ಕಲಬುರಗಿ: ಉಪಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಅನ್ನೋ ಶಕ್ತಿ ನಮ್ಮಲ್ಲಿಲ್ಲ. ಐದಾರು ಕ್ಷೇತ್ರಗಳಲ್ಲಿ ಹೆಚ್ಚಿನ ಪೈಪೋಟಿ ನೀಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಬೆಳಗಾವಿ ವಿಭಾಗ ಮತ್ತು ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಪರ್ಧೆ ನೀಡುತ್ತೇವೆ. ಎಲ್ಲ ಕಡೆ ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೇವೆ. ಗೆಲವು ಸೋಲು ನಮ್ಮ ಕೈಯಲ್ಲಿಲ್ಲ ಎಂದರು.
ಅನೇಕ ಅನರ್ಹ ಶಾಸಕರೇ ಸಿದ್ದರಾಮಯ್ಯರತ್ತ ಬೊಟ್ಟು ಮಾಡಿದ್ದಾರೆ. ನೀವೇ ನಮಗೆ ಹೋಗಿ ಅಂತ ಹೇಳಿ, ನೀವೇ ನಮಗೆ ಅನರ್ಹರು ಅಂತ ಹೇಳ್ತಿದ್ದೀರಿ ಎಂದು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಯಡಿಯೂರಪ್ಪ ಸರ್ಕಾರಕ್ಕೆ ಅಪಾಯವಾಗಲಾರದು ಎಂದನಿಸುತ್ತದೆ. ನಾವು ಮತ್ತು ಕಾಂಗ್ರೆಸ್ ಒಂದಾಗದೇ ಇರೋದರಿಂದಾಗಿ ಅಪಾಯವಾಗಲಾರದು ಅಂತ ಅನ್ಸುತ್ತೆ ಎಂದ ದೇವೇಗೌಡರು ಹೇಳಿದರು.
ನಾವಂತೂ ಮಧ್ಯಂತರ ಚುನಾವಣೆಗೆ ಹೋಗೋ ವಿಚಾರದಲ್ಲಿಲ್ಲ. ಉಪ ಚುನಾವಣೆ ಫಲಿತಾಂಶದಿಂದ ಮಧ್ಯಂತರ ಚುನಾವಣೆ ಬರೋದಿಲ್ಲ. ಆದರೆ ಬಿಜೆಪಿಯ ಆಂತರಿಕ ಕಚ್ಚಾಟ ಹೆಚ್ಚಾಗಿ ಬಂದ್ರೆ ನನಗೆ ಗೊತ್ತಿಲ್ಲ ಎಂದರು.
ಜೆಡಿಎಸ್ ಬಿಜೆಪಿ ಬಿ-ಟೀಮ್ ಅಂತ ರಾಹುಲ್ ಗಾಂಧಿ ಬಾಯಿಯಿಂದ ಹೇಳಿಸಿದರು. ಅವರು ಹೇಳದಿದ್ದರು ಚೀಟಿ ಕೊಟ್ಟು ಹೇಳಿಸಿದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ನಾನು ಮಾಜಿ ಪ್ರಧಾನಿ ಆಗಿದ್ದೇನೆ. ಜೊತೆಗೆ ಸೋತಿದ್ದೇನೆ. ಸನ್ನಿವೇಶದ ಒತ್ತಡದಿಂದ ತುಮಕೂರಿನಲ್ಲಿ ಸ್ಪರ್ಧಿಸಿದ್ದೆ. ಸೋಲಿಗೆ ಯಾರನ್ನು ಹೊಣೆಗಾರನನ್ನು ಮಾಡೋದಿಲ್ಲ ಆದರೆ, ಸೋತಾಗ ನನಗೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ದೇವೇಗೌಡರು ಹೇಳಿದರು.