ಹೊಸದಿಲ್ಲಿ : ಲಾಭದಾಯ ಹೊಂದಿರುವರೆಂಬ ಕಾರಣಕ್ಕೆ 20 ಆಮ್ ಆದ್ಮಿ ಶಾಸಕರ ಅಮಾನತನ್ನು ರಾಷ್ಟ್ರಪತಿಗೆ ಶಿಫಾರಸು ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿರುವ ಆಪ್ ಗೆ ಇಂದು ಯಾವುದೇ ಪರಿಹಾರ ನೀಡಲು ಹೈಕೋರ್ಟ್ ನಿರಾಕರಿಸಿತು. ಆಪ್ ಮನವಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಈಗಿನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ.
20 ಆಪ್ ಶಾಸಕರ ಅನರ್ಹತೆಯನ್ನು ಚುನಾವಣಾ ಆಯೋಗ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದೆಯೇ ಎಂದು ದಿಲ್ಲಿ ಹೈಕೋರ್ಟ್ ಆಪ್ ಮನವಿಯನ್ನು ಅನುಲಕ್ಷಿಸಿ ಚುನಾವಣಾ ಮಂಡಳಿಯ ವಕೀಲರನ್ನು ಪ್ರಶ್ನಿಸಿತು.
ಚುನಾವಣಾ ಆಯೋಗದ ಪರವಾಗಿ ಹಾಜರಿದ್ದ ವಕೀಲರಿಗೆ ಆಪ್ ಮನವಿಯ ಬಗ್ಗೆ ಬೇಗನೆ ವಿಚಾರಣೆಯನ್ನು ಪುನರಾರಂಭಿಸುವುದಕ್ಕಾಗಿ ಈ ಕುರಿತ ಬೆಳವಣಿಗೆಯನ್ನು ತನಗೆ ತಿಳಿಸುವಂತೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಳ್ಳಿ ಅವರು ಸೂಚಿಸಿದರು.
ಚುನಾವಣಾ ಆಯೊಗದ ಮೂಲಗಳು ಇಪ್ಪತ್ತು ಮಂದಿ ಆಪ್ ಶಾಸಕರು ಲಾಭದಾಯಕ ಹುದ್ದೆ ಹೊಂದಿರುವ ಕಾರಣಕ್ಕೆ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ ಎಂದು ಇಂದು ಮಧ್ಯಾಹ್ನ ತಿಳಿಸಿದ್ದವು.
ತತ್‌ಕ್ಷಣವೇ ಈ ಬಗ್ಗೆ ಎಚ್ಚೆತ್ತ ಆಮ್ ಆದ್ಮಿ ಪಕ್ಷ ತಾನು ತತ್‌ಕ್ಷಣದ ಪರಿಹಾರಕ್ಕಾಗಿ ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಹೇಳಿತ್ತು.