Advertisement

ರುಚಿಸುತ್ತಿಲ್ಲ ಇಂದಿರಾ ಕ್ಯಾಂಟೀನ್‌

10:16 AM Jul 31, 2018 | |

ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಲೋಪ-ದೋಷ ಸರಿಪಡಿಸಲು ಸಮಿತಿ ರಚಿಸಲು ಬಿಬಿಎಂಪಿ ಮುಂದಾಗಿದೆ. ಇತ್ತೀಚೆಗೆ ಕ್ಯಾಂಟೀನ್‌ಗಳಲ್ಲಿನ ಆಹಾರದ ಗುಣಮಟ್ಟ, ರುಚಿ ಕುರಿತು ದೂರುಗಳು ಬರುತ್ತಿವೆ. ಜತೆಗೆ ಇಂದಿರಾ ಕ್ಯಾಂಟೀನ್‌ ಹೆಸರಿನಲ್ಲಿ ಅವ್ಯವಹಾರ ನಡೆಯುತ್ತಿದ್ದು, ಕಡಿಮೆ ಜನರಿಗೆ ಆಹಾರ ವಿತರಿಸಿ, ಹೆಚ್ಚಿನ ಬಿಲ್‌ ಪಡೆಯಲಾಗುತ್ತಿದೆ ಎಂಬ ಆರೋಪಗಳ ಕುರಿತು ಸದಸ್ಯರು ವಿಷಯ ಪ್ರಸ್ತಾಪಿಸಿದಾಗ, ಈ ಬಗ್ಗೆ ಸಮಿತಿ ರಚಿಸಿ ಕ್ಯಾಂಟೀನ್‌ಗಳ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಸಂಪತ್‌ರಾಜ್‌ ಭರವಸೆ ನೀಡಿದರು. 

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ಬಡವರಿಗಾಗಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಒಂದು ವರ್ಷದಿಂದ ಸಮರ್ಪಕವಾಗಿ ನಡೆಯುತ್ತಿದ್ದು, ಗುತ್ತಿಗೆದಾರರ ಬಾಕಿ ಬಿಲ್‌ ಕೂಡಲೇ ಪಾವತಿಸಬೇಕು. ಜತೆಗೆ ಇಂದಿರಾ ಕ್ಯಾಂಟೀನ್‌ ಊಟದ ವಿಷಯದಲ್ಲಿ ಕೇಳಿಬರುತ್ತಿರುವ ಆರೋಪಗಳಿಗೆ ಆಯುಕ್ತರು ಉತ್ತರಿಸಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಮೇಯರ್‌, ಕ್ಯಾಂಟೀನ್‌ಗಳಲ್ಲಿ ಊಟ ಉತ್ತವಾಗಿದೆ. ಆಯುಕ್ತರು ಹಲವು ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಆಹಾರ ಸೇವಿಸುವ ಮೂಲಕ ಗುಣಮಟ್ಟ ಪರಿಶೀಲಿಸುತ್ತಿದ್ದಾರೆ ಎಂದರು. ಮಧ್ಯ ಪ್ರವೇಶಿಸಿದ ಪದ್ಮನಾಭರೆಡ್ಡಿ, ಇಂದಿರಾ ಕ್ಯಾಂಟೀನ್‌ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಸರ್ಕಾರದಿಂದ ಇನ್ನೂ ಸಾವಿರ ಕ್ಯಾಂಟೀನ್‌ಗಳನ್ನು ನಿರ್ಮಿಸಿದರೂ ನಮ್ಮ ಬೆಂಬಲಿದೆ. ಆದರೆ, ತಿಂಡಿ- ಊಟಗಳ ಅಂಕಿ-ಸಂಖ್ಯೆ ಕುರಿತು ಅನುಮಾನವಿದೆ.

ಕ್ಯಾಂಟೀನ್‌ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಬೇಕಿದೆ ಎಂದು ಆಗ್ರಹಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಜರ್ಮನಿಯ ಟಿವಿಯೊಂದು ವಿಶ್ವದ ಉತ್ತಮ ಹೋಟೆಲ್‌ ವ್ಯವಸ್ಥೆ ಕುರಿತು 26 ನಿಮಿಷಗಳ ಸಾಕ್ಷ್ಯಚಿತ್ರ ತಯಾರಿಸಿದೆ. ಅದರಲ್ಲಿ ಇಂದಿರಾ ಕ್ಯಾಂಟೀನ್‌ ಕುರಿತು 6 ನಿಮಿಷಗಳ ವರದಿ ಇದ್ದು, ಉತ್ತಮ ಕ್ಯಾಂಟೀನ್‌ ವ್ಯವಸ್ಥೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
 
ಪ್ರತಿ ಕ್ಯಾಂಟಿನ್‌ಗೆ ತಿಂಗಳಿಗೆಷ್ಟು ಆಹಾರ ಬೇಕೆಂದು ಮಾಹಿತಿ ಪಡೆದು ಅಷ್ಟು ಪ್ರಮಾಣದ ಆಹಾರ ಸರಬರಾಜು ಮಾಡಲಾಗುತ್ತದೆ. ಒಂದೊಮ್ಮೆ ಆಹಾರ ಉಳಿದರೆ ಗುತ್ತಿಗೆದಾರರಿಗೆ ನಷ್ಟ ಆಗಬಾರದೆಂಬ ಉದ್ದೇಶದಿಂದ ಪೂರ್ಣ ಹಣ ಪಾವತಿಸಲಾಗುತ್ತಿದೆ. ಇದರಲ್ಲಿ ಯಾವುದೇ ಲೋಪವಿಲ್ಲ. ಪಾಲಿಕೆ ಸದಸ್ಯರು ಸಲಹೆ ನೀಡಿದರೆ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು. ಮೇಯರ್‌ ಸ್ಪಂದಿಸಿ, ಕ್ಯಾಂಟಿನ್‌ ಲೋಪಗಳನ್ನು ಸರಿಮಾಡಲು, ಎಲ್ಲ ಪಕ್ಷಗಳ ಸದಸ್ಯರ ಸಮಿತಿ ರಚಿಸಿ, ತಿಂಗಳೊಳಗೆ ವರದಿ ತರಿಸಿಕೊಂಡು ಕ್ಯಾಂಟಿನ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತೇವೆ ಎಂದರು.

ಕಟ್ಟಡಗಳ ಪರಿಶೀಲನೆ: ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ ವಿಷಯ ಪ್ರಸ್ತಾಪಿಸಿ, ನಗರದಲ್ಲಿರುವ ಮೇಲ್ಸೇತುವೆ, ಅಂಡರ್‌ಪಾಸ್‌ ಹಾಗೂ ಪಾದಚಾರಿ ಸುರಂಗ ಮಾರ್ಗಗಳ ಗುಣಮಟ್ಟ ಪರಿಶೀಲನೆ ಆಗುತ್ತಿಲ್ಲ. ಗುಣಮಟ್ಟ ಕಾಪಾಡಿಕೊಳ್ಳದಿದ್ದರೆ ಅವು ದುರ್ಬಲ ವಾಗಲಿದ್ದು, ಮುಂದೊಂದು ದಿನ ಉರುಳಿ ಜನ ನೋವನುಭವಿಸಬೇಕು. ಹೀಗಾಗಿ ಗುಣಮಟ್ಟ ಪರಿಶೀಲನೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

Advertisement

ಅದಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥ ಪ್ರಸಾದ್‌, ಸರ್ಕಾರಿ ಕಟ್ಟಡಗಳ ಪರಿಶೀಲನೆಯನ್ನು ಸರ್ಕಾರವೇ ಮಾಡಬಹುದು. ಆದರೆ, ಖಾಸಗಿ ಕಟ್ಟಡಗಳ ಪರಿಶೀಲಿಸಲು ಪ್ರತ್ಯೇಕ ಮಾನದಂಡಗಳಿವೆ. ಮಂತ್ರಿಮಾಲ್‌ ಪ್ರಕರಣದಲ್ಲಿ ಅದೇ ಮಾದರಿ ಅನುಸರಿಸಲಾಗಿತ್ತು. ಪಾಲಿಕೆಯ ಅಂಡರ್‌ಪಾಸ್‌, ಮೇಲ್ಸೇತುವೆ ಹಾಗೂ ಹಳೆಯ ಕಟ್ಟಡಗಳ ಪರಿಶೀಲನೆಗೆ ಮೂರನೇ ವ್ಯಕ್ತಿಯ ಸಂಸ್ಥೆಯ ಸೇವೆ ಪಡೆಯುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.

ಸಂಸ್ಥೆ ಪರಿಶೀಲಿಸಿದ ರಸ್ತೆಗಳಲ್ಲಿ ಹೆಚ್ಚು ಗುಂಡಿ: ನಗರದಲ್ಲಿ ನಡೆಯುವ ಯೋಜನೆಗಳಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಯಾರು ನೀಡುತ್ತಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಒಂದೇ ಡಿಪಿಆರ್‌ ನ್ನು ಹಲವು ರಸ್ತೆಗಳಿಗೆ ನೀಡುತ್ತಿದ್ದು, ಮೂರನೇ ವ್ಯಕ್ತಿ ಸಂಸ್ಥೆ ಪರಿಶೀಲನೆ ಮಾಡಿದ ರಸ್ತೆಗಳಲ್ಲಿ ಹೆಚ್ಚು  ಗುಂಡಿಗಳಿವೆ. ಪರಿಶೀಲನೆ ನಡೆಸದೆಯೇ ಶಿವಮೊಗ್ಗ,
ಹುಬ್ಬಳಿ-ಧಾರವಾಡಗಳಲ್ಲಿ ಕುಳಿತು ಮೂರನೇ ವ್ಯಕ್ತಿ ಸಂಸ್ಥೆಗಳು ಸಹಿ ಹಾಕುತ್ತಿವೆ ಎಂದು ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಆರೋಪಿಸಿದರು.

ಪಾಲಿಕೆಯಲ್ಲಿನ ಯಾವ ಯೋಜನೆಗಳಿಗೆ ಡಿಪಿಆರ್‌ ಮಾಡಲಾಗಿದೆ? ಅದಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಕೊಡಿ. ಅಧಿಕಾರಿಗಳು ಆಯಾ ರಾಮ್‌ ಗಯಾ ರಾಮ್‌ ರೀತಿ ಕೆಲಸ ಮಾಡುತ್ತಿದ್ದು, ಮಾಹಿತಿ ಕೇಳಿ ಎರಡು ತಿಂಗಳಾದರೂ ಉತ್ತರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಬಿಬಿಎಂಪಿ ಮೂಲಕ ಕೈಗೊಳ್ಳುವ ಎಲ್ಲ ಕಾಮಗಾರಿಗಳ ವೆಚ್ಚ, ಗುತ್ತಿಗೆದಾರರ ಹೆಸರು, ಡಿಪಿಆರ್‌ ತಯಾರಿಸಿದ ದಿನಾಂಕ, ಕಾರ್ಯಾದೇಶ ನೀಡಿದ ದಿನಾಂಕ, ರಸ್ತೆ ಇತಿಹಾಸವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದರೆ ಮಾತ್ರ ಬಿಲ್‌ ಪಾವತಿಸುವುದಾಗಿ ಆದೇಶ ಹೊರಡಿಸಲಾಗಿದೆ ಎಂದರು.
 
ಆಟೋ ಟಿಪ್ಪರ್‌ಗಳ ಪರಿಶೀಲನೆ: ರಾಜರಾಜೇಶ್ವರಿನಗರ ಕ್ಷೇತ್ರದ ಜೆ.ಪಿ. ಉದ್ಯಾನ ವಾರ್ಡ್‌ ರೀತಿಯಲ್ಲೇ ಎಲ್ಲ ವಾರ್ಡ್‌ಗಳಲ್ಲೂ ಆಟೋ ಟಿಪ್ಪರ್‌ಗಳ ಪರಿಶೀಲನೆ ಮಾಡಲಾಗುವುದು. ನಿಯಮ ಉಲ್ಲಂಘಿಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಸಂಪತ್‌ ರಾಜ್‌ ತಿಳಿಸಿದರು.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವುದು ಸಾಮಾನ್ಯ. ನೀವು ಮೃಷ್ಟಾನ್ನ ತಿನ್ನಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ನಮಗೆ ಕೊನೆಪಕ್ಷ ಇಂದಿರಾ ಕ್ಯಾಂಟೀನ್‌ ಊಟವನ್ನಾದರೂ ಕೊಡಬೇಕಲ್ಲವೇ? ಆದರೆ, ಯಾವುದೇ ಅನುದಾನ ನೀಡಿದಿದ್ದರೆ, ನಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುವುದು ಹೇಗೆ? ಕೂಡಲೇ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು

ಪಾಲಿಕೆ ಸದಸ್ಯ ಹೇಳಿದ ಪರಾರಿ ಕಥೆ ಪಾಲಿಕೆ ಸಭೆಯಲ್ಲಿ ಯಶವಂತಪುರ ವಾರ್ಡ್‌ ಸದಸ್ಯ ಜಿ.ಕೆ.ವೆಂಕಟೇಶ್‌ ಹೇಳಿದ ಪರಾರಿ ಕಥೆ ಸದಸ್ಯರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ವಿಷಯ ಪ್ರಸ್ತಾಪಿಸಿದ ವೆಂಕಟೇಶ್‌, “ಕೊಳೆಗೇರಿಗಳಲ್ಲಿನ ಪಾಲಿಕೆ ಸಮುದಾಯ ಭವನ ಬಾಡಿಗೆಗೆ ದೊರೆಯದ ಕಾರಣ ಯುವಕನೊಬ್ಬ ಮತ್ತೂಬ್ಬರ ಹೆಂಡತಿಯನ್ನು ಓಡಿಸಿಕೊಂಡು ಹೋದ ಘಟನೆ ನಡೆದಿದೆ. ನನ್ನ ವಾರ್ಡ್‌ನಲ್ಲಿರುವ ಸಮುದಾಯ ಭವನಕ್ಕೆ 20 ಸಾವಿರ ರೂ. ಬಾಡಿಗೆ ಇದೆ. ಬಾಡಿಗೆ ಕಡಿಮೆ ಮಾಡುವಂತೆ ಕೋರಿದಾಗ, ಬಾಡಿಗೆಯನ್ನು 4 ಸಾವಿರ ರೂ. ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿಗೆ ಬಾಡಿಗೆ ಕಡಿಮೆಯಾದ ಬಳಿಕ ಮದುವೆಯಾಗಿ ಎಂದು ಸೂಚಿಸಿದ್ದೆ’.

“ಆದರೆ, ಹಲವು ತಿಂಗಳು ಕಳೆದರೂ ಬಾಡಿಗೆ ಕಡಿಮೆ ಮಾಡಿಲ್ಲ. ಇತ್ತ ನೋಡಿದರೆ ಆ ಯುವಕ ಮತ್ತೂಬ್ಬರ ಹೆಂಡತಿಯೊಂದಿಗೆ ಓಡಿ ಹೋಗಿ ದ್ದಾನೆ. ಯುವಕನ ಜತೆ ಪರಾರಿಯಾದ ಮಹಿಳೆಯ ಮಕ್ಕಳು ಬಂದು ಅಂಕಲ್‌ ನಮ್ಮ ಅಮ್ಮ ಎಲ್ಲಿ? ಅಂತಾರೆ, ನಾನು ಏನು ಉತ್ತರ ಕೊಡಲಿ. ಅತ್ತ ಹುಡುಗನ ಪೋಷಕರು ಬಾಡಿಗೆ ಕಡಿಮೆ ಆಗುತ್ತದೆ ಎಂದು ಹೇಳಿದ್ದಕ್ಕೆ ಹೀಗೆಲ್ಲ ಆಗಿದೆ ಎನ್ನುತ್ತಿ ದ್ದಾರೆ,’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮೇಯರ್‌, ಸಮುದಾಯ ಭವನ ಬಾಡಿಗೆ ಕಡಿಮೆ ಮಾಡಿಸುವ ಜವಾಬ್ದಾರಿ ನನ್ನದು. ಆದರೆ, ಉಳಿದ ವಿಚಾರಕ್ಕೆ ತಮ್ಮನ್ನು ಸೇರಿಸಬೇಡಿ ಎಂದು ಹೇಳಿದರು.

ಪಾಲಿಕೆಯಿಂದಲೇ ಜಿಪಿಎಸ್‌ ಅಳವಡಿಕ ತ್ಯಾಜ್ಯ ವಿಲೇವಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿರುವ ಆಟೋ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳಿಗೆ ಪಾಲಿಕೆಯಿಂದಲೇ “ಜಿಪಿಎಸ್‌’ ಅಳವಡಿಸಲು ತೀರ್ಮಾನಿಸಿದೆ.

ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು 100ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು ಹಾಗೂ 500ಕ್ಕೂ ಹೆಚ್ಚು ಆಟೋ ಟಿಪ್ಪರ್‌ಗಳ ಹೆಸರಿನಲ್ಲಿ ನಕಲಿ ಬಿಲ್‌ ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸುವಂತೆ ಪಾಲಿಕೆಯ ಅಧಿಕಾರಿಗಳು ಸೂಚನೆ ನೀಡಿದರೂ, ಗುತ್ತಿಗೆದಾರರು ಜಿಪಿಎಸ್‌ ಅಳವಡಿಸಲು ಮುಂದಾಗಿಲ್ಲ.

ಆ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಿರುವ ಎಲ್ಲ ಕಾಂಪ್ಯಾಕ್ಟರ್‌ ಹಾಗೂ ಆಟೋ ಟಿಪ್ಪರ್‌ಗಳಿಗೆ ಪಾಲಿಕೆಯಿಂದಲೇ ಜಿಪಿಎಸ್‌ ಅಳವಡಿಸುವಂತೆ ಆಯುಕ್ತರು ಸೂಚಿ ಸಿದ್ದು, ಪ್ರತಿ ವಾಹನಕ್ಕೆ ಜಿಪಿಎಸ್‌ ಅಳವಡಿಸಲು ವೆಚ್ಚವಾಗುವ 5 ಸಾವಿರ ರೂ.ಗಳನ್ನು ಗುತ್ತಿಗೆದಾರರ ಬಿಲ್‌ನಿಂದ ಕಡಿತಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next