ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಮುನ್ನಾ ದಿನ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 237 ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಕ್ಕೆ ತಡೆ ನೀಡಲು ನಿರಾಕರಿಸಿದ್ದು, ಈ ಬಗ್ಗೆ ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.
ಇದನ್ನೂ ಓದಿ:ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
ಸಿಎಎ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಉತ್ತರ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿಕೊಂಡಿದ್ದರು.
237 ಅರ್ಜಿಗಳಿಗೆ ಸಂಬಂಧಿಸಿದಂತೆ ನಾವು ಮೆರಿಟ್ಸ್ ಆಧಾರದ ಮೇಲೆ ವಿವರವಾದ ಅಫಿಡವಿತ್ ಅನ್ನು ಸಲ್ಲಿಸಬೇಕಾಗಿದೆ. ಈಗಾಗಲೇ 20 ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಇನ್ನೂ ಹಲವು ಅರ್ಜಿಗಳು ಸಲ್ಲಿಕೆಯಾಗಬೇಕಾಗಿದ್ದು, ವಾಸ್ತವವಾಗಿ ನಮಗೆ ಉತ್ತರ ನೀಡಲು ನಾಲ್ಕು ವಾರಗಳ ಅಗತ್ಯವಿದೆ ಎಂದು ಮೆಹ್ತಾ ಅವರು ಸುಪ್ರೀಂಗೆ ಮನವಿ ಮಾಡಿಕೊಂಡರು.
ಸಿಜೆಐ ಚಂದ್ರಚೂಡ್, ಜಸ್ಟೀಸ್ ಜೆಬಿ ಪರ್ಡಿವಾಲಾ, ಜಸ್ಟೀಸ್ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿ, ಸಿಎಎಗೆ ಯಾವುದೇ ತಡೆ ನೀಡಲ್ಲ ಎಂದು ಆದೇಶ ನೀಡಿ, ಈ ಬಗ್ಗೆ ಮೂರು ವಾರಗಳೊಳಗೆ ಉತ್ತರ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಕೇರಳದ ಇಂಡಿಯನ್ ಮುಸ್ಲಿಮ್ ಲೀಗ್, ಕಾಂಗ್ರೆಸ್ ನ ಜೈರಾಂ ರಮೇಶ್, ತೃಣಮೂಲ ಕಾಂಗ್ರೆಸ್ ನ ಮಹುವಾ ಮೊಯಿತ್ರಾ ಸೇರಿದಂತೆ ಹಲವಾರು ಕಕ್ಷಿದಾರರು ಸಿಎಎ ಜಾರಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ದೇಶದಲ್ಲಿ ತಾರತಮ್ಯಕ್ಕೆ ಎಡೆಮಾಡಿಕೊಡಲಿದ್ದು, ಇದು ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಏಪ್ರಿಲ್ 9ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.