Advertisement

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

05:34 PM Sep 25, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಅದು ಸುತ್ತಲಿನ ಹಲವು ಗ್ರಾಮಗಳ ಜನತೆಗೆ ಆರೋಗ್ಯ ಸೇವೆ ನೀಡುವ ಪ್ರಾಥಮಿಕ ಆರೋಗ್ಯ ಕೇಂದ್ರ. ಆ ಆರೋಗ್ಯ ಕೇಂದ್ರಕ್ಕೆ ಭೂಮಿ ದಾನದಿಂದ ಬಂದಿದ್ದು. ಆದರೆ ಈ ಆಸ್ಪತ್ರೆಗೆ ತಪಾಸಣೆ ಅಥವಾ ಚಿಕಿತ್ಸೆಗೆ ಹೋಗುವ ರೋಗಿಗಳಷ್ಟೇ ಅಲ್ಲ ಆಸ್ಪತ್ರೆ ಸಿಬ್ಬಂದಿಯೂ ತಲುಪಲು ಹೈರಾ ಣಾಗುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿಗೆ ಹೋಗಲು ಇರುವ ಅಧ್ವಾನ ರಸ್ತೆ. ಹೌದು. ತಾಲೂಕಿನ ಹುಯಿಲಗೋಳ ಗ್ರಾಮದ ಹೊರ ವಲಯದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ತಲುಪಲು ಹರಸಾಹಸ ಪಡುವಂತಾಗಿದೆ.

Advertisement

ಈ ಆರೋಗ್ಯ ಕೇಂದ್ರ ಹುಯಿಲಗೋಳ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿದ್ದು, ಯಾವುದೇ ಸುಸಜ್ಜಿತ ರಸ್ತೆ ಇಲ್ಲ.
ಬೀದಿದೀಪಗಳ ವ್ಯವಸ್ಥೆಯೂ ಇಲ್ಲ. ಕತ್ತಲಾದರೆ ಸಾಕು ಆಸ್ಪತ್ರೆಗೆ ಹೋಗಲು ಭಯಪಡುವಂತಾಗಿದೆ. ಅಲ್ಲದೇ ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ಅನಾರೋಗ್ಯಪೀಡಿತ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಕೈಯಲ್ಲಿ ಪಾದರಕ್ಷೆ ಹಿಡಿದು ಸಂಚಾರ: ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರೋಗಿಗಳು, ಕೆಲಸ ಮಾಡುವ ಸಿಬ್ಬಂದಿಗಳು ಓಡಾಟ ಅಷ್ಟು ಸಲೀಸಲ್ಲ. ಅದರಲ್ಲೂ ಕೊಂಚ ಮಳೆಯಾದರೂ ಸಾಕು ವಾಹನಗಳನ್ನು ದೂರದಲ್ಲೇ ನಿಲ್ಲಿಸಿ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗುವುದು ಅನಿವಾರ್ಯವಾಗುತ್ತಿದೆ.

ಆಸ್ಪತ್ರೆಗೆ ಭೂಮಿ ದಾನ: ಸಾರ್ವಜನಿಕರ ಅನುಕೂಲಕ್ಕಾಗಿ ಹುಯಿಲಗೋಳ ಗ್ರಾಮದ ದಿ|ಯಲ್ಲಪ್ಪ ಮು. ಹಂಚಿನಾಳ ಹಾಗೂ ದಿ|ಭೀಮವ್ವ ಯ. ಹಂಚಿನಾಳ ಅವರ ಸ್ಮರಣಾರ್ಥ ಮುದಕಪ್ಪ ಯಲ್ಲಪ್ಪ ಹಂಚಿಹಾಳ ಹಾಗೂ ಲಕ್ಷ್ಮವ್ವ ಮುದಕಪ್ಪ ಹಂಚಿನಾಳ ದಂಪತಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ತಮ್ಮ ಸ್ವಂತ ಮಾಲ್ಕಿ ವಹಿವಾಟಿಯಲ್ಲಿರುವ
ಹುಯಿಲಗೋಳ ಗ್ರಾಮದಿಂದ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿರುವ 3 ಎಕರೆ 20 ಗುಂಟೆ ಜಮೀನನ್ನು 2001ರಲ್ಲಿ ದಾನವಾಗಿ ನೀಡಿದ್ದರು.

ಸರಕಾರದವರು ಜಮೀನಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಿದ್ದಾರೆ. ಆದರೆ ಆ ಆರೋಗ್ಯ ಕೇಂದ್ರ ಸಾರ್ವಜನಿಕವಾಗಿ ಮುಕ್ತಗೊಳಿಸದೇ ಹಾಗೆ ಸುಮಾರು ವರ್ಷಗಳವರೆಗೆ ಬಿಟ್ಟಿದ್ದರಿಂದ ದಾನಿಗಳಾದ ಮುದಕಪ್ಪ ಹಂಚಿನಾಳ ಅವರೇ ತಮ್ಮ ಸ್ವಂತ ಖರ್ಚಿನಿಂದ ಓಪನಿಂಗ್‌ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಕೊಳವೆಬಾವಿಯನ್ನೂ ಕೊರೆಯಿಸಿ ನೀರಿನ ಅನುಕೂಲ ಮಾಡಿಕೊಟ್ಟಿದ್ದಾರೆ ಇಷ್ಟೆಲ್ಲ ವ್ಯವಸ್ಥೆಯನ್ನು ಭೂದಾನಿಗಳೇ ಮಾಡಿದ್ದರೂ ಈ ಆಸ್ಪತ್ರೆಗೆ ಹೋಗಿ ಬರಲು ಒಂದು ಸೂಕ್ತ ರಸ್ತೆಯನ್ನು ಸರ್ಕಾರ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಆಸ್ಪತ್ರೆಗೆ ಹೋಗಿ ಬರಲು ಕೂಡಲೇ ಒಂದು ಸುಸಜ್ಜಿತ, ಶಾಶ್ವತ ಋತು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

Advertisement

ನಮ್ಮ ತಂದೆ ದಿ|ಯಲ್ಲಪ್ಪ ಹಂಚಿನಾಳ ಹಾಗೂ ದಿ| ಭೀಮವ್ವ ಹಂಚಿನಾಳ ಅವರ ಸ್ಮರಣಾರ್ಥ ಸಾರ್ವಜನಿಕರಿಗೆ ಆರೋಗ್ಯ ಸೇವೆ
ಸಿಗುವಂತಾಗಲು 3 ಎಕರೆ 20 ಗುಂಟೆ ಜಮೀನನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ದಾನ ನೀಡಿದ್ದೇವೆ. ಆದರೆ ಸೌಜನ್ಯಕ್ಕೂ ಸರ್ಕಾರ, ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗಲು ಒಂದು ಶಾಶ್ವತ ರಸ್ತೆ ಮಾಡಿಕೊಡುತ್ತಿಲ್ಲ.
ಮುದಕಪ್ಪ ಯಲ್ಲಪ್ಪ ಹಂಚಿನಾಳ, ಭೂದಾನಿ

ಮಳೆ ಬಂದಾಗ ನಮ್ಮ ವಾಹನಗಳನ್ನು ಜನತಾ ಪ್ಲಾಟ್‌ನಲ್ಲಿ ಇಟ್ಟು ನಡೆದುಕೊಂಡು ಹೋಗುತ್ತೇವೆ. ಮಳೆಗಾಲದಲ್ಲಿ ಓಡಾಟ ತೀವ್ರ ತೊಂದರೆಯಾಗುತ್ತದೆ. ರೋಗಿಗಳ ಪಾಡೂ ಅಷ್ಟೇ.
ಹೆಸರು ಹೇಳಲಿಚ್ಛಿಸದ ಪ್ರಾಥಮಿಕ
ಆರೋಗ್ಯ ಕೇಂದ್ರದ ಸಿಬ್ಬಂದಿ.

ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ದಾನಿಗಳು ಭೂಮಿ ಒದಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿರುವ ಭೂಮಿ ಕೊಡಲು
ಮುಂದೆ ಬರುತ್ತಿಲ್ಲ. ಅನಿವಾರ್ಯ ಹಳ್ಳದ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆಯಿದೆ. ಭೂಮಿ ನೀಡುವವರೆಗೆ ರಸ್ತೆ ನಿರ್ಮಿಸುವುದು ಕಷ್ಟ ಸಾಧ್ಯ.
ಡಾ|ಎಸ್‌.ಎಸ್‌.ಈಲಗುಂದ, ಡಿಎಚ್‌ಒ, ಗದಗ

*ಅರುಣಕುಮಾರ ಹಿರೇಮಠ

 

Advertisement

Udayavani is now on Telegram. Click here to join our channel and stay updated with the latest news.

Next