Advertisement

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ: ಮಹೇಶ್‌

09:35 PM Jul 06, 2019 | Team Udayavani |

ಕೊಳ್ಳೇಗಾಲ: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಹಲವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು, ನಾನು ಯಾವುದೇ ಕಾರಣಕ್ಕೂ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

Advertisement

ತಾಲೂಕಿನ ಮುಳ್ಳೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರಿಂದ ವಿವಿಧ ಅಹವಾಲುಗಳನ್ನು ಮಾತ ನಾಡಿ, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಗ್ರಾಪಂಗಳಲ್ಲಿ ದಿನಕ್ಕೆ ಎರಡು ಗ್ರಾಪಂಗಳಂತೆ ಜನಸಂಪರ್ಕ ಸಭೆಯನ್ನು ಕಳೆದ 21ರಂದು ಆರಂಭಿಸಿ ಜು.6ರಂದು ತಾಲೂಕಿನ ಮುಳ್ಳೂರು ಗ್ರಾಪಂ ಆವರಣದಲ್ಲಿ ನಡೆಯುತ್ತಿರುವ ಜನಸಂಪರ್ಕ ಸಭೆ ಕೊನೆಯ ಸಭೆಯಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ನೀಡಿರುವ ಎಲ್ಲಾ ದೂರುಗಳಿಗೂ ಸೂಕ್ತ ಪರಿಹಾರ ಲಭ್ಯವಾಗಲಿದೆ ಎಂದರು.

ಬಾಂಡ್‌ ವಿತರಣೆ: ಶಿಶು ಅಬಿವೃದ್ಧಿ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ಮತ್ತು ವೃದ್ಧಾಪ್ಯ ವೇತನದ ಆದೇಶ ಪತ್ರಗಳನ್ನು ಫ‌ಲಾನುಭವಿಗಳಿಗೆ ವಿತರಿಸಿದ ಶಾಸಕರು ಬಾಂಡ್‌ನ್ನು ಜೋಪಾನಪಡಿಸಿಕೊಂಡು ತಮ್ಮ ಹೆಣ್ಣು ಮಕ್ಕಳು ಬೆಳೆದ ಬಳಿಕ ಅವರ ಕಲ್ಯಾಣಕ್ಕಾಗಿ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕೆಂದು ಫ‌ಲಾನುಭವಿಗಳಿಗೆ ಹೇಳಿದರು.

ವಿದ್ಯಾರ್ಥಿಗಳಿಗೆ ಸನ್ಮಾನ: ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದಾಗಿ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮದ ಮಮತರಾಣಿ, ಮೇಘ, ಶಾಲಿನಿ, ಅಶ್ವಿ‌ನಿ.ಎಂ ರವರನ್ನು ಶಾಸಕ ಎನ್‌.ಮಹೇಶ್‌ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

Advertisement

ಸಾಮಗ್ರಿ ವಿತರಣೆ: ಪಂಚಾಯಿತಿ ವತಿಯಿಂದ ಕ್ರೀಡಾ ಪ್ರೋತ್ಸಾಹಕ್ಕಾಗಿ ಪಂಚಾಯಿತಿ ವತಿಯಿಂದ ಖರೀದಿಸಿದ್ದ ಕ್ರೀಡಾ ಸಾಮಗ್ರಿಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

ತನಿಖೆ ನಡೆಸಿ ಕ್ರಮ: ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದದಿಂದ ಗ್ರಾಮದ ಫ‌ಲಾನುಭವಿ ಮಾಧು ಅವರು ಕಳೆದ 2017-18ರ ಸಾಲಿನಲ್ಲಿ ಮಂಜೂರಾಗಿದ್ದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆದಿದ್ದು, ಇದುವರೆಗೂ ಬಾವಿಯ ಪರಿಕರಗಳನ್ನು ಮತ್ತು ವಿದ್ಯುತ್‌ ಸಂಪರ್ಕ ನೀಡಿಲ್ಲ ಮತ್ತು ಅಳವಡಿಕೆಗೆ ಏಳು ಸಾವಿರ ನಗದು ಲಂಚವನ್ನು ಸ್ವೀಕರಿಸಿದ್ದರು.

ನಿಗಮದ ಅಧಿಕಾರಿ ಸೋಮಣ್ಣ ಪೂರ್ಣಗೊಳಿಸಿಲ್ಲ ಎಂದು ದೂರಿದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಶಾಸಕ ಎನ್‌.ಮಹೇಶ್‌ ಸರ್ಕಾರ ಉಚಿತವಾಗಿ ನಿರ್ಮಾಣ ಮಾಡುವಂತೆ ಸೂಕ್ತ ನಿರ್ದೇಶನ ವಿದ್ದರೂ ಸಹ ಲಂಚ ಸ್ವೀಕರಿಸಿರುವ ಬಗ್ಗೆ ಕೂಡಲೇ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.

ಅಪೌಷ್ಟಿಕತೆ: ಗರ್ಭಿಣಿಯರು ಮತ್ತು ಬಾಣಂತಿಯರು ಅಪೌಷ್ಟಿಕತೆಗೆ ಒಳಗಾಗದಂತೆ ಮತ್ತು ಜನಿಸುವ ಮಗುವಿಗೂ ಅಪೌಷ್ಟಿಕತೆ ಉಂಟಾಗದಂತೆ ತಡೆಯುವ ಸಲುವಾಗಿ ಸರ್ಕಾರ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಸಂಬಂಧಿಸಿದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಸ್ತ್ರೀಯರು ಪೌಷ್ಠಿಕತೆ ಹೊಂದಬೇಕು. ಪೌಷ್ಠಿಕಾಂಶ ಆಹಾರವನ್ನು ಪಡೆಯದಿದ್ದ ಪಕ್ಷದಲ್ಲಿ ಹುಟ್ಟುವ ಮಕ್ಕಳು ಅಂಗವಿಕಲರಾಗುವ ಜೊತೆಗೆ ಮಹಿಳೆಯರು ಅಪೌಷ್ಟಿಕತೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.

ಈಗಾಗಲೇ ಸರ್ಕಾರ ಫ‌ಲಾನುಭವಿಗಳಿಗೆ ಕಡಿಮೆ ಪ್ರಮಾಣದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದು, ಅದನ್ನು ಮತ್ತಷ್ಟು ವೃದ್ಧಿಗೊಳಿಸಿ ಹೆಚ್ಚು ಜನರಿಗೆ ಸೌಲಭ್ಯಗಳು ಸಿಗುವಂತೆ ಸರ್ಕಾರದಲ್ಲಿ ಮಾತನಾಡಿ ಹೆಚ್ಚು ಸೌಲಭ್ಯ ತಂದುಕೊಡುವ ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಜಿಪಂ ಸದಸ್ಯ ನಾಗರಾಜು, ತಹಶೀಲ್ದಾರ್‌ ಕುನಾಲ್‌, ತಾಪಂ ಇಒ ಉಮೇಶ್‌, ಬಿಇಒ ಚಂದ್ರಪಾಟೀಲ್‌, ಕೃಷಿ ಅಧಿಕಾರಿ ಮಹದೇವಯ್ಯ, ಸಮಾಜ ಕಲ್ಯಾಣಾಧಿಕಾರಿ ಜಯಕಾಂತ, ಪರಿಶಿಷ್ಟ ವರ್ಗಗಳ ಅದಿಕಾರಿ ಗಂಗಾಧರ್‌, ರೇಷ್ಮೆ ಇಲಾಖೆಯ ಅಧಿಕಾರಿ ಡಾ. ಸವಿತಾ ಕುಮಾರಿ, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಮುಳ್ಳೂರು ಗ್ರಾಪಂ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಅನಿಲ್‌, ಪಿಡಿಒ ರಾಜೇಶ್‌, ಸದಸ್ಯ ಸೋಮಣ್ಣ ಉಪ್ಪಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next