Advertisement

ಗುಬ್ಬಚ್ಚಿ ಇಲ್ಲ, ಗುಬ್ಬಚ್ಚಿ ಗೂಡೂ ಇಲ್ಲ !

10:09 AM Mar 16, 2020 | mahesh |

ಮಾರ್ಚ್‌ 20ರಂದು ವಿಶ್ವ ಗುಬ್ಬಚ್ಚಿ ದಿನ. ಮನುಷ್ಯಸ್ನೇಹಿ ಗುಬ್ಬಚ್ಚಿಗಳನ್ನು ನಾವೇ ದೂರ ಓಡಿಸುತ್ತಿದ್ದೇವೆಯೇ..ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾಗಿದೆ.

Advertisement

ಎರಡು, ಮೂರು ದಶಕಗಳ ಹಿಂದೆ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಗುಬ್ಬಚ್ಚಿಗಳ ಕಲರವ ಕೇಳುತ್ತಿತ್ತು. ಮನೆಯ ಜಗುಲಿಯಲ್ಲಿ ಬಿದ್ದ ಕಾಳು, ಅಂಗಳದಲ್ಲಿ ಬೆಳೆದ ಹುಲ್ಲಿನ ಬೀಜ, ಹುಳುಹುಪ್ಪಟೆಗಳನ್ನು ಹೆಕ್ಕಿ ತಿಂದು ಅವು ಹೋಗುತ್ತಿದ್ದವು. ಮೊಮ್ಮಕ್ಕಳಿಗೆ ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲೂ ಗುಬ್ಬಕ್ಕನ ವಿಷಯ, ಹಾಡು ಇದ್ದೇ ಇರುತ್ತಿತ್ತು. ಮನೆಯ ಪುಟಾಣಿಗಳಿಗೆ ಹಕ್ಕಿಗಳ ಪರಿಚಯ ಗುಬ್ಬಕ್ಕನಿಂದಲೇ ಆಗುತ್ತಿತ್ತು! ಆದರೆ ಇಂದು ಮಕ್ಕಳಿಗೆ ಕಥೆ ಹೇಳುವ ಅಜ್ಜಿಯಂದಿರು ಅಪರೂಪವಾಗುತ್ತಿದ್ದಾರೆ, ಪ್ರೀತಿಯ ಗುಬ್ಬಚ್ಚಿಗಳೂ ಕಣ್ಮರೆಯಾಗಿವೆ. ಇಂದಿನ ಪುಟಾಣಿಗಳು ಚಿತ್ರಗಳಲ್ಲಿ ಮಾತ್ರ ಗುಬ್ಬಚ್ಚಿಗಳನ್ನು ನೋಡಿ ಖುಷಿ ಪಡುವ ಸ್ಥಿತಿ ಬಂದಿದೆ!

ಗುಬ್ಬಚ್ಚಿಗಳು ಕಳೆದ ಕೆಲವು ದಶಕಗಳಿಂದ ಕ್ರಮೇಣ ಮರೆಯಾಗಿರುವುದು ಕರಾವಳಿಗಷ್ಟೇ ಸೀಮಿತ ಅಲ್ಲ; ಇವು ಜಗತ್ತಿನಾದ್ಯಂತ ಮರೆಯಾಗುತ್ತಿವೆ. ಮಂಗಳೂರಿನ ಬಂದರು ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಬ್ಬಚ್ಚಿಗಳು ಕಾಣಲು ಸಿಗುತ್ತಿವೆ. ಈ ಪ್ರದೇಶದಲ್ಲಿ ದಿನಸಿ ವಸ್ತುಗಳ ಸಾಗಣೆ, ದಾಸ್ತಾನು, ವ್ಯವಹಾರ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಹೀಗಾಗಿ, ಅಲ್ಲಿನ ಪರಿಸರದಲ್ಲಿ ದವಸಧಾನ್ಯ, ಕಾಳುಕಡ್ಡಿ ಸಾಕಷ್ಟು ಲಭ್ಯ. ಅಲ್ಲಿ ಗುಬ್ಬಚ್ಚಿಗಳಿಗೆ ಆಹಾರದ ಕೊರತೆ ಇಲ್ಲ. ಇದೇ ರೀತಿ ಇತರೆಡೆಯೂ ಪೇಟೆ ಬದಿಯ ದಿನಸಿ ಅಂಗಡಿಗಳ ಪರಿಸರದಲ್ಲಿ ಗುಬ್ಬಚ್ಚಿಗಳು ಕಾಣಲು ಸಿಗುವುದಾದರೂ ಅವುಗಳ ಸಂಖ್ಯೆ ಕಡಿಮೆಯಾಗಿದೆ.

ವಿಟ್ಲದ ಪಿ. ಜನಾರ್ದನ ಪೈ ದಿನಸಿ ಅಂಗಡಿಯು ಐದು ದಶಕಗಳಿಗಿಂತಲೂ ಹಳೆಯದು. ಈ ಅಂಗಡಿಯ ಮಾಲಕ, ಪಕ್ಷಿ ಛಾಯಾಗ್ರಾಹಕ ಆರ್‌. ಕೆ. ಪೈ ಅವರು, “”ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಅಂಗಡಿಗೆ ಗುಬ್ಬಚ್ಚಿಗಳು ಗುಂಪುಗುಂಪಾಗಿ ಬರುತ್ತಿದ್ದವು. ಅವುಗಳ ಓಡಾಟಕ್ಕೆ ಮುಕ್ತ ವಾತಾವರಣವಿತ್ತು. ನಾವೆಲ್ಲ ಅವುಗಳನ್ನು “ಅಂಗಡಿ ಪಕ್ಕಿ’ ಎಂದೇ ಕರೆಯುತ್ತಿದ್ದೆವು. ಗೋಣಿ ಚೀಲಗಳ ನೂಲುಗಳನ್ನು ಕೊಕ್ಕಿನಿಂದ ಕಿತ್ತುಕೊಂಡು ಹೋಗಿ ಗೂಡು ಕಟ್ಟುತ್ತಿದ್ದವು. ಅಂಗಡಿಯ ಶಟರ್‌ಗಳ ಸಂದಿನಲ್ಲಿ, ಫೋಟೋಗಳ ಹಿಂಭಾಗದಲ್ಲಿ ಸಂಸಾರ ಹೂಡುತ್ತಿದ್ದವು. ಜತೆಗೆ ಗೋಡೆಯ ಸಂದಿಗೊಂದುಗಳಲ್ಲಿ ರಟ್ಟಿನ ಕೃತಕ ಗೂಡುಗಳನ್ನೂ ಮಾಡಿ ನಾವೇ ಇಡುತ್ತಿದ್ದೆವು. ಯಾವತ್ತೂ ಗುಬ್ಬಚ್ಚಿಗಳು ನಮಗೆ ಕಿರಿಕಿರಿ ಅನ್ನಿಸಿರಲಿಲ್ಲ. ಆದರೆ, ಇಂದು ಗುಬ್ಬಚ್ಚಿಗಳು ಹಾರಿ ಹೋಗಿವೆ. ಅಂಗಡಿ ಮಾತ್ರ ಉಳಿದಿದೆ” ಎನ್ನುತ್ತಾರೆ.

ದಟ್ಟ ಕಾಡಿನಲ್ಲಿ, ಮರುಭೂಮಿಯಲ್ಲಿ ಅಥವಾ ನಿರ್ಜನ ತಾಣಗಳಲ್ಲಿ ಗುಬ್ಬಚ್ಚಿಗಳನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ, ಅವು ಯಾವತ್ತೂ ಮನುಷ್ಯನ ಪರಿಸರದಲ್ಲೇ ಜೀವಿಸುವಂಥವು. ಹೀಗಿದ್ದರೂ ಅವು ಮರೆಯಾಗುತ್ತಿರುವುದೇಕೆ? ಈಗಂತೂ ಮೊಬೈಲ್‌ ಫೋನ್‌ಗಳು ಸರ್ವವ್ಯಾಪಿ. ಮೈಕ್ರೋವೇವ್‌ ಟವರ್‌ಗಳು ಉಂಟುಮಾಡುತ್ತಿರುವ ಮಾಲಿನ್ಯ ಗುಬ್ಬಚ್ಚಿಗಳಿಗೆ ಮಾರಕವಾಗಿವೆ ಎಂಬ ಅಭಿಪ್ರಾಯವಿದೆ. ಗುಬ್ಬಚ್ಚಿಗಳ ಸಂಖ್ಯೆ ಕಡಿಮೆ ಆಗಿದೆ ನಿಜ. ಆದರೆ, ಮಾನವ ಪರಿಸರದಲ್ಲೇ ಇರುವ ಪಾರಿವಾಳಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಮೈಕ್ರೋವೇವ್‌ ಟವರ್‌ಗಳಿಂದ ಪಾರಿವಾಳಗಳಿಗೇಕೆ ತೊಂದರೆಯಾಗಿಲ್ಲ ಎಂಬ ವಾದವೂ ಇದೆ. ಆದರೆ, ಬದಲಾವಣೆಯನ್ನು ಎಲ್ಲ ಹಕ್ಕಿಗಳೂ ಸಹಿಸಿಕೊಳ್ಳುವ ರೀತಿ ಒಂದೇ ತೆರನಾಗಿ ಇರುವುದಿಲ್ಲ ಅಲ್ಲವೇ.

Advertisement

ಒಟ್ಟಿನಲ್ಲಿ ಜನರ ಬದಲಾದ ಜೀವನಶೈಲಿಯೇ ಗುಬ್ಬಚ್ಚಿಗಳು ಮರೆಯಾಗಲು ಮುಖ್ಯ ಕಾರಣ. ಅತಿಯಾದ ನಗರೀಕರಣ, ಮನೆ, ಕಟ್ಟಡಗಳ ವಾಸ್ತುಶಿಲ್ಪದಲ್ಲಾದ ಬದಲಾವಣೆ, ಕೀಟನಾಶಕಗಳ ಬಳಕೆ, ಆವಾಸನೆಲೆ (ಹ್ಯಾಬಿಟೆಟ್‌) ಹಾಗೂ ಗೂಡುಕಟ್ಟುವ ತಾಣಗಳು ನಾಶವಾಗಿರುವುದು. ಆಹಾರ ಮೂಲದಲ್ಲಾದ ಕೊರತೆ, ಸ್ಥಳೀಯ ಸಸ್ಯಗಳ ನಾಶ ಇವೆಲ್ಲವೂ ಗುಬ್ಬಚ್ಚಿಗಳು ಮರೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ಮಂಗಳೂರಿನ ಪಕ್ಷಿಪ್ರೇಮಿ ಆರ್ನಾಲ್ಡ್‌ ಎಂ. ಗೊವಿಯಸ್‌.

ಹಿಂದೆ ಎಲ್ಲೆಲ್ಲೂ ಹೆಂಚಿನ ಮನೆಗಳಿದ್ದವು. ಅಂತಹ ಮನೆಯೊಳಗೆ ಗುಬ್ಬಚ್ಚಿಗಳಿಗೆ ಬರಲು ಸಾಕಷ್ಟು ಅವಕಾಶಗಳಿದ್ದವು. ಹೆಂಚಿನ ಮನೆಯ ಸಂದುಗೊಂದುಗಳಲ್ಲಿ ಅವು ಗೂಡು ಕಟ್ಟುತ್ತಿದ್ದವು. ಜಗುಲಿಯ ಗೋಡೆಗಳಿಗೆ ಬಾಗಿಸಿ ಕಟ್ಟಿದ ದೇವರ ಫೋಟೋಗಳ ಹಿಂದೆ ಗೂಡುಕಟ್ಟಿ ಸಂಸಾರ ನಡೆಸುತ್ತಿದ್ದವು. ಗೂಡು ಕಟ್ಟಲು ಬೇಕಾದ ಒಣಗಿದ ಹುಲ್ಲು, ಹತ್ತಿನಾರುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಮನೆಯ ಪರಿಸರದಲ್ಲೇ ಓಡಾಡುತ್ತಿದ್ದವು. ಆದರೆ, ಈಗಿನ ಮನೆಗಳೆಲ್ಲ ಭದ್ರವಾದ ಸಿಮೆಂಟ್‌ ಕೋಟೆ. ಮನೆಯೊಳಗೆ ಗುಬ್ಬಚ್ಚಿಗಳು ಬರಲು ಅವಕಾಶಗಳೇ ಇಲ್ಲ.

ಅಂಗಡಿಗಳಲ್ಲಿ, ಮಾಲ್‌ಗ‌ಳಲ್ಲಿ ಸ್ವತ್ಛ ಮಾಡಿ ಮೊದಲೇ ತೂಕ ಮಾಡಿಟ್ಟ ಧಾನ್ಯಗಳ ರೆಡಿ ಪೊಟ್ಟಣ. ಮನೆಯ ಪಡಸಾಲೆಯಲ್ಲಿ ಅಮ್ಮನೋ, ಅಜ್ಜಿಯೋ ಗೆರಸೆಯಲ್ಲಿ ಕಾಳುಗಳನ್ನು ಶುಚಿಗೊಳಿಸುವ ದೃಶ್ಯವೇ ಕಾಣದು. ಮನೆಯಂಗಳದಲ್ಲೇ ಒಂದು ಸೂಕ್ಷ್ಮ ಪರಿಸರ ವ್ಯವಸ್ಥೆ (ಮೈಕ್ರೊ ಇಕೊ ಸಿಸ್ಟಂ) ಸೃಷ್ಟಿಯಾಗುತ್ತಿತ್ತು. ಆದರೆ ಇಂದು? ಹೊಲಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಆಹಾರ ಧಾನ್ಯಗಳು ಕೆಡದಿರಲಿ ಅಂತ ರಾಸಾಯನಿಕಗಳನ್ನು ಸೇರಿಸುತ್ತಿದ್ದಾರೆ. ಇದರ ಪರಿಣಾಮ ಗುಬ್ಬಚ್ಚಿಗಳ ಆರೋಗ್ಯದ ಮೇಲೆ ಆಗಿರಬಹುದು. ಅವುಗಳ ಮೊಟ್ಟೆಯ ಕವಚ ತೆಳುವಾಗಿ ಬೇಗ ಒಡೆಯಬಹುದು. ಅಲ್ಲದೆ ಹಾರ್ಮೋನುಗಳ ವ್ಯತ್ಯಾಸದಿಂದ ಗುಬ್ಬಚ್ಚಿಗಳ ಮೊಟ್ಟೆ ಇಡುವ ಸಾಮರ್ಥ್ಯ ಕಡಿಮೆ ಆಗಿರಬಹುದು ಎನ್ನುತ್ತಾರೆ ತಜ್ಞರು. ಈಗ ಹೂವಿನ ತೋಟಗಳು, ದೇಶಿ ಗಿಡಗಳು ಕಣ್ಮರೆಯಾಗಿವೆ. ಅವುಗಳ ಬದಲು ಹೂವು ಬಿಡದ, ಮಕರಂದ ನೀಡದ, ವಿಷಕಾರಿ (ಟಾಕ್ಸಿಕ್‌ ) ಎಲೆಗಳಿರುವ ಅಲಂಕಾರಿಕ ಗಿಡಗಳು ಮನೆಯಂಗಳದಲ್ಲಿ ಬೆಳೆಯುತ್ತಿವೆ. ಮನೆಯ ಪರಿಸರದಲ್ಲಿದ್ದ ತೆರೆದ ಭೂಮಿಯಲ್ಲಿ ಕಳೆ, ಹುಲ್ಲುಗಳು ಬೆಳೆಯದಂತೆ ಇಂಟರ್‌ಲಾಕ್‌, ಕಲ್ಲುಚಪ್ಪಡಿಗಳನ್ನು ಹಾಸಲಾಗುತ್ತಿದೆ. ಹುಲ್ಲಿನ ಬೀಜಗಳನ್ನು ತಿನ್ನಲು ಬರುತ್ತಿದ್ದ ಗುಬ್ಬಚ್ಚಿಗಳಿಗೆ ಈಗ ಅದೂ ಇಲ್ಲ. ಗೂಡು ಕಟ್ಟಲು ಹುಲ್ಲಿನ ಎಸಳೂ ಇಲ್ಲ. ಗುಬ್ಬಿ ಹೇಗೆ ಮನೆ ಕಟ್ಟಬೇಕು ಹೇಳಿ!

ಗುಬ್ಬಕ್ಕನ ಬಯೋಗ್ರಫಿ
ಗುಬ್ಬಚ್ಚಿ ಪ್ರಧಾನವಾಗಿ ಬೀಜ ತಿನ್ನುವ ಹಕ್ಕಿ. ದಪ್ಪ ಹಾಗೂ ಗಟ್ಟಿ ಬೀಜಗಳನ್ನು ಒಡೆಯಲು ಅನುಕೂಲವಾಗುವಂತೆ‌ ಕೊಕ್ಕು ತ್ರಿಕೋನಾಕಾರವಾಗಿ ಮೋಟಾಗಿದೆ. ಗಂಡು ಮತ್ತು ಹೆಣ್ಣು ದಂಪತಿಯಂತೆ ಬಾಳುತ್ತವೆ. ಸಾಮಾನ್ಯವಾಗಿ 4 ಮೊಟ್ಟೆಗಳನ್ನು ಇಟ್ಟು, 14 ದಿನ ಕಾವು ಕೊಡುವ ಜವಾಬ್ದಾರಿ ಹೆಣ್ಣಿನದು. ಮರಿಗಳಿಗೆ ಗಂಡು, ಹೆಣ್ಣು ಎರಡೂ ಉಣಿಸುತ್ತವೆ. ಮರಿಗಳಿಗೆ ಆಗಾಗ ಸಣ್ಣ, ಮೃದು ದೇಹದ ಕೀಟ, ಹುಳಗಳನ್ನು ತಿನ್ನಿಸುವುದೂ ಇದೆ. ಮರಿಗಳಿಗೆ ಪ್ರೊಟೀನು ಬೇಕಲ್ಲ , ಅದಕ್ಕೆ !
ಗುಬ್ಬಚ್ಚಿ ಬೂದುಮಿಶ್ರಿತ ತಿಳಿ ಕಂದು ಹಕ್ಕಿ. ಗಂಡು ಹಕ್ಕಿಯ ನೆತ್ತಿ ಬೂದು. ಮೈ ಹಾಗೂ ಕೆನ್ನೆ ಬೂದು ಮಿಶ್ರಿತ ಕಂದು. ಪಕ್ಕೆ ಹಾಗೂ ಹೊಟ್ಟೆ ಬಿಳಿ. ಕಣ್ಣಿನ ಸುತ್ತ ಹಾಗೂ ಗದ್ದ, ಎದೆ ಕಪ್ಪು. ಹೆಣ್ಣು ಹಕ್ಕಿಯ ಕೆನ್ನೆ, ಕತ್ತು ಹಾಗೂ ತಳಭಾಗ ಬಿಳಿ. ಫಿಂಚ್‌ ಹಕ್ಕಿ, ಮುನಿಯ, ಗೀಜಗಗಳು ಗುಬ್ಬಚ್ಚಿಯ ಸೋದರ ಸಂಬಂಧಿಗಳು. ಗುಂಪುಗುಂಪಾಗಿ ವಾಸಿಸುವುದು ಕ್ರಮ. ಪಾಸ್ಸರ್‌ ಡೊಮೆಸ್ಟಿಕಸ್‌ ಪಾಸ್ಸರಿಫಾರ್ಮಿಸ್‌ ಗಣಕ್ಕೆ ಸೇರಿದೆ.

ರಾಜೇಶ್‌ ಶ್ರೀವನ

Advertisement

Udayavani is now on Telegram. Click here to join our channel and stay updated with the latest news.

Next