ವಾಡಿ: ಬಿಸಿಲು ಕಾವು ಏರುತ್ತಿದ್ದಂತೆ ಹಲವು ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗುತ್ತಿದ್ದು, ಬೋರ್‌ವೆಲ್ ನೀರು ಕುಡಿದು ಕೀಲು ನೋವು ಸಂಕಟಗಳೊಂದಿಗೆ ಗ್ರಾಮಸ್ಥರು ಬದುಕು ದೂಡುವಂತಾಗಿದೆ. ಪಟ್ಟಣ ಸಮೀಪದ ಹಳಕರ್ಟಿ, ಲಾಡ್ಲಾಪುರ ಗ್ರಾಮಗಳಿಗೆ ಕುಡಿಯುವ ಶುದ್ಧ ನೀರಿನ ಸಮಸ್ಯೆ ಎದುರಾಗಿದ್ದು, ತೆರೆದ ಬಾವಿ, ಕೊಳವೆ ಬಾವಿಗಳ ಕೊಳೆ ನೀರೆ ಗತಿಯಾಗಿದೆ.
ಬೋರ್‌ವೆಲ್‌ಗಳಿಂದ ಬರುವ ಲವಣ ಮಿಶ್ರಿತ ಉಪ್ಪು ನೀರು ಗಂಟಲು ಕೊರೆಯುತ್ತಿದೆ. ಬಾವಿಗಳ ಸವಳು ನೀರು, ದೇಹದ ಗೂಡಿಗೆ ರೋಗದ ಸಮಸ್ಯೆ ತಂದಿಡುತ್ತಿದೆ. ಹಳಕರ್ಟಿ ಗ್ರಾಮದ ವಿವಿಧ ಬಡಾವಣೆಗಳಿಗೆ ಶುದ್ಧೀಕರಿಸದ ಅಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ.
ಸ್ವಚ್ಚಗೊಳಿಸದ ಬಾವಿಗಳ ನೀರು ಹಸಿರುಪಾಚಿಯಿಂದ ಕೂಡಿದ್ದು, ಹುಳುಗಳು ಕಾಣಿಸಿಕೊಂಡಿವೆ. ಪ್ಲೋರಾಯಿಡ್ ಮಿಶ್ರಿತ ಬೋರ್ ವೆಲ್ ನೀರು ಸರಬರಾಜಿಗೆ ಬರವಿಲ್ಲ. ಸಾಕಾಗುವಷ್ಟು ನೀರು ಪೂರೈಕೆಯಾಗುತ್ತಿದೆ. ಆದರೆ ಆ ಉಪ್ಪು ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ.
ಕೆಲ ಬೋರ್‌ವೆಲ್ ಗಳಿಂದ ಸಿಹಿ ನೀರು ಬರುತ್ತಿದ್ದು, ಅಗತ್ಯಕ್ಕೆ ತಕ್ಕಷ್ಟು ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯತಿ ಆಡಳಿತ ವಿಫಲವಾಗಿದೆ ಎಂದು ಉಭಯ ಗ್ರಾಮಸ್ಥರು ದೂರಿದ್ದಾರೆ. ಲಾಡ್ಲಾಪುರ ಗ್ರಾಮದ ಬೀದಿಯ ನಳಗಳಿಂದ ನೀರು ಬೇಕಾಬಿಟ್ಟಿ ಪೋಲಾಗುತ್ತಿದ್ದು, ಜವಾಬ್ದಾರಿಯಿಂದ ಜಲ ರಕ್ಷಣೆಗೆ ಮುಂದಾಗಬೇಕಿದ್ದ ಗ್ರಾಪಂ ಅಧಿಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ನಿಷ್ಕಾಳಜಿ ತೋರುತ್ತಿದ್ದಾರೆ.
ಜಲಕ್ಷಾಮದ ಭೀಕರ ಪರಸ್ಥಿತಿ ಮಧ್ಯೆ ಜೀವಜಲದೊಂದಿಗೆ ಮಕ್ಕಳು ಆಟವಾಡುತ್ತಿರುವ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ನೀರು ಸರಬರಾಜು ನಿಯಮ ಪಾಲಿಸದ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೋರ್‌ವೆಲ್ ನೀರು ಬಳಕೆಗಾಗುತ್ತಿದ್ದು, ಕುಡಿಯಲು ನೀರಿಲ್ಲದಂತಾಗಿದೆ. ಶುದ್ಧ ನೀರಿನ ಭಾಗ್ಯ ನಮಗೇಕಿಲ್ಲ ಎಂಬ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸವವರೇ ಇಲ್ಲದಂತಾಗಿದೆ.
ಒಂದೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ನೀರು ಬೀದಿ ಪಾಲಾಗುತ್ತಿದೆ. ಜಾನುವಾರುಗಳು ಕುಡಿಯಲು ಹಿಂಜರಿಯುವ ಬೋರ್ ವೆಲ್‌ನ ಉಪ್ಪು ನೀರು ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕುಡಿಯಲು ಶುದ್ಧೀಕರಿಸಿದ ನೀರು ಸರಬರಾಜು ಮಾಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
* ಮಡಿವಾಳಪ್ಪ ಹೇರೂರ