Advertisement
ರವಿಚಂದ್ರನ್ ಅಶ್ವಿನ್ ಗುರುವಾರ ಮುಂಜಾನೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ತಮಿಳುನಾಡಿನ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಬರಮಾಡಿಕೊಂಡರು. ಆದರೆ ಇವರಿಗಾಗಿಯೇ ಕಾದು ನಿಂತಿದ್ದ ಮಾಧ್ಯಮದವರ ಜತೆ ಮಾತಾಡಲಿಲ್ಲ. ತಮಗಾಗಿ ಕಾದಿದ್ದ ಕಾರನ್ನೇರಿದರು. ಪತ್ನಿ ಪ್ರೀತಿ ಹಾಗೂ ಇಬ್ಬರು ಪುತ್ರಿಯರು ಜತೆಯಲ್ಲಿದ್ದರು. ಆದರೆ ಮನೆಗೆ ತಲುಪಿದ ಬಳಿಕ ನಿರಾಳವಾಗಿ ಮಾತಾಡಿದರು. ಆಗ ಅವರ ತಂದೆ-ತಾಯಿ, ಕುಟುಂಬದವರು, ಮಾಧ್ಯಮದವರು, ಹಿತೈಷಿಗಳು ಉಪಸ್ಥಿತರಿದ್ದರು. ಹೂವಿನ ಹಾರ, ವಾದ್ಯಮೇಳವೂ ಇತ್ತು.
Related Articles
Advertisement
ʼನಾನು ವಿದಾಯ ಹೇಳಿದ್ದು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮಾತ್ರ. ಆದರೆ ಐಪಿಎಲ್ ಆಡಲಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಕಾಲ ಐಪಿಎಲ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಬಿತ್ತರಿಸಿದರು.
ʼಮಗನಿಗೆ ನಿರಂತರ ಅವಮಾನ‘
ʼನನ್ನ ಮಗನಿಗೆ ತಂಡದಲ್ಲಿ ನಿರಂತರ ಅವಮಾನ ಮಾಡಲಾಗುತ್ತಿದೆ. ಇದನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ? ಇದು ಆತನ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿರಬಹುದು…’ ಎಂದು ಆರ್. ಅಶ್ವಿನ್ ಅವರ ತಂದೆ ರವಿಚಂದ್ರನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ʼಮಗನ ನಿವೃತ್ತಿ ಬಗ್ಗೆ ನನಗೆ ಕೊನೆಯ ಕ್ಷಣದಲ್ಲಿ ತಿಳಿಯಿತು. ಅವನ ಮನಸ್ಸಿನಲ್ಲಿ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ. ಈ ನಿರ್ಧಾರ ನನಗೆ ಸಂತೋಷ ಮತ್ತು ನೋವು ಎರಡನ್ನೂ ನೀಡಿದೆ. ಅವನು ತನ್ನ ಆಟವನ್ನು ಮುಂದುವರಿಸಬೇಕಿತ್ತು. ಆದರೆ ಅವನ ನಿರ್ಧಾರದಲ್ಲಿ ನಾವ್ಯಾರೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
ʼಅಶ್ವಿನ್ ನಿವೃತ್ತಿಗೆ ಅವನದೇ ಆದ ಕಾರಣ ಇರಬಹುದು. ಅದು ಅವನಿಗೆ ಮಾತ್ರ ಗೊತ್ತು. ತಂಡದಲ್ಲಿ ಅವನಿಗೆ ಆಗಾಗ ಎದುರಾಗುತ್ತಿದ್ದ ಅವಮಾನವೂ ಇದಕ್ಕೆ ಕಾರಣವಾಗಿರಬಹುದು’ ಎಂದು ರವಿಚಂದ್ರನ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್, ಇದು ಕೇವಲ ತಂದೆಯವರ ಅನಿಸಿಕೆ ಎಂದು ಹೇಳಿದ್ದಾರೆ.