ಮುಂಬಯಿ: ಪ್ರಸ್ತುತ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ “ಸೂಪರ್ ಸಿಎಂ” ಇಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಹೇಳಿದ್ದಾರೆ.
‘ಶಿಂಧೆ ಮುಖ್ಯಮಂತ್ರಿಯಾಗಿದ್ದರೂ, ಫಡ್ನವೀಸ್ ಅವರೇ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷದ ಕೆಲವು ನಾಯಕರು ಪ್ರತಿಪಾದಿಸಿದ್ದಾರೆ. ಈಗಿನ ಸರ್ಕಾರದಲ್ಲಿ ಸೂಪರ್ ಸಿಎಂ ಪರಿಕಲ್ಪನೆ ಇಲ್ಲ, ನಮಗೆ ಒಬ್ಬರೇ ಮುಖ್ಯಮಂತ್ರಿ ಇದ್ದಾರೆ, ಅದು ಏಕನಾಥ್ ಶಿಂಧೆ. ಅವರ ನೇತೃತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅವರು ಈಗ ವಿರೋಧ ಪಕ್ಷದಲ್ಲಿ ಇರಲು ಒಗ್ಗಿಕೊಳ್ಳಬೇಕು’ ಎಂದರು.
ಇನ್ನೊಂದು ಪ್ರಶ್ನೆಗೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರ ಭೇಟಿಯ ಬಗ್ಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಫಡ್ನವೀಸ್ ಹೇಳಿದರು. “ಮಹಾರಾಷ್ಟ್ರದಲ್ಲಿ, ನಾವು ರಾಜಕೀಯ ಶಿಷ್ಟಾಚಾರವನ್ನು ಅನುಸರಿಸುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಅವರು ಅಸ್ವಸ್ಥರಾಗಿದ್ದರು ಮತ್ತು ನಾನು ಅವರನ್ನು ಭೇಟಿ ಮಾಡಿದ್ದೇನೆ. ಅದರಲ್ಲಿ ರಾಜಕೀಯ ಏನು?” ಎಂದರು.
ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವೀಸ್, “ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಸೂಚಿಸಿದ ನಂತರ ಆ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯನ್ನು ಕರೆಯಲಾಯಿತು. ಸಭೆ ಕಾನೂನುಬಾಹಿರವಾಗಿದೆ ಮತ್ತು ಅವರು ಔರಂಗಾಬಾದ್, ಉಸ್ಮಾನಾಬಾದ್ ನಗರಗಳನ್ನು ಮರುನಾಮಕರಣ ಮಾಡುವ ನಿರ್ಧಾರಗಳನ್ನು ತೆಗೆದುಕೊಂಡರು. ನಾವು ಬಹುಮತದಲ್ಲಿರುವ ಕಾರಣ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ನಾವು ನಿರ್ಧಾರಗಳನ್ನು ಅಂಗೀಕರಿಸುತ್ತೇವೆ ಎಂದರು.
2014 ರಿಂದ 2019 ರವರೆಗೆ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್, ಶಿವಸೇನೆ ಬಂಡಾಯಗಾರ ಶಿಂಧೆ ಅವರನ್ನು ಉನ್ನತ ಹುದ್ದೆಗೆ ಬಿಜೆಪಿ ಬೆಂಬಲಿಸಿದ ನಂತರ ಪಕ್ಷದ ಹೈಕಮಾಂಡ್‌ನ ಒತ್ತಾಯದ ಮೇರೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಬೇಕಾಗಿತ್ತು.