Advertisement
ಏನಿದು ಪೇ ಬೈ ಕಾರ್?:ಇದುವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಕಾರಿಗೆ ಇಂಧನ ಹಾಕಿಸಿದ ಮೇಲೆ, ಸ್ಮಾರ್ಟ್ ಫೋನ್, ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಪಾವತಿ ಮಾಡಬೇಕಿತ್ತು. ನಗದು ಪಾವತಿಯಂತೂ ಹಿಂದಿನಿಂದಲೂ ಇದ್ದೇ ಇದೆ. ಅಮೆಜಾನ್-ಮಾಸ್ಟರ್‌ಕಾರ್ಡ್‌ನಡಿ ಬರುವ ಟೋನ್‌ಟ್ಯಾಗ್ ಸಂಸ್ಥೆ ಸಿದ್ಧಪಡಿಸಿರುವ ಪೇ ಬೈ ಕಾರ್ ಬಳಸಿದರೆ, ಇತರೆ ಯಾವುದೇ ಸಾಧನಗಳ ಅಗತ್ಯವಿರುವುದಿಲ್ಲ.
ಕಾರಿನ ಇನ್ಫೊಟೇನ್‌ಮೆಂಟ್ ಸಿಸ್ಟಮ್‌ನಲ್ಲಿ (ಡ್ಯಾಶ್‌ಬೋರ್ಡ್‌ನಲ್ಲಿರುವ ಡಿಜಿಟಲ್ ಪರದೆ, ಅದರ ಮೂಲಕ ಸಿನಿಮಾ ನೋಡಬಹುದು, ಜಿಪಿಎಸ್ ಕೂಡ ಬಳಸಬಹುದು) ಯುಪಿಐಯನ್ನು ಲಿಂಕ್ ಮಾಡಿರಬೇಕು. ನೀವು ಬಂಕ್‌ಗೆ ಹೋಗಿ ನಿರ್ದಿಷ್ಟ ತೈಲ ಪೂರೈಕೆ ಜಾಗದಲ್ಲಿ ನಿಂತಾಗ, ನಿಮ್ಮ ಇನ್ಫೊಟೇನ್‌ಮೆಂಟ್ ಸಿಸ್ಟಮ್‌ನಲ್ಲಿ ಇಂಧನ ಕೇಂದ್ರದ (ಫ್ಯೂಯೆಲ್ ಡಿಸ್ಪೆನ್ಸರ್) ಸಂಖ್ಯೆ ಕಾಣಿಸುತ್ತದೆ. ಅದೇ ವೇಳೆ ನೀವು ಬಂದಿದ್ದೀರೆಂದು ನಿಮ್ಮ ಕಾರಿನಲ್ಲಿರುವ ಸೌಂಡ್ ಬಾಕ್ಸ್ ತಿಳಿಸುತ್ತದೆ. ಆಗ ಸಿಬ್ಬಂದಿ ಬರುತ್ತಾರೆ, ನೀವು ಕಾರೊಳಗಿಂದಲೇ ಎಷ್ಟು ಮೊತ್ತಕ್ಕೆ ಇಂಧನ ಹಾಕಬೇಕೆಂದು ಒತ್ತುತ್ತೀರಿ. ಅದು ಧ್ವನಿಯ ರೂಪದಲ್ಲಿ ಹೊರಕ್ಕೆ ಕೇಳಿಸುತ್ತದೆ. ಅವರು ಅಷ್ಟು ಇಂಧನ ಹಾಕುತ್ತಾರೆ. ನೀವು ಈಗ ಲಿಂಕ್ ಆಗಿರುವ ಯುಪಿಐ ಮೂಲಕ ಪಾವತಿ ಮುಗಿಸುತ್ತೀರಿ. ಅಲ್ಲಿಗೆ ಸಂಪರ್ಕರಹಿತವಾಗಿ ಪೂರ್ಣ ಕ್ರಿಯೆಗಳು ಮುಗಿಯುತ್ತವೆ. ಈ ವ್ಯವಸ್ಥೆ ಮೂಲಕ ಫಾಸ್ಟಾಗ್ ರೀಚಾರ್ಜ್ ಕೂಡ ಮಾಡಬಹುದು.