Advertisement

ಸದ್ದು ಗದ್ದಲ ಆಗದಿರಲಿ ಮನೆ ಒಳಗ…

04:00 AM Nov 12, 2018 | |

ಮನೆ ಅಂದ ಮೇಲೆ ನೆರೆಹೊರೆಯಲ್ಲಿ ಎದುರು ಹಾಗೂ ಹಿಂದಿನ ಕ್ರಾಸ್‌ಗಳಲ್ಲಿ ತರಹೇವಾರಿಯ ಜನ ಇರುತ್ತಾರೆ. ಅವರೆಲ್ಲ ಯಾವುದೋ ಹಬ್ಬ, ಯಾವುದೋ ಉತ್ಸವ ಮತ್ಯಾವುದೋ ಮೆರವಣಿಗೆಯ ಹೆಸರಿನಲ್ಲಿ ಜೋರು ಶಬ್ದ ಮಾಡುತ್ತಲೇ ಇರುತ್ತಾರೆ. ಆ ಸದ್ದು ಗದ್ದಲದಿಂದ ಪಾರಾಗಲು ಹಲವು ಉಪಾಯಗಳಿವೆ….

Advertisement

ಹಬ್ಬ ಬಂದರೆ ಸದ್ದು ಹಾಗೂ ಅದರಿಂದ ಒಂದಷ್ಟು ಗದ್ದಲ ಆಗುವುದುಂಟು. ನಾವು ಶಬ್ದಮಾಡುವಾಗ ನಮಗೆ ಹೆಚ್ಚು ಕಿರಿಕಿರಿ ಆಗದಿದ್ದರೂ, ಬೇರೆಯವರು, ಅದರಲ್ಲೂ ಹೊತ್ತಲ್ಲದ ಹೊತ್ತಿನಲ್ಲಿ, ವಯಸ್ಸಾದವರು, ಸಣ್ಣ ಮಕ್ಕಳು, ಅನಾರೋಗ್ಯದಿಂದ ಇದ್ದಾಗ ಶಬ್ಧ ಆದರೂ ಬೆಚ್ಚಿಬೀಳುವುದು, ಬೇಸರ ಪಡುವುದು ತಪ್ಪಿದ್ದಲ್ಲ. ಬರೀ ದೀಪಾವಳಿಯ ಪಟಾಕಿಯ ಶಬ್ಧಗಳಲ್ಲ, ಇತರೆ ಸಮಯದಲ್ಲೂ ಜಾಗಟೆ, ಶಂಖನಾಧ, ತಮಟೆ, ಇತ್ಯಾದಿ ಸದ್ದು ಇದ್ದದ್ದೇ.

ಆದರೆ ಇವು ಪಟಾಕಿಯಷ್ಟು ಕಠೊರವಾಗಿರದೆ, ಕಿವಿಗೆ ಇಂಪಾಗಿಯೂ ಇರುವುದರಿಂದ, ನಮಗೆ ಅಷ್ಟೇನೂ ಕಿರಿಕಿರಿ ಉಂಟು ಮಾಡುವುದಿಲ್ಲ.  ವಾಹನಗಳಿಗೆ ಸೈಲೆನ್ಸರ್ ಕಡ್ಡಾಯವಾಗಿದ್ದರೂ ಅವನ್ನೆಲ್ಲ ಕಿತ್ತು ರಸ್ತೆಯಲ್ಲಿ ಗದ್ದಲ ಎಬ್ಬಿಸುತ್ತ ಇತ್ತಿಂದತ್ತ ಅತ್ತಿಂದಿತ್ತ ತಿರುಗುವುದೇ ಒಂದು ಹುಡುಗಾಟವೂ ಆಗಿದೆ. ಇದನ್ನೆಲ್ಲ ಸಹಿಸಿಕೊಳ್ಳುವುದು ನಮಗೆಲ್ಲ ಒಂದು ಮಟ್ಟಕ್ಕೆ ರೂಢಿಯಾಗಿದೆ. ಆದರೂ ಮನೆಕಟ್ಟುವಾಗ ಮುಂಜಾಗರೂಕತೆ ವಹಿಸಿದರೆ  ಈ ಸದ್ದು ನಮಗೆ ಗದ್ದಲ ಆಗದಂತೆ ನೋಡಿಕೊಳ್ಳಬಹುದು.

ಶಬ್ದವು ತರಂಗಗಳ ರೂಪದಲ್ಲಿರುವ ಶಕ್ತಿಯ ಒಂದು ಅವತಾರ. ಅದು ಎಷ್ಟು ಬೇಗ ಮನೆಯೊಳಗೆ ದುರ್ಬಲ ಆಗುತ್ತದೋ ಅಷ್ಟು ಕಡಿಮೆ ಗದ್ದಲವನ್ನು ಉಂಟು ಮಾಡುತ್ತದೆ. ಶಬ್ದವು ಮನೆಯನ್ನು ಪ್ರವೇಶಿಸಿ ಪ್ರತಿಫ‌ಲಿಸುತ್ತ ಹೆಚ್ಚು ಹೊತ್ತು ಇದ್ದಷ್ಟೂ ನಮಗೆ ಕಿರಿಕಿರಿ ಹೆಚ್ಚು ಆಗುತ್ತದೆ. ಶಬ್ದದ ಶಕ್ತಿಯನ್ನು ಕುಂಠಿತಗೊಳಿಸಲು ಅನೇಕ ವಿಧಾನಗಳಿದ್ದರೂ ಸಾಮಾನ್ಯವಾಗಿ ಮನೆಯ ವಿನ್ಯಾಸ ಹಾಗೂ ಪೀಠೊಪಕರಣಗಳ ಮೂಲಕ ನಿಗ್ರಹಿಸುವುದು ಸುಲಭ.

ಗೋಡೆಗಳು ಎದುರು ಬದಿರು ಹೆಚ್ಚು ಉದ್ದ ಇದ್ದಷ್ಟೂ, ಶಬ್ದವು ಗದ್ದಲ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದಾಗಿಯೇ ಉತ್ತಮ ದರ್ಜೆಯ ಸಭಾಂಗಣಗಳನ್ನು ವಿನ್ಯಾಸ ಮಾಡುವಾಗ ಅದನ್ನು ಕೈಬೀಸಣಿಗೆ – ಫ್ಯಾನ್‌ ಆಕಾರದಲ್ಲಿ ಮಾಡಲಾಗುತ್ತದೆ. ದೊಡ್ಡ ಹಾಲ್‌ ಅಥವಾ ರೂಮಿನಲ್ಲಿ ಎದಿರು ಬದಿರು ಗೋಡೆಗಳಿರುವುದನ್ನು ತಡೆಯುವುದು ಕಷ್ಟವಾದರೂ ಇವನ್ನು ಒಂದು ಕೋನದಲ್ಲಿ ಇರಿಸಿದರೆ, ಶಬ್ದದ ಶಕ್ತಿಯು ಬೇಗ ಕ್ಷೀಣಿಸಿ, ಗದ್ದಲವನ್ನು ಉಂಟುಮಾಡಲು ಆಗುವುದಿಲ್ಲ. 

Advertisement

ಟನಲಿಂಗ್‌ ಎಫೆಕ್ಟ್ ತಪ್ಪಿಸಿ: ನೀವೂ ಗಮನಿಸಿರಬಹುದು, ಓಣಿ ಅಥವಾ ಕಿರಿದಾದ ಆದರೆ ಉದ್ದವಾದ ಜಾಗದಲ್ಲಿ ಒಂದು ಕೊನೆಯಿಂದ ಮತ್ತೂಂದು ಕೊನೆಗೆ ಶಬ್ದವು ಸುಲಭದಲ್ಲಿ ಪ್ರಯಾಣಿಸುತ್ತದೆ. ಮನೆಯ ಅಕ್ಕಪಕ್ಕ ಬಿಟ್ಟಿರುವ ತೆರೆದ ಸ್ಥಳ – ಓಪನ್‌ ಸ್ಪೇಸ್‌ ಸಾಮಾನ್ಯವಾಗಿ ಓಣಿಯಂತಿದ್ದು, ಇದರ ಮೂಲಕ ಮನೆಯ ಹಿಂಭಾಗಕ್ಕೂ ರಸ್ತೆಯ ಶಬ್ದವು ನಿರಾಯಾಸವಾಗಿ ಚಲಿಸುತ್ತದೆ. ಆದುದರಿಂದ ನೇರಾತಿ ನೇರವಾಗಿ ಓಣಿಯಂತೆ ಬಿಡದೆ, ಸ್ಟೆಪ್‌ ಮಾದರಿಯಲ್ಲಿ ಆಫ್ಸೆಟ್‌ ಬಿಡಬಹುದು ಅಂದರೆ ಮನೆಯ ಮುಂಭಾಗದಲ್ಲಿ ಬರುವ ಸ್ಥಳಕ್ಕೆ ಹೆಚ್ಚು ಅಗಲದ ಓಣಿ ಬಿಟ್ಟರೂ, ಹಿಂದೆ ಕಡಿಮೆ ಮಾಡಿಕೊಳ್ಳಬಹುದು.

ಹೀಗೆ ಮಾಡುವುದರ ಮೂಲಕ, ನಾವು ಅನಿವಾರ್ಯವಾಗಿ ಮನೆಯ ಮುಂಭಾಗವನ್ನು ಒಂದಷ್ಟು ಶಬ್ದಕ್ಕೆ ಒಡ್ಡಿಕೊಳ್ಳುವಂತೆ ಮಾಡಿದ್ದರೂ, ಹೆಚ್ಚು ಖಾಸಗಿತನ ಬಯಸುವ ಮಲಗುವ ಕೋಣೆಗಳಿಗೆ ಹೆಚ್ಚು ಶಾಂತಿಯುತ ಪರಿಸರವನ್ನು ಮೀಸಲು ಇಡಬಹುದು.  ಯಾವಾಗಲೂ ಉದ್ದದ ಕೋಣೆ ಚಚ್ಚೌಕದ ಕೋಣೆಗಿಂತಲೂ ಹೆಚ್ಚು ಗದ್ದಲಮಯವಾಗಿರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಕೋಣೆಯ ಎದಿರು ಬದಿರು ಗೋಡೆಗಳು ಸಮಾನಾಂತರದಲ್ಲಿ ಇರದೆ ಕೋನದಲ್ಲಿ ಇದ್ದರೆ, ಶಬ್ಧ ಪ್ರತಿಫ‌ಲನಗೊಳ್ಳದೆ, ಹೆಚ್ಚು ಶಾಂತಿಯುತವಾಗಿರುತ್ತದೆ. 

ಆಫ್ಸೆಟ್‌ – ತೆರೆದ ಸ್ಥಳ ಕೋನದಲ್ಲಿರಲಿ: ಮನೆಯ ರಸ್ತೆಗೆ ಸಮಾನಂತರದಲ್ಲಿದ್ದರೆ, ಎಲ್ಲ ಶಬ್ದವೂ ಒಳಾಂಗಣವನ್ನು ಸುಲಭದಲ್ಲಿ ಪ್ರವೇಶಿಸುತ್ತದೆ. ಅದೇ ಮನೆಯನ್ನು ಒಂದು ಕೋನದಲ್ಲಿ ಇರಿಸಿದರೆ ಶಬ್ದದ ಶಕ್ತಿ ಕುಂಠಿತವಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಜರು ಕೋಟೆಗಳನ್ನು ಕಟ್ಟುವಾಗ ನಕ್ಷತ್ರದ ಆಕಾರದಲ್ಲಿ ಕಟ್ಟುತ್ತಿದ್ದರು. ಶಕ್ತಿಶಾಲಿ ಫಿರಂಗಿಗಳ ಗುಂಡುಗಳೂ ಕೂಡ ಕೋನದಲ್ಲಿರುವ ಕೋಟೆಗೋಡೆಗಳಿಗೆ ಹೆಚ್ಚು ಹಾನಿ ಉಂಟುಮಾಡಲು ಆಗುತ್ತಿರಲಿಲ್ಲ.

ಹಾಗಾಗಿ, ನೂರಾರು ವರ್ಷಗಳ ಹಿಂದೆ ನಿರ್ಮಿಸಿದ ಕೋಟೆಗಳು ನಮಗೆ ಈಗಲೂ ನೋಡಲು ಸುಸ್ಥಿತಿಯಲ್ಲಿ ಸಿಗುತ್ತವೆ. ಮನೆಯ ವಿನ್ಯಾಸ ಮಾಡುವಾಗ ನಾನಾ ಕಾರಣಗಳಿಂದಾಗಿ ಮುಂಭಾಗದ ಗೋಡೆಯನ್ನು ಕೋನದಲ್ಲಿ ಇರಿಸಲು ಆಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ಕಡೇಪಕ್ಷ ಕಿಟಕಿ ಬಾಗಿಲುಗಳನ್ನಾದರೂ ಒಂದು ಕೋನದಲ್ಲಿ ಇರಿಸಿದರೆ, ಶಬ್ದಾಘಾತದ ನೇರ ಪ್ರಹಾರದಿಂದ ರಕ್ಷಣೆ ಪಡೆಯಬಹುದು! ಗೋಡೆಗಳು ನೇರವಾಗಿದ್ದರೂ ಕಿಟಕಿಗಳಿಗೆ ಬಾಕ್ಸ್‌ – ಪೆಟ್ಟಿ ಮಾದರಿಯಲ್ಲಿ ಅಂದರೆ, ಸುತ್ತಲೂ ಸೂಕ್ತ ಹೊರಚಾಚುಗಳನ್ನು ನೀಡಿ, ನಮಗೆ ಬೇಕಾದ ಕೋನದಲ್ಲಿ ಕಿಟಕಿ ಬಾಗಿಲುಗಳನ್ನು ಇಡಬಹುದು.

ಶಬ್ದ ನಿಯಂತ್ರಣಕ್ಕೆ ಫಿನ್‌: ಶಬ್ದದ ಶಕ್ತಿ ತರಂಗದ ರೂಪದಲ್ಲಿಯೂ ಚಲಿಸುವ ಕಾರಣ ಅದನ್ನು ಸೂಕ್ತ ಅಡೆ ತಡೆ -ಅಡೆತಡೆಗಳನ್ನು ನೀಡುವುದರ ಮೂಲಕವೂ ನಿಯಂತ್ರಿಸಬಹುದು. ನೀರಿನಲ್ಲಿ ಮೀನುಗಳು ಚಲಿಸಲು ಹಾಗೂ ದಿಕ್ಕನ್ನು ಬದಲಿಸಲು ಈಜು ರೆಕ್ಕೆಗಳನ್ನು ಬಳಸುವ ರೀತಿಯಲ್ಲೇ ಕಿಟಕಿ ಬಾಗಿಲಿನ ಸುತ್ತ ಫಿನ್‌ಗಳನ್ನು ಬಳಸಬಹುದು. ಈ ರೆಕ್ಕೆ ಮಾದರಿಯ ಹಲಗೆಗಳು ಶಬ್ದತರಂಗಗಳನ್ನು ದೂರ ದೂಡಿ ಕಿಟಕಿ ಹಾಗೂ ಇತರೆ ತೆರೆದ ಸ್ಥಳಗಳ ಮೂಲಕ ಒಳಾಂಗಣವನ್ನು ಪ್ರವೇಶಿಸದಂತೆ ತಡೆಯುತ್ತವೆ.

ನಮ್ಮಲ್ಲಿ ವಿನಾಕಾರಣ ಹೆಚ್ಚುವರಿಯಾಗಿ ಫಾಲ್ಸ್‌ ಬೀಮ್ಸ್‌ – ನಕಲಿ ತೊಲೆ, ಕಾಲಂ – ಕಂಬಗಳನ್ನು ಎಲಿವೇಷನ್‌ ಸುಂದರ ಗೊಳಿಸಲೆಂದು ನೀಡಲಾಗುತ್ತದೆ. ಈ ರೀತಿಯಾಗಿ ಮನೆಯ ಸೌಂದರ್ಯ ಹೆಚ್ಚಿಸುವ ಬದಲು ಅತಿ ಮುಖ್ಯವಾದ ಶಬ್ದ ನಿಗ್ರಹ ಕೆಲಸ ಮಾಡುವ ಫಿನ್‌ಗಳನ್ನೇ ಕಲಾತ್ಮಕವಾಗಿ ಮನೆಯ ಮುಮ್ಮುಖದಲ್ಲಿ ವಿನ್ಯಾಸ ಮಾಡಬಹುದು.  ಈ ಫಿನ್‌ಗಳನ್ನು ಸಾಮಾನ್ಯವಾಗಿ ಕಾಂಕ್ರಿಟ್‌ ಇಲ್ಲವೇ ಇಟ್ಟಿಗೆ ಅಥವಾ ಕಾಂಕ್ರಿಟ್‌ ಬ್ಲಾಕ್‌ನಿಂದಲೇ ಮಾಡಬಹುದಾದ ಕಾರಣ ಹೆಚ್ಚು ದುಬಾರಿಯೂ ಆಗುವುದಿಲ್ಲ!  

ಡಬಲ್‌ ಕರ್ಟನ್‌ ಬಳಸಿ: ಸಾಮಾನ್ಯವಾಗಿ ಮನೆಯ ಒಳಾಂಗಣದ ಖಾಸಗಿತನ ಕಾಪಾಡಿಕೊಳ್ಳಲು ಕಿಟಕಿಗಳಿಗೆ ತೆಳ್ಳನೆಯ ಪರದೆಯನ್ನು ತೂಗು ಬಿಡಲಾಗುತ್ತದೆ. ಈ ಪರದೆ ಒಳಾಂಗಣದ ನೋಟವನ್ನು ಹೊರಗೆ ಬಿಟ್ಟುಕೊಡದಿದ್ದರೂ ಯಥೇತ್ಛವಾಗಿ ದಿನದ ಬೆಳಕನ್ನು ಒಳಗೆ ಬಿಡುತ್ತದೆ. ದಪ್ಪನೆಯ ಪರದೆಯನ್ನು ಹಾಕಿದರೆ ಮನೆಯೊಳಗೆ ಬೆಳಕು ಹರಿದುಬರುವುದಿಲ್ಲ.

ಆದರೆ ದಪ್ಪನೆಯ ಪರದೆಗಳಿಗೆ ಸಾಕಷ್ಟು ಶಬ್ದಶಕ್ತಿಯನ್ನು ಹೀರಿಕೊಳ್ಳುವ ಸಾಮಥ್ಯ ಇರುತ್ತದೆ. ಆದುದರಿಂದ ಕಿಟಕಿಗಳಿಗೆ ಒಂದು ಪರದೆ ರಾಡ್‌ ಜೊತೆಗೆ ಮತ್ತೂಂದನ್ನೂ ಅಳವಡಿಸಿದರೆ, ತೆಳ್ಳನೆಯ ಪರದೆಯೊಂದಿಗೆ ದಪ್ಪನೆಯ ಪರದೆಯನ್ನೂ ಹಾಕಬಹುದು. ನಮ್ಮ ಅಗತ್ಯಕ್ಕೆ ತಕ್ಕಂತೆ ದಪ್ಪನೆಯ, ಇಲ್ಲವೇ ತೆಳು ಪರದೆಯನ್ನು ಹಾಕಿಕೊಂಡು ಶಬ್ದ ಪ್ರಹಾರದಿಂದ ಸುಲಭದಲ್ಲಿ ರಕ್ಷಣೆ ಪಡೆಯಬಹುದು. ದಪ್ಪನೆಯ ಪರದೆಯನ್ನು ಹಾಕುವಾಗ ಸಾಕಷ್ಟು ಮಡಚುಗಳು ಇರುವಂತೆ ಹೊಲಿಸಬೇಕು. ಆಗ ಹೆಚ್ಚು ಪ್ರಮಾಣದಲ್ಲಿ ಶಬ್ದದ ಶಕ್ತಿಯು ಹೀರಲ್ಪಡುತ್ತದೆ.

ಮಾಹಿತಿಗೆ: 98441 32826

* ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next