ಇಲ್ಲಿಯವರೆಗೆ ಅಭಿನಯಕ್ಕಿಂತ ಹೆಚ್ಚಾಗಿ ತನ್ನ ಹಾವ-ಭಾವ, ಬೋಲ್ಡ್ ಮಾತುಗಳಿಂದಲೇ ಚಂದನವನದಲ್ಲಿ ಆಗಾಗ್ಗೆ ಸುದ್ದಿಯಾಗುವ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ, ಮುಂಬರುವ ಚಿತ್ರದಲ್ಲಿ ತಮ್ಮ ಮಾತಿಗೆ ಬ್ರೇಕ್ ಹಾಕಿದ್ದಾರೆ! ಹೌದು. ಸಂಯುಕ್ತಾ ಹೆಗ್ಡೆ ಅಭಿನಯಿಸಿರುವ ‘ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ತೆರೆಗೆ ಬರಲು ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಸಂಯುಕ್ತಾ ಅವರದ್ದು, ಕಿವಿ ಕೇಳದ ಮತ್ತು ಮಾತು ಬಾರದ ಹುಡುಗಿಯ ಪಾತ್ರವಂತೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಂಯುಕ್ತಾ ಪಾತ್ರದ ಗುಟ್ಟು ರಟ್ಟಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ಅಣಿಯಾಗುತ್ತಿರುವ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆಗೊಳಿಸುವ ಮೂಲಕ ತನ್ನ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿದೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೂಲಕ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರದ ಆಡಿಯೋವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹೆಸರೇ ಹೇಳುವಂತೆ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಶಾಂತಿ ಮತ್ತು ಯುದ್ಧದ ಎಳೆಯನ್ನು ಇಟ್ಟುಕೊಂಡು ತೆರೆಮೇಲೆ ಬರುತ್ತಿದೆ. ಇಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಯುದ್ಧ ಕೂಡ ಇದೇ ಅದಕ್ಕಾಗಿ ಇದನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಟ್ಟುಕೊಂಡಿದ್ದೇವೆ ಎನ್ನುತ್ತದೆ ಚಿತ್ರತಂಡ. ಈ ಚಿತ್ರದಲ್ಲಿ ಯುವ ನಟ ಪ್ರಭು ಮುಂದಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅರವಿಂದ ರಾವ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ, ಪ್ರವೀಣ್ ರಾಜ್ ಖಳನಾಯಕನಾಗಿ ಕಾಣಿಸಿಕೊಂಡರೆ, “ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ದಿ. ಚಂದ್ರಶೇಖರ್ ಮತ್ತೂಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಮಕೃಷ್ಣ, ವಿಜಯ್ ಭೋಲೆನಾಥ್, ಮೊದಲಾದವರು ಚಿತ್ರದ ಇತರ ಕಲಾವಿದರ ತಾರಾಗಣ ಚಿತ್ರದಲ್ಲಿದೆ.
ತೆಲುಗು ಮೂಲದ ನಿರ್ದೇಶಕ ಶ್ರೀನಾಗ್ “ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರಕ್ಕೆ ಕಥೆ , ಚಿತ್ರಕಥೆ ಬರೆದು ನಿರ್ದೇಶಿಸಿ¨ªಾರೆ. ಕಿರಣ್ ವಾರಣಾಸಿ ಸಂಗೀತ ಸಂಯೋಜನೆಯ ಹಾಡುಗಳಿಗೆ ಕಂಚನ್ ಕೌಸ್ತುಭ ಸಾಲುಗಳನ್ನು ಬರೆದಿದ್ದಾರೆ. ಚಿತ್ರದ ದೃಶ್ಯಗಳಿಗೆ ಕಲ್ಯಾಣ್ ಸಮಿ ಛಾಯಾಗ್ರಹಣವಿದೆ. ರೋಲಿಂಗ್ ಡ್ರೀಮ್ಸ್ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ತೆಲುಗು ನಿರ್ಮಾಪಕ ಪ್ರವೀಣ್ ರಾಜ್, ಸುರೇಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಉಡುಪಿ, ಹೈದರಾಬಾದ್ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ತೆರೆಗೆ ಬರಲು ತಯಾರಿ ನಡೆಸುತ್ತಿರುವ ‘ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ’ ಚಿತ್ರ ಡಿಸೆಂಬರ್ ಅಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆ ಇದೆ.