Advertisement

ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

01:18 PM Feb 03, 2018 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ರಾಜಕೀಯ ಪಕ್ಷಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.  ಈ ನಡುವೆ, ಚುನಾವಣಾ ಪೂರ್ವ ಸಮೀಕ್ಷೆಗಳು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮ ಯಾತ್ರೆ ಮುಗಿಸಿದ್ದಾರೆ. ಯಡಿಯೂರಪ್ಪನವರ ಪರಿವರ್ತನಾ ಯಾತ್ರೆ ಸಮಾರೋಪಗೊಳ್ಳುತ್ತಿದೆ. ಎಚ್‌.ಡಿ.ಕುಮಾರಸ್ವಾಮಿಯವರ ವಿಕಾಸ ವಾಹಿನಿ ಯಾತ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಚರಿಸುತ್ತಿದೆ. ಮೂರೂ ಪಕ್ಷಗಳ ನಾಯಕರು ಮುಂದೆ ತಮ್ಮದೇ ಸರ್ಕಾರ ಎಂಬ ವಿಶ್ವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರೊಂದಿಗೆ “ನೇರಾ-ನೇರ’ ಮಾತುಕತೆಗೆ ಇಳಿದಾಗ.

Advertisement

ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಸ್ಪಂದನೆ ಹೇಗಿದೆ?
ತುಂಬಾ ಚೆನ್ನಾಗಿದೆ. ಜನರಿಂದ ಉತ್ತಮ ಸ್ಪಂದನೆ ದೊರೆಯು ತ್ತಿದೆ. ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ನನಗೆ ಮನವರಿಕೆಯಾಗಿದೆ.

ಯಾವ ರೀತಿಯ ಬದಲಾವಣೆ?
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷದ ಸರ್ಕಾರದಿಂದ ಭ್ರಮನಿರಸನಗೊಂಡಿದ್ದಾರೆ. ರೈತರು-ಜನ ಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಹೆಸರಿಗಷ್ಟೇ ಯೋಜನೆಗಳು, ಅವೆಲ್ಲವೂ ಜನರ ತಲುಪುತ್ತಿಲ್ಲ. ಹೀಗಾಗಿ, ಈ ಸರ್ಕಾರ ಹೋದರೆ ಸಾಕಪ್ಪಾ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.

ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಕ್ಷೀರಧಾರೆ ಯೋಜನೆಗಳಿವೆ. ಐವತ್ತು ಸಾವಿರ ರೂ. ರೈತರ ಸಾಲ ಮನ್ನಾ ಆಯ್ತಲ್ಲಾ?
ಎಲ್ಲವೂ ಹೆಸರಿಗಷ್ಟೇ.  ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಸಹಕಾರ ಸಂಘಗಳಿಗೆ ಇನ್ನೂ ಪೂರ್ಣವಾಗಿ ಹಣ ತುಂಬಿಲ್ಲ. 50 ಸಾವಿರ ರೂ. ಸಾಲ ಮನ್ನಾದಿಂದ ರೈತರಿಗೆ ಯಾವುದೇ ಪ್ರಯೋಜನವೂ ಆಗಿಲ್ಲ. ಸಹಕಾರ ಸಂಘ, ವಾಣಿಜ್ಯ ಬ್ಯಾಂಕ್‌ ಸೇರಿ ಎಲ್ಲ ಕಡೆ ರೈತರು ಮಾಡಿರುವ ಸಂಪೂರ್ಣ ಸಾಲ ಮನ್ನಾ ಮಾಡಿ ಹೊಸದಾಗಿ ಸಾಲ ಕೊಟ್ಟರೆ ಮಾತ್ರ ರೈತರು ಉಳಿಯಲು ಸಾಧ್ಯ.

ಸಂಪೂರ್ಣ ಸಾಲ ಮನ್ನಾ ಈಗಿನ ಆರ್ಥಿಕ ಸ್ಥಿತಿಯಲ್ಲಿ ಸಾಧ್ಯವಾ?
ಯಾಕೆ ಸಾಧ್ಯವಿಲ್ಲ. ರೈತರ ಸಾಲ ಮನ್ನಾಗೆ 50 ಸಾವಿರ ಕೋಟಿ ರೂ. ಹೇಗೆ ಹೊಂದಿಸಬೇಕು ಎಂಬುದು ನನಗೆ ಗೊತ್ತಿದೆ. ಪ್ರಮುಖ ಯೋಜನೆ ಕಡಿತ ಇಲ್ಲದೆ, ತೆರಿಗೆ ಹೆಚ್ಚಳ ಮಾಡದೆ ಸಂಪನ್ಮೂಲ ಕ್ರೋಢೀಕರಣ ಮಾಡಬಹುದು. ಅದಕ್ಕೆ ನಾನು ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದೇನೆ. 

Advertisement

ಜನ ಬದಲಾವಣೆ ಬಯಸಿದ್ದಾರೆ ಅಂತ ಹೇಳಿದಿರಿ, ಅದು ಬಿಜೆಪಿಯೂ ಆಗಬಹುದಲ್ಲಾ?
ಇಲ್ಲ. ರಾಜ್ಯದ ಜನತೆ ಕಳೆದ ಐದು ವರ್ಷ ಕಾಂಗ್ರೆಸ್‌ ಆಡಳಿತ ನೋಡಿದ್ದಾರೆ. ಅದಕ್ಕೂ ಮುಂಚೆ ಐದು ವರ್ಷ ಬಿಜೆಪಿ ಆಡಳಿತವನ್ನೂ ನೋಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ನಡೆಸಿದಾಗ ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಆಗಿದೆ ಎಂಬುದು ಗೊತ್ತಿದೆ. ಬಿಬಿಎಂಪಿಯಲ್ಲಂತೂ ಕಾಂಗ್ರೆಸ್‌ ಮತ್ತು ಬಿಜೆಪಿ ಅಧಿಕಾರ ನಡೆಸಿ ಸಾವಿರಾರು ಕೋಟಿ ರೂ. ಲೂಟಿ ಹೊಡೆದಿವೆ. ಹೀಗಾಗಿ, ಈ ಬಾರಿ ಜನರ ಆಯ್ಕೆ ಜೆಡಿಎಸ್‌ ಎಂಬುದು ನನ್ನ ಅಚಲ ನಂಬಿಕೆ.

ಜೆಡಿಎಸ್‌ಗೆ 224 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರಾ?
ಬಿಜೆಪಿ-ಕಾಂಗ್ರೆಸ್‌ಗೂ 224 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿ ಗಳು ಇದ್ದಾರಾ? ಈ ಕ್ಷಣದಲ್ಲಿ ಚುನಾವಣೆ ನಡೆದರೂ ಜೆಡಿಎಸ್‌ನಿಂದ 150 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸಿದ್ಧರಿದ್ದಾರೆ. 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಲವೊಂದು ವ್ಯತ್ಯಾಸ ಹಾಗೂ ತಪ್ಪುಗಳಿಂದ ನಾವು 35 ಸ್ಥಾನದಲ್ಲಿ ಸೋತಿದ್ದೇವೆ. ಎರಡೂ ಚುನಾವಣೆಗಳಲ್ಲಿನ ಆನುಭವ ನನ್ನನ್ನು ಈ ಬಾರಿ ಪರಿಪಕ್ವ ಮಾಡಿದೆ. 

ಹಾಗಿದ್ದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬಹುದಿತ್ತಲ್ಲವೇ?
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಅವಸರವೇನಿಲ್ಲ. ಈಗಾಗಲೇ ನಾನು 100ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಿದ್ದೇನೆ. ಅವರಿಗೆ ಕಾರ್ಯಾಗಾರ ಸಹ ಮಾಡಿದ್ದೇನೆ. ಹೀಗಾಗಿ, ಪಟ್ಟಿ ಬಿಡುಗಡೆ ಇಲ್ಲಿ ದೊಡ್ಡ ಸಮಸ್ಯೆಯೇನಲ್ಲ.

ಕಾಂಗ್ರೆಸ್‌ನದು ಟಾರ್ಗೆಟ್‌ 125, ಬಿಜೆಪಿಯದು ಮಿಷನ್‌ 150. ನಿಮುª?
ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸುವುದೇ ನಮ್ಮ ಟಾರ್ಗೆಟ್‌. ಒಂದಂತೂ ಸತ್ಯ. ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ನಾವು ಗೆಲೆ¤àವೆ. ಮೇಲ್ನೋಟಕ್ಕೆ ಬಿಂಬಿಸುತ್ತಿರುವುದು ಬೇರೆ, ವಾಸ್ತವವೇ ಬೇರೆ.

ಆದರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಬೇರೆಯೇ ಹೇಳ್ತಿವೆ?
ನೋಡಿ ನಾನು ರಾಜಕಾರಣಕ್ಕೆ ಹೊಸಬನಲ್ಲ. ನನಗೂ ರಾಜ್ಯ ರಾಜಕಾರಣದ ಪಲ್ಸ್‌ ಗೊತ್ತಿದೆ. ಅಭ್ಯರ್ಥಿಗಳ ಘೋಷಣೆಯೇ ಆಗದೆ ಸೋಲು-ಗೆಲುವು ಹೇಗೆ ನಿರ್ಧರಿಸಲು ಸಾಧ್ಯ? ಇದು ಕಾಮನ್‌ಸೆನ್ಸ್‌ ಅಲ್ಲವೇ. ಪಕ್ಷಗಳ ಅಲೆ, ನಾಯಕತ್ವ ಸ್ವಲ್ಪ ಮಟ್ಟಿಗೆ ಕೆಲಸ ಮಾಡಬಹುದು. ಆದರೆ, ಒಂದೊಂದು ಕ್ಷೇತ್ರದಲ್ಲೂ ಅಲ್ಲಿನದೇ ಆದ ಲೆಕ್ಕಾಚಾರ ಇರುತ್ತದೆ. ಅಭ್ಯರ್ಥಿ, ಆತನ ಹಿನ್ನೆಲೆ, ಸಾಮರ್ಥ್ಯ, ಸಮುದಾಯ ಬೆಂಬಲ ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೀಗಾಗಿ, ನಾನು ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ನೀವು ಸಹ ಸಮೀಕ್ಷೆ ಮಾಡಿಸಿದ್ದೀರಂತೆ?
ಹೌದು. ನಾನೂ ಸಮೀಕ್ಷೆ ಮಾಡಿಸಿದ್ದೇನೆ. ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂದು ಅದೇ ಧೈರ್ಯದ ಮೇಲೆ ಹೇಳುತ್ತಿದ್ದೇನೆ. ಕಾಂಗ್ರೆಸ್‌ ಮತ್ತು ಬಿಜೆಪಿಗೂ ಜೆಡಿಎಸ್‌ನ ಶಕ್ತಿಯ ಬಗ್ಗೆ ಗೊತ್ತಿದೆ.

ಕಾಂಗ್ರೆಸ್‌-ಬಿಜೆಪಿಗೆ ಗೊತ್ತು ಅಂದ್ರೆ?
ರಾಜ್ಯದಲ್ಲಿ ಜೆಡಿಎಸ್‌ಗೆ ಒಳ್ಳೆಯ ವಾತಾವರಣ ಇದೆ ಎಂಬುದು ಕೇಂದ್ರ ಹಾಗೂ ರಾಜ್ಯ ಗುಪ್ತದಳ ವರದಿ, ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆಗಳು ಹೇಳಿವೆ. ನಿಜ ಹೇಳಬೇಕು ಎಂದರೆ ಎರಡೂಪಕ್ಷಗಳು ಹೆದರಿರುವುದು ಜೆಡಿಎಸ್‌ ಬಗ್ಗೆ. 

ಜೆಡಿಎಸ್‌ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಹೆದರಿಕೆ ಯಾಕೆ?
ಜೆಡಿಎಸ್‌ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂಬ ಕಾಲ ಹೋಯ್ತು. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಲ್ಲೂ ಜೆಡಿಎಸ್‌ಗೆ ವ್ಯಕ್ತವಾಗುತ್ತಿರುವ ಸ್ಪಂದನೆ ನೋಡಿ ಎರಡೂ ಪಕ್ಷಗಳ ನಾಯಕರು ಹೆದರಿದ್ದಾರೆ. 

ಜೆಡಿಎಸ್‌ಗೆ ಶಕ್ತಿ ಇದೆ ಎಂದಾದರೆ ನಿಮ್ಮ ಪಕ್ಷದ ಶಾಸಕರು ಯಾಕೆ ಬೇರೆ ಕಡೆ ವಲಸೆ ಹೊರಟಿದ್ದಾರೆ?
ಎಲ್ಲರೂ ಅಲ್ಲ. ಏಳು ಶಾಸಕರನ್ನು ನಾವೇ ಪಕ್ಷದಿಂದ ಹೊರಗೆ ಹಾಕಿದ್ದೇವೆ. ಇನ್ನಿಬ್ಬರು ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಹೋಗಿದ್ದಾರೆ. ನಾನು ಇದನ್ನು ಸವಾಲಾಗಿ ಸ್ವೀಕರಿಸಿ ಎಲ್ಲ ಕ್ಷೇತ್ರಗಳಲ್ಲೂ ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನು ತಯಾರು ಮಾಡಿಕೊಂಡಿದ್ದೇನೆ. ಅವರು  ಈ ಹಿಂದೆ ಗೆದ್ದಿದ್ದರು ಎಂದ ಮೇಲೆ ಜೆಡಿಎಸ್‌ಗೆ ಶಕ್ತಿ ಇತ್ತು ಎಂದು ಅರ್ಥವಲ್ಲವೇ?

ಕುಮಾರಸ್ವಾಮಿ ಹತಾಶರಾಗಿದ್ದಾರೆ ಅಂತಾರಲ್ಲಾ?
ನಾನೇಕೆ ಹತಾಶನಾಗಲಿ? ನಾನು ಆಶಾವಾದಿ. ರಾಜ್ಯದ ಜನರ ಬಗ್ಗೆ ನನಗೆ ನಂಬಿಕೆಯಿದೆ. 20 ತಿಂಗಳ ಅಲ್ಪ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಕಾರ್ಯ ಜನ ಮೆಚ್ಚಿದ್ದಾರೆ. ಪೂರ್ಣ ಬಹುಮತ ಕೊಡಿ ಎಂದು ಜನರ ಮುಂದೆ ಹೋಗಿದ್ದೇನೆ. ನಮ್ಮ ಶ್ರಮಕ್ಕೆ ಪ್ರತಿಫ‌ಲ ಸಿಗುವ ನಂಬಿಕೆಯಿದೆ. ನಾನು ನಾಯಕರನ್ನು ನಂಬಿ ರಾಜಕಾರಣ ಮಾಡಲ್ಲ, ಕಾರ್ಯಕರ್ತರು-ಮುಖಂಡರು ನಮ್ಮ ಶಕ್ತಿ. ಜನರ ಪ್ರೀತಿ ವಿಶ್ವಾಸವೇ ಧೈರ್ಯ.

ಮಾಧ್ಯಮಗಳ ಬಗ್ಗೆ ಯಾಕೆ ಸಿಟ್ಟು ಮಾಡಿಕೊಂಡಿದ್ದೀರಿ?
ಖಂಡಿತ ಇಲ್ಲ. ಮುದ್ರಣ ಮಾಧ್ಯಮದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಸ್ವಲ್ಪ ಬೇಸರ ಇದೆ. ಯಾಕೆಂದರೆ ನೋಡಿ, ಮಧುಗಿರಿಯಲ್ಲಿ ನನ್ನ ಸಭೆಗೆ 50 ಸಾವಿರ ಜನ ಸೇರಿದ್ದರು. ನನ್ನ ರಾಜಕೀಯ ಜೀವನದಲ್ಲಿ ಅಲ್ಲಿ ಅಷ್ಟೊಂದು ಜನ ನೋಡಿರಲಿಲ್ಲ. ಪಾವಗಡದ ಲಿಂಗದಹಳ್ಳಿ ಗ್ರಾಮಪಂಚಾಯಿತಿಯಲ್ಲಿ 25 ಸಾವಿರ ಜನ ಸೇರಿದ್ದರು. ಅದ್ಯಾವುದರ ಬಗ್ಗೆಯೂ ಒಂದೇ ಒಂದು ಸುದ್ದಿಯೂ ಯಾವ ಟಿವಿಯಲ್ಲೂ ಬರಲಿಲ್ಲ. ಹೀಗಾಗಿ, ನನ್ನ ಸಂದರ್ಶನ ಮಾಡಬೇಡಿ ಎಂದು ವಿನಯವಾಗಿಯೇ ಹೇಳಿದೆ.

ಜೆಡಿಎಸ್‌ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದೆ ಅಂತಾರಲ್ಲಾ?
ಪ್ರತಿ ಚುನಾವಣೆಯಲ್ಲೂ ಜೆಡಿಎಸ್‌ಗೆ ಇಂತಹ ಹಣೆಪಟ್ಟಿ ಕಟ್ಟಲಾಗುತ್ತದೆ. ಬಿಜೆಪಿಯವರು ಕಾಂಗ್ರೆಸ್‌ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಅಂತಾರೆ, ಕಾಂಗ್ರೆಸ್‌ನವರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಅಂತಾರೆ. ಆದರೆ, ವಾಸ್ತವವಾಗಿ ಆ ಎರಡೂ ಪಕ್ಷಗಳ ನಾಯಕರು ಆಂತರಿಕವಾಗಿ ಒಪ್ಪಂದ ಮಾಡಿಕೊಂಡು ಚುನಾವಣೆ ಎದುರಿಸುತ್ತಾರೆ. 

ವಿಧಾನಸಭೆ ಚುನಾವಣೆಯಲ್ಲಿ ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾದರೆ?
ಆ ರೀತಿ ಆಗುವುದಿಲ್ಲ ಎಂಬುದು ನನ್ನ ನಂಬಿಕೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಉಳಿದಂತೆ ಅಂತೆ-ಕಂತೆಗಳಿಗೆ ನಾನು ಉತ್ತರಿಸುವುದಿಲ್ಲ.

ಸಿದ್ದರಾಮಯ್ಯ ಅವರು ಜೆಡಿಎಸ್‌ ಅವರಪ್ಪರಾಣೆಗೂ ಅಧಿಕಾರಕ್ಕೆ ಬರಲ್ಲ ಅಂತಾರೆ?
ಅಧಿಕಾರ ಹಾಗೂ ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಅಧಿಕಾರ ಹೋದ ತಕ್ಷಣ ಎಲ್ಲಿರುತ್ತಾರೆ ಕಾದು ನೋಡಿ. ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ ಅಂತಿದ್ರು. ಇದೀಗ ನಾನು ಚಾಮುಂಡೇಶ್ವರಿ, ನನ್ನ ಮಗ ವರುಣಾದಲ್ಲಿ ಅಂತಿದಾರೆ. ಇದಕ್ಕೆ ಏನು ಹೇಳಬೇಕು?

ನಿಜ ಹೇಳಿ, ಮೈಸೂರಿನಲ್ಲಿ ಜೆಡಿಎಸ್‌ ಸ್ಥಿತಿ ಹೇಗಿದೆ?
ಹಿಂದೆ ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿ ಇದ್ದ ಸ್ಥಿತಿಗಿಂತ ಈಗ ಉತ್ತಮವಾಗಿದೆ. ಈ ಬಾರಿ ಚಾಮುಂಡೇಶ್ವರಿ-ವರುಣಾ ಸೇರಿ ಹೆಚ್ಚು ಸ್ಥಾನ ಗಳಿಸುತ್ತೇವೆ.

ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುತ್ತಿದ್ದೀರಾ? 
ನಾನು ಯಾರಿಗೂ ಸವಾಲು ಹಾಕಲು ಹೋಗುವುದಿಲ್ಲ. ಆದರೆ, ನಮ್ಮ ಪಕ್ಷದ ಸಾಮರ್ಥ್ಯದ ಮೇಲೆ ನನಗೆ ನಂಬಿಕೆಯಿದೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆ.  

ಮಹದಾಯಿ ವಿವಾದ ಬಗ್ಗೆ ಏನು ಹೇಳ್ತೀರಿ?
ಮಹದಾಯಿ ವಿವಾದವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಕಾರಣಕ್ಕೆ ಜೀವಂತವಾಗಿಟ್ಟಿವೆ. ಆ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಜನರನ್ನು ವಂಚಿಸಿವೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದಕ್ಕೆ ಇತಿಶ್ರೀ ಹಾಡಲಾಗುವುದು.

ಟಾರ್ಗೆಟ್‌ ರೀಚ್‌ ಆಗ್ತೀವೆ
“ಯಾರು ಏನೇ ಹೇಳಲಿ, ಸಮೀಕ್ಷೆಗಳಲ್ಲಿ ಏನೇ ಬರಲಿ,  ಈ ಚುನಾವಣೆಯಲ್ಲಿ ಜೆಡಿಎಸ್‌ ಟಾರ್ಗೆಟ್‌ ರೀಚ್‌ ಆಗಲಿದೆ. ಮೊದಲು ಜೆಡಿಎಸ್‌ಗೆ 20 ರಿಂದ 25 ಅಂತ ಕೊಟ್ಟಿದ್ದರು. ಈಗ ನಮ್ಮ ಪುಣ್ಯ 50ಕ್ಕೆ ತಂದು ನಿಲ್ಲಿಸಿದ್ದಾರೆ. ಇನ್ನೂ ಚುನಾವಣೆಗೆ ಸಮಯ ಇದೆ, ರಾಜಕೀಯವಾಗಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದು ಕಾದು ನೋಡಿ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಜೆಡಿಎಸ್‌ಗೆ ಬರುವವರ ಸಂಖ್ಯೆ ದೊಡ್ಡದಿದೆ. ಆದರೆ  ಸದ್ಯಕ್ಕೆ ಯಾವುದೇ ಮಾಹಿತಿ ಬಹಿರಂಗಗೊಳಿಸುವುದಿಲ್ಲ.’

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next