Advertisement

ಪಕ್ಷ ವಿರೋಧಿಗಳಿಗೆ ಟಿಕೆಟ್ ಇಲ್ಲ: ಖಂಡ್ರೆ ಖಡಕ್‌ ಎಚ್ಚರಿಕೆ

09:13 AM Jun 30, 2019 | Team Udayavani |

ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದಂಥವರು ಎಷ್ಟೇ ಪ್ರಭಾವಿ ಆಗಿದ್ದರೂ ಅಂಥವರಿಗೆ ಮುಂಬರುವ ಪಾಲಿಕೆಯ ಚುನಾವಣೆಯಲ್ಲಿ ಟಿಕೆಟ್ ನೀಡಲ್ಲ. ಅಂಥವರ ಮೇಲೆ ಶಿಸ್ತು ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Advertisement

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಕಾರವಾರ ರಸ್ತೆಯ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರ ಮಹತ್ವದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ಪಕ್ಷದ ಮುಖಂಡರು ಹೇಳಿದರೂ ಟಿಕೆಟ್ ನೀಡಬಾರದೆಂದು ತೀರ್ಮಾನಿಸಲಾಗಿದೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿಷ್ಠೆಯಿಂದ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಹಾಗೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸುವ, ನಡೆ-ನುಡಿ, ಹಿನ್ನೆಲೆ, ಪಕ್ಷಕ್ಕೆ ಕೊಡುಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಂಥವರನ್ನು ಗುರುತಿಸಿ ಟಿಕೆಟ್ ನೀಡಲಾಗುವುದು. ನಾಯಕರ ಒತ್ತಡ ತಂತ್ರ ನಡೆಯಲ್ಲ ಎಂದರು.

ಪಕ್ಷಕ್ಕೆ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರಾದವರಿಗೆ ಟಿಕೆಟ್ ಕೊಡಲು ಸ್ಥಳೀಯ ಮುಖಂಡರು ತೀರ್ಮಾನಿಸಿದರೆ ಕೆಪಿಸಿಸಿ ಅದರಲ್ಲಿ ಹಸ್ತಕ್ಷೇಪ ಮಾಡಲ್ಲ. ಹು-ಧಾ ಪಾಲಿಕೆಯ 82 ಸ್ಥಾನಗಳಲ್ಲಿ ಕನಿಷ್ಠ 50 ಸ್ಥಾನ ಗೆಲ್ಲಬೇಕು. ಅಧಿಕಾರದಾಸೆ ಬಿಟ್ಟು ಗುರಿ ತಲುಪಲು ಪಕ್ಷದ ತತ್ವ-ಸಿದ್ಧಾಂತದಡಿ ಕಾರ್ಯ ಪ್ರವೃತ್ತರಾಗಿ, ಮನೆ ಮನೆಗೆ ತೆರಳಿ ಮತಯಾಚಿಸಿ ಎಂದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಪಕ್ಷಕ್ಕೆ 134 ವರ್ಷಗಳು ಇತಿಹಾಸವಿದ್ದು, ಧೃತಿಗೆಡುವ ಅವಶ್ಯಕತೆಯಿಲ್ಲ. ಸೋಲು- ಗೆಲುವು ಸಾಮಾನ್ಯ. ಧರ್ಮ, ಜಾತಿಗಳ ಮೇಲೆ ಅಪಪ್ರಚಾರ ಮಾಡುವುದು. ಐದು ವರ್ಷವಾದರೂ, ಯಾವುದೇ ಅಭಿವೃದ್ಧಿ ಮಾಡದಿದ್ದರೂ ಮತ್ತೆ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರೆ ಅದರ ಬಗ್ಗೆ ಹಾಗೂ ಹಿನ್ನಡೆ ಬಗ್ಗೆ ನಾವೆಲ್ಲ ಆಲೋಚಿಸಬೇಕಿದೆ. ಪಕ್ಷದ ಏಳ್ಗೆ ನಿಮ್ಮ ಮೇಲಿದೆ ಎಂದರು.

Advertisement

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದಂಥವರನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದ ಉಚ್ಚಾಟಿಸಬೇಕು. ಬೂತ್‌ಮಟ್ಟದಿಂದ ಪಕ್ಷ ಸಂಘಟಿಸಬೇಕು ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಹೊಂದಾಣಿಕೆ ರಾಜಕಾರಣ ಎಲ್ಲಿಯ ವರೆಗೆ ಇರುತ್ತದೋ ಅಲ್ಲಿಯವರೆಗೆ ಪಕ್ಷದ ಪರಿಸ್ಥಿತಿ ಸರಿಯಾಗಿರಲ್ಲ. ಪಕ್ಷದ ಕಾರ್ಯಕರ್ತರು ಅಧಿಕಾರಕ್ಕಾಗಿ ಹಪಹಪಿಸದೆ ತಳಮಟ್ಟದಿಂದ ಕೆಲಸ ಮಾಡಬೇಕು. ಪ್ರತಿ ಮನೆ ಮನೆಗೆ ಭೇಟಿಕೊಟ್ಟು ಭೂತ ಬಲಾಡ್ಯಗೊಳಿಸಬೇಕು ಎಂದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮುಖಂಡರಾದ ನಾಗರಾಜ ಛಬ್ಬಿ, ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಇಸ್ಮಾಯಿಲ್ ತಮಟಗಾರ, ಹನಮಂತಪ್ಪ ಅಲ್ಕೋಡ, ಮಹೇಂದ್ರ ಸಿಂಘಿ, ರಾಬರ್ಟ್‌ ದದ್ದಾಪೂರಿ, ನಾಗರಾಜ ಗುರಿಕಾರ, ಬಂಗಾರೇಶ ಹಿರೇಮಠ, ಮೋಹನ ಅಸುಂಡಿ, ನಾಗರಾಜ ಗೌರಿ, ತಾರಾದೇವಿ ವಾಲಿ, ದೇವಕಿ ಯೋಗಾನಂದ, ದ್ರಾಕ್ಷಾಯಿಣಿ ಬಸವರಾಜ, ಪ್ರಕಾಶ ಕ್ಯಾರಕಟ್ಟಿ, ಮಹೇಂದ್ರ ಸಿಂಘಿ, ವೇದವ್ಯಾಸ ಕೌಲಗಿ, ಬಶೀರ ಗುಡಮಾಲ್, ಅಲ್ತಾಫ ಕಿತ್ತೂರ, ಮಂಜುನಾಥ ಚಿಂತಗಿಂಜಲ್, ರಾಜು ಎಚ್.ಎಂ., ಪ್ರಕಾಶ ಹಳ್ಯಾಳ, ನವೀದ್‌ ಮುಲ್ಲಾ, ಮಹೆಮೂದ್‌ ಕೊಳೂರ, ಸಾಗರ ಹಿರೇಮನಿ, ಗನಿ ವಲಿಅಹ್ಮದ, ಬಸವರಾಜ ಕಿತ್ತೂರ, ಕುಮಾರ ಕುಂದನಹಳ್ಳಿ, ಬಸವರಾಜ ಮಲಕಾರಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next