ನವದೆಹಲಿ: ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜುಗಳಲ್ಲಿ ಹಿಂಬದಿ ಬಾಗಿಲಿನಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವುದನ್ನು ಮಾನ್ಯ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇದರೊಂದಿಗೆ, ಉತ್ತರ ಪ್ರದೇಶದ ಖಾಸಗಿ ವೈದ್ಯ ಕಾಲೇಜೊಂದರಲ್ಲಿ ದಾಖಲಾಗಿದ್ದ 67 ಎಂಬಿಬಿಎಸ್ ವಿದ್ಯಾರ್ಥಿಗಳ ದಾಖಲಾತಿಯನ್ನು ನ್ಯಾಯಪೀಠ ಅನೂರ್ಜಿತಗೊಳಿಸಿದೆ ಹಾಗೂ ಇದೇ ಪ್ರಕಣದಲ್ಲಿ ಕಳೆದ ವರ್ಷ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ Talibanಗೆ ಬೆಂಬಲ,ಭಾರತದ ವಿರುದ್ಧ ಟೀಕೆ:ಅಸ್ಸಾಂನಲ್ಲಿ 14 ಮಂದಿ ಸೆರೆ
ಉತ್ತರ ಪ್ರದೇಶದ ಈ ವಿದ್ಯಾರ್ಥಿಗಳು ಅಖೀಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಉತ್ತೀರ್ಣರಾಗಿದ್ದರೂ, ಉತ್ತರ ಪ್ರದೇಶ ಸರ್ಕಾರ ನಡೆಸುವ ಸಾಮಾನ್ಯ ವೈದ್ಯಕೀಯ ಪ್ರವೇಶ ಕೌನ್ಸಿಲಿಂಗ್‌ಗೆ ಹಾಜರಾಗಿರಲಿಲ್ಲ. ಅದನ್ನು ಬಿಟ್ಟು, ಖಾಸಗಿ ಕಾಲೇಜೊಂದರಲ್ಲಿ ಆಯೋಜಿಸಲಾಗಿದ್ದ ಕೌನ್ಸೆಲಿಂಗ್‌ಗೆ ಹಾಜರಾಗಿ ಆ ಮೂಲಕ ಪ್ರವೇಶ ಗಿಟ್ಟಿಸಿಕೊಂಡಿದ್ದರು.
ಈ ದಾಖಲಾತಿ ಕಾನೂನುಬಾಹಿರ ಎಂದು ಭಾರತೀಯ ವೈದ್ಯಕೀಯ ಕೌನ್ಸಿಲ್ (ಎಂಸಿಐ) ಆದೇಶಿಸಿತ್ತು. ಇದರ ವಿರುದ್ಧ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಕಳೆದ ವರ್ಷ, ಜು. 20ರಂದು ಎಂಸಿಐ ನೀಡಿದ್ದ ಆದೇಶವನ್ನು ಸುಪ್ರೀಂ ಎತ್ತಿ ಹಿಡಿದಿತ್ತು. ಆ ತೀರ್ಪಿನ ಮರುಪರಿಶೀಲನಾ ಅರ್ಜಿಯ ವಿಚಾರಣೆಯಲ್ಲೂ ಸುಪ್ರೀಂ ತನ್ನ ಹಿಂದಿನ ತೀರ್ಪನ್ನೇ ಪುನರುಚ್ಚರಿಸಿದೆ.