Advertisement

ಪರೀಕ್ಷೆ ಇಲ್ಲದೇ ತೇರ್ಗಡೆ: ಗೊಂದಲ ಬೇಡ

11:46 PM Mar 28, 2021 | Team Udayavani |

ಶೈಕ್ಷಣಿಕ ವಿಚಾರದಲ್ಲಿ ಕೊರೊನಾ ಸಂದರ್ಭವೂ ಸೇರಿದಂತೆ ಕಳೆದ ವರ್ಷ ಅನುಸರಿಸಲಾಗಿದ್ದ ಗೊಂದಲಗಳೇ ಈ ವರ್ಷವೂ ಮುಂದುವರಿದಿವೆ. ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ| ಕೆ.ಸುಧಾಕರ್‌ ಅವರು, ರವಿವಾರ ಬೆಳಗ್ಗೆ ಒಂದರಿಂದ ಒಂಬತ್ತನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ಪಾಸ್‌ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದರು. ಆದರೆ ಸಂಜೆ ವೇಳೆಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಇಂಥ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿ ಮತ್ತೆ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ.

Advertisement

ಕಳೆದೊಂದು ತಿಂಗಳಿನಿಂದೀಚೆಗೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ ಸೋಂಕಿನ ಪ್ರಸರಣದ ತೀವ್ರತೆ ಹೆಚ್ಚಾಗಿದೆ. ಮುಂದಿನ ಒಂದೂವರೆ ತಿಂಗಳ ಕಾಲ ಸೋಂಕಿನ ತೀವ್ರತೆ ಇದೇ ಗತಿಯಲ್ಲಿ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಷ್ಟು ಮಾತ್ರವಲ್ಲದೆ ಇದು ರೂಪಾಂತರಿತ ಸೋಂಕು ಎಂಬುದು ಖಚಿತವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ.

ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿ ದ್ದರೂ ಹಾಲಿ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ತೆರೆದು ತರಗತಿ ಆರಂಭಿಸುವುದನ್ನು ಒಂದು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದ ರಾಜ್ಯ ಸರಕಾರ ಅದರಂತೆ 5ನೇ ತರಗತಿಯಿಂದ ಮೇಲ್ಪಟ್ಟ ಎಲ್ಲ ತರಗತಿಗಳನ್ನು ಹಂತಹಂತವಾಗಿ ಆರಂಭಿಸಿತ್ತು. ಎಲ್ಲ ಗೊಂದಲಗಳ ಮಧ್ಯೆಯೂ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಯನ್ನೂ ನಡೆಸಿತ್ತು. ಶಾಲೆಗಳ ಮಟ್ಟದಲ್ಲಿಯೂ ಒಂದರಿಂದ ಒಂಬತ್ತನೇ ತರಗತಿವರೆಗೆ ಪರೀಕ್ಷೆಗಳನ್ನು ನಡೆಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.

ಇದರ ನಡುವೆಯೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ಈಗಾಗಲೇ ಹಬ್ಬ, ಹರಿದಿನಗಳ ಮೇಲೆ ಸರಕಾರ ನಿರ್ಬಂಧ ಹಾಕಿದೆ. ಜಾತ್ರೆಗಳಲ್ಲಿಯೂ ಹೆಚ್ಚು ಜನ ಸೇರಬಾರದು ಎಂದೂ ಹೇಳಿದೆ. ಹಾಗೆಯೇ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಸಾಮಾಜಿಕ ಅಂತರ ಪಾಲನೆ ಮಾಡುವಂತೆಯೂ ಸೂಚಿಸಿದೆ.
ಸೋಂಕು ಹೆಚ್ಚುತ್ತಿರುವಂತೆಯೇ ಪರೀಕ್ಷೆ ರದ್ದು ಮಾಡುವ ವಿಚಾರ ಮುನ್ನೆಲೆಗೆ ಬಂದಿರುವುದು ಸಮಯೋಚಿತ ವಿಚಾರವೇ. ಸದ್ಯ ಕೊರೊನಾ ಹಿಡಿತಕ್ಕೆ ತುತ್ತಾಗದಂತೆ ಮಕ್ಕಳನ್ನು ನೋಡಿಕೊಳ್ಳುವುದು ಅತೀ ಮುಖ್ಯ ವಿಚಾರ. ಅದರಲ್ಲೂ 18 ವರ್ಷ ಒಳಗಿನವರಿಗೆ ಇನ್ನೂ ಲಸಿಕೆಯನ್ನೂ ಪರಿಚಯಿಸಿಲ್ಲ. ಇಂಥ ಹೊತ್ತಿನಲ್ಲಿ ಮಕ್ಕಳ ಪರೀಕ್ಷೆ ರದ್ದು ಮಾಡುವುದು ಉತ್ತಮ ನಿರ್ಧಾರವಾಗುತ್ತದೆ.

ಒಂದು ವೇಳೆ ರಾಜ್ಯ ಸರಕಾರ ಅವಧಿಗೆ ಮುನ್ನವೇ ಬೇಸಗೆ ರಜೆ ಘೋಷಣೆ ಮಾಡಿದಲ್ಲಿ ಮತ್ತು ಕೊರೊನಾ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದಲ್ಲಿ ಮುಂದಿನ ಶೈಕ್ಷಣಿಕ ವರ್ಷವು ಅವಧಿಗೆ ಮುನ್ನವೇ ಪ್ರಾರಂಭವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಮುಂದಿನ ವರ್ಷದ ಪಠ್ಯ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕಳೆದ ಬಾರಿಯಂತೆ ರೇಡಿಯೋ, ಟಿವಿ ವಾಹಿನಿಗಳ ಮೂಲಕ ಪಠ್ಯ ಸಂಬಂಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದಲ್ಲಿ ಮಕ್ಕಳು ಶೈಕ್ಷಣಿಕವಾಗಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next