Advertisement

Bramavara: ಆಕಾಶವಾಣಿ ಜಂಕ್ಷನ್‌ ಗಾಯಕ್ಕೆ ಉಪ್ಪು ಸವರುವ ಖಾಸಗಿ ಬಸ್‌ಗಳು!

07:15 PM Sep 11, 2024 | Team Udayavani |

ಬ್ರಹ್ಮಾವರ: ಇಲ್ಲಿನ ಆಕಾಶವಾಣಿ ಜಂಕ್ಷನ್‌ ಸಂಚಾರಿ ಸಮಸ್ಯೆಯಿಂದ ಮೊದಲೇ ಜರ್ಜರಿತವಾಗಿದೆ. ಇದಕ್ಕೆ ಸರಿಯಾಗಿ ಉಪ್ಪು ಸವರುವ ಕೆಲಸವನ್ನು ಖಾಸಗಿ ಬಸ್‌ಗಳು ಮಾಡುತ್ತಿವೆ.

Advertisement

ಇದು 6 ರಸ್ತೆಗಳು ಕೂಡುವ ಅಪಾಯಕಾರಿ ಸ್ಥಳ. ರಾ.ಹೆ.ಯಿಂದ ಬಾರಕೂರು ಕಡೆ ತೆರಳುವವರು, ಬಾರಕೂರು ಕಡೆಯಿಂದ ಹೆದ್ದಾರಿ ಪ್ರವೇಶಿಸುವವರು, ಸರ್ವಿಸ್‌ ರಸ್ತೆಯ ಎರಡೂ ಕಡೆಯಿಂದ ಬರುವವರು, ಸಂತೆ ಮಾರುಕಟ್ಟೆ ರಸ್ತೆಯಿಂದ ಸಂಪರ್ಕಿಸುವವರು. ಹೀಗೆ ಯಾರು ಯಾವ ಕಡೆ ತೆರಳುವವರು ಎಂದು ತಿಳಿಯದೆ ಮೊದಲೇ ಗೊಂದಲದ ಗೂಡು. ಇದರ ನಡುವೆ ಕುಂದಾಪುರ ಕಡೆಯಿಂದ ಆಗಮಿಸುವ ಎಲ್ಲಾ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲಿ ಬಾರದೆ ನೇರವಾಗಿ ಹೆದ್ದಾರಿಯಿಂದ ಒಳ ನುಗ್ಗಿ ಜಂಕ್ಷನ್‌ನಲ್ಲೇ ಅಡ್ಡವಾಗಿ ನಿಲ್ಲುತ್ತಿವೆ. ಬಾರಕೂರು ಕಡೆಯಿಂದ ಬಂದ ಬಸ್‌ಗಳೂ ನಡು ರಸ್ತೆಯಲ್ಲೇ ನಿಂತು ಸಮಸ್ಯೆ ಉಲ್ಬಣಿಸುತ್ತಿವೆ.

ಕುಂದಾಪುರ ಕಡೆಯಿಂದ ಬರುವ ಬಸ್‌ಗಳು ನಿಯಮ ಪ್ರಕಾರ ಧರ್ಮಾವರಂನಿಂದ ಸರ್ವಿಸ್‌ ರಸ್ತೆಯಲ್ಲೇ ಬಂದು ಆಕಾಶವಾಣಿ ಜಂಕ್ಷನ್‌ಕ್ಕಿಂತ ಸ್ವಲ್ಪ ಹಿಂದೆ ಇರುವ ಬಸ್‌ನಿಲ್ದಾಣದಲ್ಲೇ ಪ್ರಯಾಣಿಕರನ್ನು ಇಳಿಸುವ, ಹತ್ತಿಸುವ ಕಾರ್ಯ ಮಾಡಬೇಕು. ಇಲ್ಲಿ ಯಾವುದೇ ಬಸ್‌ ನಿಲ್ಲದೆ ನಿರುಪಯುಕ್ತವಾಗಿದೆ. ಇಲ್ಲಿರುವ ಬಸ್‌ ನಿಲ್ದಾಣದ ಸುತ್ತ ಆಳೆತ್ತರ ಹುಲ್ಲು, ಗಿಡಗಳ ಪೊದೆ ಬೆಳೆದು ಪ್ರಯಾಣಿಕರು ನಿಲ್ಲಲೂ ಯೋಗ್ಯವಾಗಿಲ್ಲ. ಪೊದೆಗಳನ್ನು ಎಲ್ಲ ಸ್ವತ್ಛಗೊಳಿಸಿದರೆ ಪ್ರಯಾಣಿಕರು ತಂಗುದಾಣದಲ್ಲಿ ನಿಂತು ಬಸ್‌ ಬಂದ ಕೂಡಲೇ ಹತ್ತಲು ಅನುಕೂಲವಾಗುತ್ತದೆ. ಬಾರಕೂರು ಕಡೆಯಿಂದ ಬರುವ ಬಸ್‌ಗಳು ಸ್ವಾಗತ ಗೋಪುರಕ್ಕಿಂತ ಹಿಂದೆಯೇ ನಿಲ್ಲಿಸುವುದರಿಂದ ಜಂಕ್ಷನ್‌ ಸಮಸ್ಯೆ ಸ್ವಲ್ಪ ಬಗೆಹರಿಯುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಅವೈಜ್ಞಾನಿಕದ ಪರವಾವಧಿ
ಆಕಾಶವಾಣಿ ಜಂಕ್ಷನ್‌ ಕಾಮಗಾರಿಯು ಅವೈಜ್ಞಾನಿಕದ ಪರಮಾವಧಿ. ಬಾರಕೂರು ಹಾಗೂ ಸಂತೆ ಮಾರುಕಟ್ಟೆ ಕಡೆಯಿಂದ ಹೆದ್ದಾರಿಗೆ ಬರುವವರು ಒಮ್ಮೆಲೇ ದಿಬ್ಬ ಏರಬೇಕು. ವಯಸ್ಕರು, ಘನ ವಾಹನ ಸವಾರರು, ಅಪರಿಚಿತರು ಇಲ್ಲಿ ಪಡುವ ಪಾಡು ಹೇಳತೀರದು. ಸ್ವಾಗತ ಗೋಪುರಕ್ಕೆ ಎತ್ತರದ ವಾಹನಗಳು ಸಿಕ್ಕಿ ಹಾಕಿಕೊಂಡು ಪಡುವ ಕಷ್ಟ ಅಷ್ಟಿಷ್ಟಲ್ಲ. ಇಕ್ಕಟ್ಟಾದ ಈ ಪ್ರದೇಶದಲ್ಲಿ ಪ್ರತೀ ಕ್ಷಣ ಆತಂಕ, ಭಯದಿಂದಲೇ ವಾಹನ ಸವಾರರು ತೆರಳುತ್ತಿದ್ದಾರೆ. ಇವೆಲ್ಲದರ ಪರಿಣಾಮ ಇಲ್ಲಿ ಸಂಭವಿಸುವ ಅಪಘಾತಗಳಿಗೆ ಲೆಕ್ಕವಿಲ್ಲ.

Advertisement

ಹೀಗೆ ಮಾಡುವುದು ಅನಿವಾರ್ಯ
ಸರ್ವಿಸ್‌ ರಸ್ತೆಗಳಲ್ಲಿ ಯಾವುದೇ ಖಾಸಗಿ ವಾಹನ ನಿಲ್ಲಿಸಲು ಅವಕಾಶ ನೀಡಬಾರದು. ಬಸ್‌ಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸಿ ಜಂಕ್ಷನ್‌ಗಿಂತ ಹಿಂದೆಯೇ ನಿಲ್ಲಿಸಬೇಕು. ತಂಗುದಾಣದ ಸುತ್ತ ಬೆಳೆದಿರುವ ಹುಲ್ಲನ್ನು ಕೂಡಲೇ ಸ್ವತ್ಛಗೊಳಿಸಬೇಕು. ಜಂಕ್ಷನ್‌ ಪ್ರದೇಶ ಇನ್ನಷ್ಟು ವಿಸ್ತರಿಸಿ ಸರ್ಕಲ್‌ ನಿರ್ಮಿಸಬೇಕು. ಸಂತೆಗೆ ಬರುವವರು ಕಡ್ಡಾಯವಾಗಿ ಗಾಂಧಿ ಮೈದಾನದಲ್ಲಿ ವಾಹನ ನಿಲ್ಲಿಸುವಂತಾಗಬೇಕು.
-ರಾಜು ಪೂಜಾರಿ, ಗೌರವಾಧ್ಯಕ್ಷರು, ರಿಕ್ಷಾ ಚಾಲಕ, ಮಾಲಕ ಸಂಘ, ಆಕಾಶವಾಣಿ

ಶೀಘ್ರದಲ್ಲಿ ಸೂಕ್ತ ಕ್ರಮ
ಆಕಾಶವಾಣಿ ಜಂಕ್ಷನ್‌ನ ಸಂಚಾರೀ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಬಸ್‌ಗಳು ಕಡ್ಡಾಯವಾಗಿ ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುವಂತೆ, ಜಂಕ್ಷನ್‌ ಹಿಂದೆಯೇ ಬಸ್‌ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವಂತೆ, ಸರ್ವಿಸ್‌ ರಸ್ತೆ ಬದಿಯಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸದಂತೆ ಜಾಗೃತಿ ಮೂಡಿಸಿ ಕಾರ್ಯಾಚರಣೆ ನಡೆಸಲಾಗುವುದು. ಘನ ವಾಹನಗಳು ಟೋಲ್‌ ತಪ್ಪಿಸಿ ಬಾರಕೂರು ರಸ್ತೆಯಲ್ಲಿ ಸಂಚರಿಸದಂತೆ ಕಮಾನು ಅಳವಡಿಸಲಾಗುವುದು.
-ದಿವಾಕರ್‌ ಪಿ.ಎಂ., ಪೊಲೀಸ್‌ ವೃತ್ತ ನಿರೀಕ್ಷಕರು, ಬ್ರಹ್ಮಾವರ

ಸರ್ವಿಸ್‌ ರಸ್ತೆ ಉದ್ದಕ್ಕೂ ವಾಹನ ಪಾರ್ಕಿಂಗ್‌
ಆಕಾಶವಾಣಿ ಜಂಕ್ಷನ್‌ಗಿಂತ ಹಿಂದೆ ಪೆಟ್ರೋಲ್‌ ಪಂಪ್‌ ಕಡೆ ಸರ್ವಿಸ್‌ ರಸ್ತೆ ಉದ್ದಕ್ಕೂ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಒಳ ಬರುವ ಖಾಸಗಿ ಬಸ್‌ಗಳು ಸಹಿತ ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ. ವಾರದ ಸಂತೆ ಸೋಮವಾರವಂತೂ ಬಸ್ಟ್ಯಾಂಡ್ ದಿಕ್ಕಿನ ಸರ್ವಿಸ್‌ ರಸ್ತೆಯಲ್ಲೇ ಜನರು ವಾಹನಗಳನ್ನು ನಿಲ್ಲಿಸುವುದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next