ಉಡುಪಿ: ಆರೋಗ್ಯ, ಶಿಕ್ಷಣ ಸಂಸ್ಥೆ, ಕೈಗಾರಿಕೆ ಮೂಲಕ ಜಾಗತಿಕ ಗಮನ ಸೆಳೆದಿರುವ ಮಣಿಪಾಲದಲ್ಲಿ ಹಲವೆಡೆ ಕತ್ತಲೆ ಭಾಗ್ಯವಿದ್ದು ಕಳೆದ ಎರಡು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಹೆದ್ದಾರಿ ಮತ್ತು ಜಂಕ್ಷನ್ ಒಳಭಾಗದಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ. ಮಕ್ಕಳು, ಮಹಿಳೆಯರು ಆತಂಕದಿಂದಲೆ ಸಂಚರಿಸಬೇಕಿದೆ. ಮುಖ್ಯವಾಗಿ ಮಣಿಪಾಲ ಜೂನಿಯರ್ ಕಾಲೇಜು, ಮಾಧವ ಕೃಪಾ ಶಾಲೆಯ ಜಂಕ್ಷನ್ ಮತ್ತು ಅಲೆವೂರು, ಇಂಡಸ್ಟ್ರಿಯಲ್ ಪ್ರದೇಶದ ಕಡೆಗೆ ಸಾಗುವ ರಸ್ತೆಯಲ್ಲಿ ಕೆಲವೆಡೆ ಬೀದಿ ದೀಪ ಬೆಳಗುತ್ತಿಲ್ಲ. ಆರ್‌ಎಸ್‌ಬಿ ಭವನದಲ್ಲಿರುವ ಹೈಮಾಸ್ಟ್ ದೀಪ ಮಾತ್ರ ಸ್ವಲ್ಪ ಮಟ್ಟಿಗೆ ಬೆಳಕು ನೀಡುತ್ತಿದೆ.
ಅಂಚೆ ಕಚೇರಿ ಸಮೀಪ ಒಂದು ಮಾತ್ರ ಬೀದಿ ದೀಪವಿದ್ದು, ಅದು ಹೆಚ್ಚು ಪ್ರಕಾಶಮಾನವಾಗಿಲ್ಲ ಎಂಬುದು ನಾಗರಿಕರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಎಂಜೆಸಿಯಿಂದ ಮಾಧವ ಕೃಪಾ ಮೂಲಕ ಹೆದ್ದಾರಿ ರಸ್ತೆಗೆ ಸಾಗುವ ಕಡೆಗೆ ಕತ್ತಲೆ ವಾತಾವರಣವಿದೆ. ಅಲ್ಲದೆ ಮಣಿಪಾಲದ ಅಂಚೆ ಕಚೇರಿ ಸಮೀಪದ ಬಸ್ ನಿಲ್ದಾಣ ಪರಿಸರದ ಜಂಕ್ಷನ್ ಸಹ ಕತ್ತಲೆಮಯವಾಗಿದೆ. ರಾತ್ರಿ 7ರ ಅನಂತರ ಕತ್ತಲೆಮಯದಿಂದ ಕೂಡಿರುವ ವಾತಾವರಣದಲ್ಲಿ ಮಹಿಳೆಯರು, ಮಕ್ಕಳು ಆತಂಕದಿಂದ ಓಡಾಡುವ ಪರಿಸ್ಥಿತಿ ಇದೆ.
ರಾತ್ರಿ ಪಾಳಿ ಕೆಲಸಕ್ಕೆ ಹೋಗುವ, ಬರುವ ಮಹಿಳೆಯರು ಯುವತಿಯರು, ಕೋಚಿಂಗ್ ತೆರಳುವ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡುತ್ತಿದೆ. ಮಣಿಪಾಲ ಟೈಗರ್ ಸರ್ಕಲ್‌ನಿಂದ ಸಿಂಡಿಕೇಟ್ ಸರ್ಕಲ್‌ವರೆಗೂ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಟ್ಟಡ ಮತ್ತು ವಾಹನಗಳ ಬೆಳಕೇ ಆಶ್ರಯ ಎನ್ನುತ್ತಾರೆ ಪಾದಚಾರಿಗಳು.
ಪೆರಂಪಳ್ಳಿ ರಸ್ತೆಯೂ ಕತ್ತಲೆಯಲ್ಲಿ:
ಮಣಿಪಾಲದಿಂದ ಪೆರಂಪಳ್ಳಿ ಮೂಲಕ ಅಂಬಾಗಿಲು ಕಡೆಗೆ ಸಾಗುವ ರಸ್ತೆಗೂ ಕತ್ತಲೆಯಿಂದ ಬೆಳಕಿನ ಭಾಗ್ಯ ಶೀಘ್ರ ಕಲ್ಪಿಸಿಕೊಡಬೇಕು. ರಾತ್ರಿ ವೇಳೆ ಈ ಭಾಗದಲ್ಲಿ ಕಾರು ಅಥವ ಸ್ಕೂಟರ್‌ನಲ್ಲಿ ಮಹಿಳೆಯರು, ಯುವತಿಯರು ಸಂಚರಿಸಲು ಭಯ ಪಡುವ ಪರಿಸ್ಥಿತಿ ಇದೆ. ಇತ್ತೀಚೆಗೆ ಚತುಷ್ಪಥ ನಿರ್ಮಾಣವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ, ಸ್ಥಳೀಯರ ಓಡಾಟಕ್ಕೆ, ಪಾದಚಾರಿಗಳಿಗೆ ಅನುಕೂಲವಾಗುವಂತೆ ಪೆರಂಪಳ್ಳಿ -ಅಂಬಾಗಿಲು ರಸ್ತೆಗೆ ದೀಪದ ವ್ಯವಸ್ಥೆ ಆಗಬೇಕಿದೆ.
ದಿಲ್ಲಿಯಲ್ಲಿ ಧೂಳು ತಿನ್ನುತ್ತಿದೆ ಪ್ರಸ್ತಾವನೆ:
ಮಣಿಪಾಲ ಪರಿಸರ ಸಹಿತ ಉಡುಪಿವರೆಗಿನ ಹೆದ್ದಾರಿವರೆಗೆ ವರ್ಷಗಳು ಕಳೆದರೂ ಕತ್ತಲೆ ಭಾಗ್ಯದಿಂದ ಮುಕ್ತಿ ಸಿಕ್ಕಿಲ್ಲ. ಇಲ್ಲಿಗೆ ಬೀದಿ ದೀಪ ಅಳವಡಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ಪ್ರಾಧಿಕಾರದ ಎಂಜಿನಿಯರ್‌ಗಳು ದಿಲ್ಲಿಗೆ ಕಳುಹಿಸಿ ಏಳೆಂಟು ತಿಂಗಳು ಕಳೆದಿದ್ದರೂ ದಿಲ್ಲಿಯ ಕಚೇರಿಯಲ್ಲಿ ಪ್ರಸ್ತಾವನೆ ಕಡತಗಳು ಧೂಳು ತಿನ್ನುತ್ತಿವೆ. ಇನ್ನೂ ಮೂರ್ನಾಲ್ಕು ತಿಂಗಳು ಆಗಬಹುದು ಎನ್ನುತ್ತಿದ್ದಾರೆ ಅಧಿಕಾರಿಗಳು. ಪ್ರಸ್ತುತ ವಾಹನ ಸವಾರರು, ನಾಗರಿಕರು ಕತ್ತಲೆಯಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಮಣಿಪಾಲ ಬಸ್ ನಿಲ್ದಾಣ, ಲಕ್ಷ್ಮೀಂದ್ರ ನಗರ, ಇಂದ್ರಾಳಿ, ಎಂಜಿಎಂ, ಕುಂಜಿಬೆಟ್ಟು ಬಸ್ ನಿಲ್ದಾಣಗಳಿದ್ದು, ಸಂಜೆ 7ರ ಬಳಿಕ ಇಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಬಸ್‌ಗೆ ಕಾಯಲು ತೊಂದರೆಯಾಗುತ್ತದೆ. ಅಲ್ಲದೆ ಎಂಜಿಎಂ ಬಳಿ ಹಾಸ್ಟೆಲ್, ಇಂದ್ರಾಳಿ ಸಮೀಪ ಪಿಜಿಗಳಿದ್ದು, ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಈ ಭಾಗದಲ್ಲಿ ಸಂಜೆ ಅನಂತರ ಓಡಾಟಕ್ಕೆ ಆತಂಕವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.
18 ಕಿ. ಮೀ. ಬೀದಿ ದೀಪ ಯೋಜನೆ ಟೆಂಡರ್ ಹಂತದಲ್ಲಿ:
ಅಂಬಾಗಿಲು-ಪೆರಂಪಳ್ಳಿ ರಸ್ತೆ, ಮಣಿಪಾಲ ಜೂನಿಯರ್ ಕಾಲೇಜು- ಇಂಡಸ್ಟ್ರಿಯಲ್ ಏರಿಯ, ಪರ್ಕಳ-ಮಲ್ಪೆವರೆಗಿನ ಹೆದ್ದಾರಿ ರಸ್ತೆ ಒಟ್ಟು ಸುಮಾರು 18 ಕಿ. ಮೀ. ವರೆಗೆ ಬೀದಿ ದೀಪ ಅಳವಡಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ 15 ರಿಂದ 20 ದಿನಗಳೊಳಗೆ ಮುಗಿಯಲಿದೆ. ನಗರ ಸಭೆಯೂ ಖಾಸಗಿ ಜಾಹೀರಾತು ಸಂಸ್ಥೆಗೆ ಯೋಜನೆ ಅನುಷ್ಠಾನಗೊಳಿಸಲು ಅನುಮತಿ ನೀಡುತ್ತದೆ. ಕಂಬ, ಕೇಬಲ್, ವಿದ್ಯುತ್ ವ್ಯವಸ್ಥೆ ಸಹಿತ ಜಾಹಿರಾತು ಒಳಗೊಂಡಿರುತ್ತದೆ. ನಿರ್ವಹಣೆಯೂ ಅವರೇ ಮಾಡುತ್ತಾರೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕ 3 ಟೆಂಡರ್: ಉಡುಪಿ ನಗರ ವ್ಯಾಪ್ತಿಯ ಹೆದ್ದಾರಿ ಸಹಿತವಾಗಿ ಒಳ ರಸ್ತೆಗಳಲ್ಲಿನ ಬೀದಿ ದೀಪ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮಣಿಪಾಲದ ಅಂಚೆ ಕಚೇರಿಯಿಂದ ಅಲೆವೂರು ರಸ್ತೆ, ಮಣಿಪಾಲ ಕಾಯಿನ್ ವೃತ್ತದಿಂದ ಅಂಬಾಗಿಲು ಹಾಗೂ ಪರ್ಕಳದಿಂದ ಮಲ್ಪೆವರೆಗೆ ಹೀಗೆ ಮೂರು ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಎಲ್ಲ ಕಡೆ ಸ್ಮಾರ್ಟ್ ಬೀದಿ ದೀಪ ಅಳವಡಿಸಲಿದ್ದೇವೆ. ಹೀಗಾಗಿ ಅತೀ ಶೀಘ್ರದಲ್ಲಿ ನಗರದ ಬೀದಿದೀಪದ ಸಮಸ್ಯೆಗೆ ಮುಕ್ತಿ ಸಿಗಲಿದೆ. ನಗರದ 20,000 ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸಲಾಗುವುದು. ಇದರಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ನಗರ ಸಭೆಗೆ ಇದರಿಂದ ಶೇ.60-70ರಷ್ಟು ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಉಳಿತಾಯದಲ್ಲಿಯೂ ಶೇ.10ರಷ್ಟು ನಗರಸಭೆಗೆ ಶೇ.90ರಷ್ಟು ಹೂಡಿಕೆ ಮಾಡಿದ ಖಾಸಗಿ ಕಂಪೆನಿಗೆ ಹೋಗಲಿದೆ. ಸ್ಮಾರ್ಟ್ ಸಿಟಿ ಕಲ್ಪನೆಯ ಈ ಯೋಜನೆಯಲ್ಲಿ ಸರಕಾರ/ನಗರ ಸಭೆಗೆ ಯಾವುದೇ ಖರ್ಚು ಇಲ್ಲ.
-ಕೆ.ರಘುಪತಿ ಭಟ್, ಶಾಸಕರು
ಮಾಹಿತಿ ನೀಡಿ: ಮಣಿಪಾಲ ವ್ಯಾಪ್ತಿಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಡುವ ಬೀದಿದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಬೀದಿ ದೀಪ ಕೆಟ್ಟರೆ ಒಂದೆರಡು ದಿನಗಳಲ್ಲಿ ಸರಿಪಡಿಸಲಾಗುತ್ತಿದೆ. ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಕೂಡಲೇ ಸರಿಪಡಿಸಿಕೊಡಲಾಗುವುದು. ಕೆಲವೆಡೆ ಹೊಸದಾಗಿ ಬೀದಿ ದೀಪ ವ್ಯವಸ್ಥೆಗೆ ಟೆಂಡರ್ ಆಗುತ್ತಿದೆ. –
ಮಂಜುನಾಥ ಮಣಿಪಾಲ, ನಗಸರಭೆ ಸದಸ್ಯರು
-ಅವಿನ್ ಶೆಟ್ಟಿ