ಮೈಸೂರು: ಜಾತ್ಯತೀತ ಜನತಾದಳ(ಜೆಡಿಎಸ್)ವನ್ನು ಎಲ್ಲ ರೀತಿಯಿಂದಲೂ ನಾವು ಗೌರವದಿಂದ ಕಾಣುತ್ತೇವೆ. ನಮ್ಮ ಮೈತ್ರಿಗೆ ಯಾವುದೇ ರೀತಿಯಲ್ಲೂ ಧಕ್ಕೆ ಆಗದಂತೆ ನಾವು ನಡೆದುಕೊಳ್ಳುತ್ತೇವೆಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ಜತೆಗೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆಯೂ ವಿಸ್ತೃತ ಚರ್ಚೆಯಾಗಿದೆ ಎಂದರು.
ರಾಜ್ಯದಲ್ಲಿ ಎಲ್ಲ 28 ಸ್ಥಾನ ಗೆಲ್ಲಲು ಏನು ತಂತ್ರಗಾರಿಗೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಜತೆಗೆ ನಾನು ಹೇಳಿದ ಅಂಕಿ ಅಂಶ ಸುಳ್ಳಾದರೆ ರಾಜಕೀಯ ನಿವೃತ್ತಿ ಎಂಬ ಹೇಳಿಕೆಯನ್ನೂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ, ಅವರ ರಾಜಕೀಯ ಜೀವನ ಮುಗಿಯುವ ಹಂತಕ್ಕೆ ಬಂದಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರು ಆ ಹೇಳಿಕೆ ಕೊಟ್ಟಿದ್ಧಾರೆ ಅಷ್ಟೇ ಎಂದು ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ದಿಲ್ಲಿ ಪ್ರತಿಭಟನೆ ದುರುದ್ದೇಶಪೂರಿತ. ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ಈ ವಿಷಯವೂ ಚರ್ಚೆಯಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ವಸ್ತುಸ್ಥಿತಿಯನ್ನು ಜನರ ಮುಂದಿಡಬೇಕು ಎಂಬ ತೀರ್ಮಾನವಾಗಿದೆ ಎಂದರು.
ಲೋಕಸಭೆ ಚುನಾವಣೆಗೆ ರೋಡ್ ಮ್ಯಾಪ್ ರೆಡಿ ಮಾಡಲು ಅಮಿತ್ ಶಾ ಸೂಚನೆ ನೀಡಿದ್ದು, ಲೋಕಸಭಾ ಚುನಾವಣೆಗೆ ಅಜೆಂಡಾ ಹಾಗೂ ಟಾರ್ಗೆಟ್ ಸೆಟ್ ಆಗಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟುವಂತೆ ಮಾಡುವುದು ನಮ್ಮ ಅಜೆಂಡಾವಾದರೆ, 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲ್ಲಬೇಕು ಎನ್ನುವುದು ಟಾರ್ಗೆಟ್ ಆಗಿದೆ.
– ಸಿ.ಟಿ. ರವಿ, ಮಾಜಿ ಸಚಿವ