ನವದೆಹಲಿ: ರಾಕೆಟ್‌ನ ಜೋರು ಸದ್ದು, ಫಾರ್ಮುಲಾಗಳು, ಅಂತರಿಕ್ಷ, ಕಕ್ಷೆ, ನೌಕೆ ಎಂದೆಲ್ಲಾ ತಲೆಯಲ್ಲಿ ಹುಳ ಬಿಟ್ಟುಕೊಂಡು, ಹಗಲಿರುಳು ಚಂದ್ರ, ಮಂಗಳನ ಮೇಲೆ ಕಾಲಿರಿಸುವ ಕನಸು ಕಾಣುವ ಇಸ್ರೋದ ರಾಕೆಟ್ ವಿಜ್ಞಾನಿಗಳಿಗೆ ಅದೆಲ್ಲಿ ಸಂಗೀತದೊಂದಿಗೆ ಸ್ನೇಹ ಬೆಳೆಯಿತೋ ಗೊತ್ತಿಲ್ಲ. ಒಂದಷ್ಟು ವಿಜ್ಞಾನಿಗಳು ಸೇರಿ ಕೊಂಡು ಸದ್ದಿಲ್ಲದಂತೆ ದೇಶಭಕ್ತಿಯ ಹಾಡೊಂದನ್ನು ಸಿದ್ಧಪಡಿಸಿದ್ದಾರೆ.
ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಥವಾ ಇಸ್ರೋದ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳನ್ನು ಒಳಗೊಂಡ 20 ಮಂದಿಯ ತಂಡವೊಂದು 70ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿದೆ. ಈ ಹಾಡು ಈಗಾಗಲೇ ಯೂಟ್ಯೂಬ್ ಮೂಲಕ ಎಲ್ಲರ ಮನ ಗೆಲ್ಲುತ್ತಿದೆ. ಬಹುತೇಕ ಮಲಯಾಳಂ ಭಾಷೆ ಯಲ್ಲಿರುವ ಈ ಹಾಡನ್ನು 3 ದಿನದಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಐ ಆ್ಯಮ್ ಆ್ಯನ್ ಇಂಡಿಯನ್: ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇಸ್ರೋ ವಿಜ್ಞಾನಿಗಳು ಹೊರತಂದಿರುವ ಹಾಡಿನ ಹೆಸರು “ಐ ಆ್ಯಮ್ ಆ್ಯನ್ ಇಂಡಿಯನ್’. ಹೆಸರಲ್ಲೇ ದೇಶಾಭಿಮಾನವನ್ನು ಬಿಂಬಿಸುವ ಈ ಹಾಡಿನ ತುಂಬ ದೇಶಭಕ್ತಿಯೇ ತುಂಬಿದೆ ಎಂದು ಮತ್ತೆ ಹೇಳಬೇಕಿಲ್ಲ. ಅಂದಹಾಗೆ ದಿನವಿಡೀ ರಾಕೆಟ್ ರೂಪಿಸುವ ಕಾರ್ಯದಲ್ಲಿ ಬ್ಯುಸಿಯಾಗಿರುವ ವಿಜ್ಞಾನಿ ಗಳು ಸಂಜೆ ವೇಳೆ ಕೊಂಚ ಸಮಯವನ್ನು ಸಂಗೀತಕ್ಕಾಗಿ ಮೀಸಲಿಟ್ಟು ಈ ಹಾಡನ್ನು ಸಂಯೋಜಿಸಿ, ಚಿತ್ರೀಕರಿಸಿದ್ದಾರೆ.
ಚಂದ್ರಯಾನಕ್ಕೆ ಸ್ಫೂರ್ತಿ: ಆರಂಭದಲ್ಲಿ ಚಂದ್ರನ ಮೇಲೆ ತ್ರಿವರ್ಣ ಧ್ವಜ ನೆಡುವ ಆ್ಯನಿಮೇಷನ್ ಇದೆ. ಬರುವ ವರ್ಷಾ ರಂಭದಲ್ಲಿ ಭಾರತ 2ನೇ ಚಂದ್ರಯಾನಕ್ಕೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಕೆಲಸದಲ್ಲಿ ತೊಡಗಿರುವ ವಿಜ್ಞಾನಿಗಳು, ತಂತ್ರಜ್ಞರನ್ನು ಹುರಿದುಂಬಿಸುವ ಉದ್ದೇಶದಿಂದ ಈ ಆ್ಯನಿಮೇಷನ್ ಮಾಡಲಾಗಿದೆ. ಹೊಸ ರಾಷ್ಟ್ರ ಕಟ್ಟುವುದು, ಶಸ್ತ್ರಾಸ್ತ್ರಗಳನ್ನು ಬಿಸಾಡಿ ಅಶಾಂತಿ ಕೊನೆಗೊಳಿಸಬೇಕು ಎಂಬ ಸಂದೇಶ ಹಾಡಿನಲ್ಲಿದೆ.
ರಾಕೆಟ್ ಬ್ಯಾಂಡ್: ದೇಶಭಕ್ತಿಯ ಈ ಹಾಡು ರೂಪಿಸಿದ ವಿಜ್ಞಾನಿಗಳು ತಮ್ಮ ಬ್ಯಾಂಡ್‌ಗೆ ROCK@ Band (ರಾಕೆಟ್ ಬ್ಯಾಂಡ್) ಎಂದು ಹೆಸರಿಟ್ಟಿದ್ದಾರೆ. ಬಾಹ್ಯಾ ಕಾಶ ಎಂಜಿನಿಯರ್ ಶೀಜು ಜಿ. ಥಾಮಸ್ ಹಾಡಿಗೆ ಸಾಹಿತ್ಯ ಬರೆದಿದ್ದು, ಗಣೇಶ್ ಮೋಹನ್ ಸಂಗೀತ ನಿರ್ದೇಶಿಸಿದ್ದಾರೆ. 20 ಮಂದಿಯ ತಂಡ, 18 ತಿಂಗಳ ಕಾಲ ಈ ಹಾಡಿಗಾಗಿ ಶ್ರಮಿಸಿದ್ದು, ಈ ವಿಡಿಯೋ ಹೊರತರಲು ಒಬ್ಬೊಬ್ಬರೂ ತಮ್ಮ ಜೇಬಿನಿಂದ 10 ಸಾವಿರ ರೂ. ವೆಚ್ಚ ಮಾಡಿದ್ದಾರೆ.