ಕಾನ್ಪುರ: ಟೆಸ್ಟ್ ಪಂದ್ಯದ ಮೊದಲ ದಿನ ವಿವಾದವೊಂದು ಕಾಣಿಸಿಕೊಂಡು ಅನಂತರ ತಣ್ಣಗಾಗಿದೆ. ಬಾಂಗ್ಲಾದ ಹುಲಿ ವೇಷಧಾರಿ ಅಭಿಮಾನಿ “ಟೈಗರ್ ರಾಬಿ’ಗೆ ಕಾನ್ಪುರ ಪ್ರೇಕ್ಷಕರು ಥಳಿಸಿದ್ದಾರೆ, ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಅನಂತರ ಸ್ಪಷ್ಟನೆ ನೀಡಿದ ಪೊಲೀಸರು, “ರಾಬಿಗೆ ಪ್ರೇಕ್ಷಕರು ಹೊಡೆ ದಿಲ್ಲ. ನಿರ್ಜಲೀಕರಣದಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದಿದ್ದಾರೆ.
“ಸಿ’ ಸ್ಟಾಂಡ್‌ನಲ್ಲಿ ಬಾಂಗ್ಲಾದೇಶದ ಧ್ವಜ ಹಿಡಿದ ರಾಬಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಆದರೆ ಅಲ್ಲಿ ಏನು ನಡೆಯಿತು ಎಂಬ ಬಗ್ಗೆ ವರದಿಯಾಗಿಲ್ಲ. ಆರಂಭದಲ್ಲಿ ಮಾಧ್ಯಮದವರು ಮಾತಾಡಿಸಿದಾಗ, “ಸ್ಥಳೀಯ ಅಭಿ ಮಾನಿಗಳು ನನ್ನನ್ನು ಥಳಿಸಿ ಹಲ್ಲೆ ನಡೆಸಿದ್ದಾರೆ. ಹೊಟ್ಟೆಗೆ ಗುದ್ದಿದ್ದಾರೆ’ ಎಂದು ರಾಬಿ ಟೈಗರ್ ಹೇಳಿದ್ದರು.
ಹೊಟ್ಟೆ ಹಿಡಿದು ನರಳುತ್ತ ಹೊರಗೆ ಬಂಗಾದ ರಾಬಿಗೆ ಕುರ್ಚಿ ಕೊಟ್ಟು ಕೂರಿಸಿ ಉಪಚರಿಸಲಾಗಿತ್ತು. ಬಳಿಕ ಕುಸಿದು ಬಿದ್ದಾಗ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ಇದರ ವೀಡಿಯೊ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಹೇಳಿಕೆಯೊಂದನ್ನು ನೀಡಿದ ರಾಬಿ, “ನಾನು ಅನಾರೋಗ್ಯಕ್ಕೊಳಗಾಗಿದ್ದು, ಪೊಲೀಸರು ತನ್ನನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದಿದ್ದಾರೆ.
ರಾಬಿ ಮುನ್ಸೂಚನೆ
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದನ್ನು ಹಾಕಿದ್ದ ರಾಬಿ, “ಬಾಂಗ್ಲಾ ಬೆಂಬಲಿಗರನ್ನು ತಡೆಯುವ ಸಂಚು ನಡೆಯುತ್ತಿದೆ. ನಾವು ಹೊರಗೆ ಕುಳಿತಾದರೂ ತಂಡವನ್ನು ಬೆಂಬಲಿಸುತ್ತೇವೆ. ನನಗಿಲ್ಲಿ ಸಮಸ್ಯೆ ಎದುರಾಗುತ್ತದೆಂಬುದು ಗೊತ್ತು. ಇದನ್ನು ಎದುರಿಸಬಲ್ಲೆ’ ಎಂದಿದ್ದರು.