ಸಿನಿಮಾ ಮಾಡುವುದು ಸುಲಭದ ಕೆಲಸವಲ್ಲ. ಒಂದು ಸಿನಿಮಾ ಆರಂಭವಾಗುವ ಮುನ್ನ ಕಥೆ ಅಂತಿಮವಾಗಬೇಕು, ಸ್ಕ್ರಿಪ್ಟ್ ಪಕ್ಕಾ ಆಗಬೇಕು. ಅದೇ ಕಾರಣದಿಂದ ಸ್ಕ್ರಿಪ್ಟ್ಗಾಗಿ ವರ್ಷಗಟ್ಟಲೇ ವ್ಯಯಿಸುವ ಅದೆಷ್ಟೋ ನಿರ್ದೇಶಕರಿದ್ದಾರೆ. ಸ್ಕ್ರಿಪ್ಟ್ ಪಕ್ಕಾ ಆಗಿ ಇನ್ನು ಚಿತ್ರೀಕರಣಕ್ಕೆ ಹೊರಡಬಹುದೆಂಬ ವಿಶ್ವಾಸ ಬರುವವರೆಗೆ ಅವರು ತಮ್ಮ ತಂಡದೊಂದಿಗೆ ಸ್ಕ್ರಿಪ್ಟ್ನಲ್ಲೇ ಬಿಝಿ ಇರುತ್ತಾರೆ.
ಆದರೆ, ಇಲ್ಲೊಬ್ಬ ನಿರ್ದೇಶಕರು ಮಾತ್ರ “ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಇಲ್ಲ, ಸ್ಪಾಟ್‌ಗೆ ಹೋಗಿ ನಮಗೆ ಬೇಕಾದಂತೆ ಚಿತ್ರೀಕರಣ ಮಾಡಿದ್ದೇವೆ’ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದಾರೆ. ಯಾರು ಆ ನಿರ್ದೇಶಕ ಮತ್ತು ಸಿನಿಮಾ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಶಿವಾಜಿ ಹಾಗೂ “ಬೆಂಕಿಯ ಬಲೆ’. ಮೈಸೂರು ಮೂಲದ ಶಿವಾಜಿ ಎನ್ನುವವರು “ಬೆಂಕಿಯ ಬಲೆ’ ಎಂಬ ಸಿನಿಮಾ ಮಾಡಿದ್ದಾರೆ.
ಈ ಸಿನಿಮಾದ ನಿರ್ಮಾಣ, ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್, ಹಾಡು ತೋರಿಸುವ ಕಾರ್ಯಕ್ರಮವನ್ನು ಶಿವಾಜಿ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮ ಮುಂದೆಯೇ “ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಮಾಡೇ ಇಲ್ಲ’ ಎಂದು ನೇರವಾಗಿ ಹೇಳಿಕೊಂಡರು. ಈ ಮೂಲಕ “ಸ್ಕ್ರಿಪ್ಟ್ ಮಾಡದೆಯೂ’ ಸಿನಿಮಾ ಮಾಡಬಹುದೆಂಬುದನ್ನು ಶಿವಾಜಿ ತೋರಿಸಿಕೊಟ್ಟಿದ್ದಾರೆ!
“ನಿಜ ಹೇಳಬೇಕೆಂದರೆ ಈ ಸಿನಿಮಾಕ್ಕೆ ಸ್ಕ್ರಿಪ್ಟ್ ಮಾಡಿಲ್ಲ. ಏಕೆಂದರೆ, ಇದು ನನ್ನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಮಾಡುತ್ತಿರುವ ಸಿನಿಮಾ. ಹಾಗಾಗಿ, ಸೆಟ್‌ಗೆ ಹೋಗಿ ಮಕ್ಕಳ ಆಟ ತರಹ, “ನೀನು ಈ ಡೈಲಾಗ್ ಹೇಳು, ನಾನು ಇದನ್ನು ಹೇಳುತ್ತೇನೆ’ ಎಂದು ಮಾತನಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರಕ್ಕೆ ಅಷ್ಟು ಖರ್ಚಾಗಿದೆ, ಇಷ್ಟು ಖರ್ಚಾಗಿದೆ ಎಂದು ಸುಳ್ಳು ಹೇಳ್ಳೋದಿಲ್ಲ.
ಇಡೀ ಸಿನಿಮಾದಲ್ಲಿ ನಾನು ಯುನಿಟ್ ಬಳಸಿಯೇ ಇಲ್ಲ. ಒಂದು ಬ್ಲ್ಯಾಕ್ ಮ್ಯಾಜಿಕ್ ಕ್ಯಾಮರಾ ಹಾಗೂ ಎರಡು ಥರ್ಮಾಕೋಲ್‌ಶೀಟ್ ಅಷ್ಟೇ ಬಳಸಿರೋದು. ನಮಗೆ ಬೇಕಾದಂತೆ ನಾವು ಚಿತ್ರೀಕರಿಸಿದ್ದೇವೆ. ನನಗೆ ನಿರ್ದೇಶನದ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ, ನನ್ನದೇ ಕಥೆ ಆದ್ದರಿಂದ ಏನು ಮಾಡಬಹುದೆಂಬ ಐಡಿಯಾ ಇತ್ತು. ಅದಕ್ಕೆ ನನ್ನ ತಂಡ ಕೈ ಜೋಡಿಸಿತು. ಎಲ್ಲಾ ಹೊಸ ಕಲಾವಿದರಿಗೆ ಅವಕಾಶ ಕೊಟ್ಟಿದ್ದೇನೆ.
ಏಕೆಂದರೆ, ಗೊತ್ತಿರುವ ಮುಖವಾದರೆ ಆ ಊಟ ಬೇಕು, ಕ್ಯಾರವಾನ್ ಬೇಕೆನ್ನುತ್ತಾರೆ. ಆದರೆ, ಹೊಸಬರಿಗಾದರೆ ಬೆಳೆಯುವವರೆಗೆ ಅದನ್ನು ಕೇಳುವುದಿಲ್ಲ. ಆದರೆ, ಹೊಸಬರಿಂದ ಕೆಲಸ ತೆಗೆಸುವುದು ತುಂಬಾ ಕಷ್ಟವಾಯಿತು. ನಾನೊಂದು ಹೇಳಿದರೆ ಅವರೊಂದು ಮಾಡುತ್ತಿದ್ದರು. ಆದರೆ, ನನ್ನ ಕಲ್ಪನೆಯ ದೃಶ್ಯ ಬರುವವರೆಗೆ ಬಿಡುತ್ತಿರಲಿಲ್ಲ. ಅದೇ ಕಾರಣದಿಂದ ನನ್ನ ಎದುರು “ಶಿವಾಜಿ ಸಾರ್ ಬಂದ್ರು ಅಂತಾರೆ,
ಹಿಂದಿನಿಂದ ಸೈಕೋ ಬಂದ’ ಎಂದು ಕರೆಯುತ್ತಿದ್ದರು’ ಎನ್ನುತ್ತಾ ಸಿನಿಮಾ ಬಗ್ಗೆ ಹೇಳಿಕೊಂಡರು ಶಿವಾಜಿ. ಇಲ್ಲಿ ಹುಡುಗಿ ಕೈ ಕೊಟ್ಟ ಬೇಸರದಲ್ಲಿ ದುಶ್ಚಟ್ಟಕ್ಕೆ ಬೀಳುವ ಯುವಕರಿಗೆ ಸಂದೇಶವಿದೆಯಂತೆ. ಜೊತೆಗೆ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಿ ಎಂದು ಹೇಳಿದ್ದಾರಂತೆ ಶಿವಾಜಿ. ಅಂದಹಾಗೆ, ಶಿವಾಜಿ “ಮಂಡ್ಯ ಟು ಸಿಂಗಾಪೂರ್’ ಹಾಗೂ “ಕ್ರೈಂ’ ಎಂಬ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ.