Advertisement

ಕಂಟೈನ್ಮೆಂಟ್‌ ಕಸ; ಎಡವುತ್ತಿರುವ ಪಾಲಿಕೆ

03:42 PM Apr 28, 2020 | mahesh |

ಬೆಂಗಳೂರು: ನಗರದ ಕಂಟೈನ್ಮೆಂಟ್‌ ಝೋನ್‌ಗಳಲ್ಲಿನ ಮನೆಗಳಿಂದ ಉತ್ಪತ್ತಿಯಾಗುತ್ತಿರುವ ವೈದ್ಯಕೀಯ ತ್ಯಾಜ್ಯ, ಮಾಸ್ಕ್ಗಳನ್ನು ಬಿಬಿಎಂಪಿ ಪ್ರತ್ಯೇಕವಾಗಿ ಸಂಗ್ರಹಿಸದೆ ಇರುವುದು ಹಾಗೂ ವಿಲೇವಾರಿ ಲೋಪದಿಂದ ಪೌರಕಾರ್ಮಿಕರಲ್ಲೂ ಕೋವಿಡ್ ಭೀತಿ ಎದುರಾಗಿದೆ. ಕಂಟೈನ್‌ಮೆಂಟ್‌ ಝೋನ್‌ ವ್ಯಾಪ್ತಿಯಲ್ಲಿ ವರದಿ ಮಾಡಿದ್ದ ಖಾಸಗಿ ಸುದ್ದಿವಾಹಿನಿ ಪತ್ರಕರ್ತರೊಬ್ಬರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸಿದ್ದರು ಎನ್ನಲಾದ ಬಿಹಾರಿ ಮೂಲದ ಕಟ್ಟಡ ಕಾರ್ಮಿಕರೊಬ್ಬರಲ್ಲಿ ಕೋವಿಡ್ ದೃಢಪಟ್ಟಿರುವುದು ಈಗ ಪೌರಕಾರ್ಮಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗಾ
ಗಲೇ ಪಾದರಾಯನಪುರ, ಹೊಂಗಸಂದ್ರದಲ್ಲಿ ಕೋವಿಡ್  ಸೋಂಕು ಸಮುದಾಯಕ್ಕೆ ಹಬ್ಬಿರುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಕಂಟೈನ್ಮೆಂಟ್‌ ವಲಯಗಳಲ್ಲಿ ಜನ ಬಳಸುವ ಮಾಸ್ಕ್, ವೈದ್ಯಕೀಯ ತ್ಯಾಜ್ಯವನ್ನು ಈ ಹಿಂದಿನಂತೆಯೇ ಸಂಗ್ರಹಿಸುತ್ತಿದೆ.

Advertisement

ಟ್ವಿಟರ್‌ನಲ್ಲಿ ಈ ಸಂಬಂಧ ಬಿಬಿಎಂಪಿ ಒಂದೆರಡು ಪೋಸ್ಟ್‌ ಮಾಡಿರುವುದು ಬಿಟ್ಟರೆ, ಯಾವುದೇ ಜಾಗೃತಿ ಮೂಡಿಸಿಲ್ಲ. ಸರ್ಕಾರವೇ ಈಗ ಅಧಿಕೃತವಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ಇದರ ಸಂಗ್ರಹ ಮತ್ತು ವಿಲೇವಾರಿಯಲ್ಲಿ ವ್ಯಾಪಕ ಲೋಪ ಕಂಡುಬರುತ್ತಿದೆ. ನಗರದಲ್ಲಿ ನಿತ್ಯ ಲಕ್ಷಾಂತರ ಜನ ಮಾಸ್ಕ್ ಬಳಸುತ್ತಿದ್ದು, ಇದನ್ನು ಕನಿಷ್ಠ ಪೇಪರ್‌ನಲ್ಲಿ ಸುತ್ತಿಕೊಡುವ ಕೆಲಸವೂ ಆಗುತ್ತಿಲ್ಲ. ಇದನ್ನು ಹಸಿ ಕಸದೊಂದಿಗೇ ನೀಡುತ್ತಿರುವುದೂ ಕಾಣಸಿಗುತ್ತಿದೆ. ಕೆಲವರು ಮಿಶ್ರ ತ್ಯಾಜ್ಯದೊಂದಿಗೂ ನೀಡುತ್ತಿದ್ದು, ಇದನ್ನು
ಪೌರಕಾರ್ಮಿರು ಪ್ರತ್ಯೇಕಿಸಬೇಕಾಗಿದೆ. ಕೆಲವಡೆ ಇದನ್ನು ಪ್ರತ್ಯೇಕಿಸುವ ಕೆಲಸವೂ ಆಗುತ್ತಿಲ್ಲ. ಹೀಗಾಗಿ, ನೇರವಾಗಿ ಭೂಭರ್ತಿ ಸೇರುತ್ತಿದೆ.

ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ (ಘನತ್ಯಾಜ್ಯ ನಿರ್ವಹಣೆ) ಪ್ರತಿಕ್ರಿಯಿಸಿ, ಸಾರ್ವಜನಿಕರು ಜವಾಬ್ದಾರಿ ಅರಿತು ವ್ಯವಸ್ಥಿತ ಮತ್ತು ಮುಂಜಾಗ್ರತೆ ಕ್ರಮಗಳೊಂದಿಗೆ ಕಸ ವಿಲೇವಾರಿ ಮಾಡಬೇಕು. ಕಠಿಣ ಸಂದರ್ಭದಲ್ಲೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯ ಕಾಳಜಿ ಬಗ್ಗೆ ಬಿಬಿಎಂಪಿಯೊಂದಿಗೆ ಸಾರ್ವಜನಿಕರು ಯೋಚಿಸಬೇಕು. ಇನ್ನು ಕಂಟೈನ್ಮೆಂಟ್‌ ಝೊàನ್‌ಗಳಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸಂಪೂರ್ಣ ರಕ್ಷಣಾ ಕವಚ ನೀಡುವ ಕೆಲಸ ಪ್ರಾರಂಭಿಸಿದ್ದೇವೆ. ಪ್ರತ್ಯೇಕವಾಗಿ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗದೆ ಇರುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನಗಳು
– ಮಾಸ್ಕ್ ಬಳಕೆ ನಂತರ 72 ಗಂಟೆ ಮಾಸ್ಕ್ ಅನ್ನು ಪೇಪರ್‌ನಲ್ಲಿ ಸುತ್ತಿಡಬೇಕು.
– ಸಾಮಾನ್ಯ ಕಸದೊಂದಿಗೆ ವಿಲೇವಾರಿ ಮಾಡಬಾರದು.
– ಮಾಸ್ಕ್ ಅನ್ನು 2ಭಾಗವಾಗಿ ತುಂಡು ಮಾಡಬೇಕು.
– 74 ಗಂಟೆ ನಂತರ 2-3 ಭಾಗಮಾಡಿ ವಿಲೇವಾರಿ ಮಾಡಬೇಕು.
– ಹೋಮ್‌ಕ್ವಾರಂಟೈನ್‌, ಕಂಟೈನ್ಮೆಂಟ್‌ ಝೋನ್‌ಗಳಿಂದ ಸಂಗ್ರಹ ಮಾಡುವ ತ್ಯಾಜ್ಯವನ್ನು ಪ್ರತ್ಯೇಕವಾಗಿ ಹಳದಿ ಬ್ಯಾಗ್‌ನಲ್ಲೇ ಸಂಗ್ರಹಿಸಿಡಬೇಕು.

– ಹಿತೇಶ್‌ ವೈ

Advertisement
Advertisement

Udayavani is now on Telegram. Click here to join our channel and stay updated with the latest news.

Next