Advertisement
ಪ್ರತಿವರ್ಷ ಬರುವ ಹತ್ತಾರು ಹಬ್ಬಗಳ ಸಂಭ್ರಮ ಚಿತ್ರರಂಗದಲ್ಲೂ ಅಷ್ಟರ ಮಟ್ಟಿಗೆ ಹೊಸಕಳೆ ತಂದುಕೊಡುತ್ತದೆ. ಇನ್ನು ಸಿನಿಪ್ರಿಯರಿಗೂ ಅಷ್ಟೇ, ಮನೆಯಲ್ಲಿ ಹಬ್ಬದ ವಾತಾವರಣದ ಜೊತೆಗೆ ಚಿತ್ರರಂಗದ ಇಂಥ ಚಟುವಟಿಕೆಗಳು ಹಬ್ಬದ ಸಂಭ್ರವನ್ನು ಇನ್ನಷ್ಟು ಹೆಚ್ಚಿಸುತ್ತಿರುತ್ತದೆ. ಅದರಲ್ಲೂ ವರ್ಷದ ಮೊದಲಿಗೆ ಬರುವ ಸಂಕ್ರಾಂತಿ ಹಬ್ಬದ ಜೋಶ್ ಜೋರಾಗಿಯೇ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ, ಸಂಕ್ರಾಂತಿ ಹಬ್ಬ ಇಡೀ ಚಿತ್ರರಂಗ ರೀ-ಸ್ಟಾರ್ಟ್ ಮಾಡುವಂಥ ಹಬ್ಬ ಎಂದೇ ಹೇಳಬಹುದು. ವರ್ಷದ ಆರಂಭದಲ್ಲಿ ಶುರುವಾಗಲಿರುವ ಬಹುತೇಕ ಸಿನಿಮಾಗಳ ಮುಹೂರ್ತ, ಟೈಟಲ್ ಲಾಂಚ್, ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ಪ್ರಮೋಶನ್ಸ್ ಎಲ್ಲದಕ್ಕೂ ಸಂಕ್ರಾಂತಿಯಲ್ಲಿ ಚಾಲನೆ ಸಿಗುತ್ತಿತ್ತು. ಆದರೆ ಈ ಬಾರಿಯ ಸಂಕ್ರಾಂತಿ ಹಬ್ಬದಲ್ಲಿ ಅಂಥ ಸಂಭ್ರಮವಾಗಲಿ, ಜೋಶ್ ಆಗಲಿ ಚಿತ್ರರಂಗದಲ್ಲಿ ಕಾಣುತ್ತಿಲ್ಲ.
Related Articles
Advertisement
ಕೋವಿಡ್ ಪೂರ್ವದಲ್ಲಿ ಪ್ರತಿವರ್ಷ ಸಂಕ್ರಾಂತಿಗೆ ಏನಿಲ್ಲವೆಂದರೂ ಡಜನ್‌ಗೂ ಹೆಚ್ಚು ಹೊಸ ಸಿನಿಮಾಗಳು ಅನೌನ್ಸ್ ಆಗಿದ್ದ ಉದಾಹರಣೆಗಳಿದ್ದವು. ಹತ್ತಾರು ಸಿನಿಮಾಗಳ ಹೊಸ ಹೊಸ ಅಪ್‌ಡೇಟ್ಸ್ ಸಂಕ್ರಾಂತಿ ಹಬ್ಬಕ್ಕೆ ಸಿಗುತ್ತಿದ್ದರಿಂದ, ಸ್ಯಾಂಡಲ್ ವುಡ್‌ನಲ್ಲಿ ಹೊಸವರ್ಷದ ಜೊತೆಗೆ ಸಂಕ್ರಾಂತಿ ಸಂಭ್ರಮ ಕೂಡ ಡಬಲ್ ಆಗಿರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅದೆಲ್ಲದಕ್ಕೂ ಕೋವಿಡ್ ಬ್ರೇಕ್ ಹಾಕಿದ್ದು, ಈ ಸಂಕ್ರಾಂತಿ ಕೂಡ ಹಿಂದಿನಂತೆ ಮಂಕಾ ಗಿದೆ. ಈ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲವಾದರೂ ಮಂಕಾಗಿರುವ ಚಿತ್ರ ರಂಗಕ್ಕೆ ಹೊಸ ಚೈತನ್ಯ ನೀಡಲಿ, ಚಿತ್ರರಂಗ ಮತ್ತೆ ಕಳೆಗಟ್ಟಲಿ ಎಂಬುದು ಎಲ್ಲರ ಆಶಯ.
ಜಿ.ಎಸ್.ಕಾರ್ತಿಕ ಸುಧನ್