದಾರೆ.

9,725 ಕೋಟಿ: ಲಸಿಕೆ ಖರೀದಿ, ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವತಿಯಿಂದ ಇದುವರೆಗೆ 9,725.15 ಕೋಟಿ ರೂ. ಖರ್ಚು ಮಾಡ ಲಾಗಿದೆ. ವರ್ಷಾಂತ್ಯದ ವರೆಗೆ 135 ಕೋಟಿ ಡೋಸ್‌ ಲಸಿಕೆ ಬೇಕಾಗುತ್ತದೆ. 43.87 ಕೋಟಿ ಡೋಸ್‌ ಲಸಿಕೆಯನ್ನು ಇದುವರೆಗೆ ನೀಡಲಾಗಿದೆ ಎಂದು ಸಚಿವೆ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ. ಲಸಿಕೆ ಖರೀದಿಸುವಲ್ಲಿ ವಿಳಂಬ ವಾಗುತ್ತಿಲ್ಲ ಎಂದರು. ದೇಶದಲ್ಲಿನ ಒಟ್ಟು ಪ್ರಕರಣಗಳ ಪೈಕಿ ಶೇ.11ರಷ್ಟು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರದ್ದು ಎಂದೂ ಹೇಳಿದ್ದಾರೆ.

ಇದೇ ವೇಳೆ, ಮೇ 1ರಿಂದ ಜೂ.20ರ ಅವಧಿಯಲ್ಲಿ ದೇಶದಲ್ಲಿ ಲಸಿಕೆ ಹಾಕುವ ಪ್ರಮಾಣ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ. ಎಪ್ರಿಲ್‌ನಲ್ಲಿ 8.99 ಕೋಟಿ ಡೋಸ್‌ ಇದ್ದದ್ದು ಮೇ ನಲ್ಲಿ 6.10 ಕೋಟಿಗೆ ಇಳಿಕೆಯಾಗಿದೆ ಎಂದರು.

ಪ್ರಯೋಜನವಾಗಿಲ್ಲ
ಕೇಂದ್ರ ಸರಕಾರ ಎಲ್ಲರಿಗೂ ಉಚಿತ ಲಸಿಕೆ ಎಂದು ಘೋಷಣೆ ಮಾಡುವ ಮುನ್ನ ವಿವಿಧ ರಾಜ್ಯಗಳು ಅದಕ್ಕಾಗಿ ಜಾಗತಿಕ ಟೆಂಡರ್‌ ಕರೆದಿದ್ದವು. ಅದಕ್ಕೆ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಮಾಂಡವೀಯಾ ಹೇಳಿದರು. ಸೋಂಕಿ ನಿಂದಾಗಿ ರೈಲ್ವೇಯ 2,903 ಮಂದಿ ಉದ್ಯೋಗಿಗಳು ಅಸುನೀಗಿದ್ದಾರೆ. ಇದೇ ವೇಳೆ, ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 35,342 ಹೊಸ ಪ್ರಕರಣ ಮತ್ತು 483 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 4,19,470ಕ್ಕೆ ಇಳಿಕೆಯಾಗಿದ್ದು, ಚೇತರಿಕೆ ಪ್ರಮಾಣ ಶೇ.97.36ಕ್ಕೆ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next