Advertisement

2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಈ ಬಾರಿ ಸೋಮಣ್ಣ ಗೆಲ್ಲಬೇಕು: ಎಚ್.ಡಿ.ದೇವೇಗೌಡ

07:36 PM Apr 15, 2024 | Team Udayavani |

ಕೊರಟಗೆರೆ: ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲೂ ನಮ್ಮ ಮೈತ್ರಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳಿಸಿಕೊಡುವ ಶಕ್ತಿ ನನಗಿನ್ನೂ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Advertisement

ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಆಗುವ ಅರ್ಹತೆ ಯಾರಿಗೇ ಇದೇ ಹೇಳಿ. ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆದ್ದರೇ ನಿಮ್ಮ ದೇವೇಗೌಡರೇ ಗೆದ್ದಂತೆ ಎಂದರು.

ನಾನು ಕಾವೇರಿ ವಿಚಾರದಲ್ಲಿ ಮೋದಿಯನ್ನು ನಂಬಿದ್ದೇನೆ.1962 ರಿಂದ ನಾನು ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದೇನೆ. ವಿ.ಸೋಮಣ್ಣ ಗೆದ್ರೇ ತಲೆ ಎತ್ತಿ ನಾನು ಮೋದಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡ್ತಿನಿ. ತಮಿಳುನಾಡಿನ ಸ್ಟಾಲಿನ್ ನೀರಿನ ವೈರತ್ವದ ಬಗ್ಗೆ ಪ್ರಧಾನಿ ಮೋದಿಗೂ ಅರ್ಥ ಆಗಿದೆ. ನಾನು 2019 ರಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ ಆದರೇ ಈಬಾರಿ ವಿ.ಸೋಮಣ್ಣ ಗೆದ್ದು ದೆಹಲಿಗೆ ಹೋಗಬೇಕಿದೆ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನವರೇ ನೀವು ರಾಜ್ಯದ 7 ಕೋಟಿ ಜನರ ಮುಖ್ಯಮಂತ್ರಿ. 150 ಕೋಟಿ ಜನರ ಪ್ರಧಾನಮಂತ್ರಿ ನರೇಂದ್ರಮೋದಿ ಬಗ್ಗೆ ಮಾತನಾಡುವ ಮುನ್ನ ಎಚ್ಚರವಹಿಸಿ. ಸೋಮಣ್ಣ ಎಲ್ಲಿಯವನು ಅಂತಾ ನೀವು ಕೇಳ್ತಿರಾ. ನೀವು ಎಲ್ಲಿಯವರು ಬಾದಾಮಿಗೆ ಯಾಕೆ ಹೋದ್ರಿ ಹೇಳಿ. ಹೆಗಡೆ ಸಿಎಂ ಆಗಿದ್ದಾಗ ಬರಗಾಲ ಇತ್ತು ಆಗ ಅವರ ಕೇಂದ್ರ ಎಷ್ಟು ಹಣ ಕೊಡ್ತು ಅಂತಾ ಸಿದ್ದರಾಮಯ್ಯ ಹೇಳಲಿ. ನಾನು ತುಮಕೂರಿಗೆ ನೀರು ಕೋಡೋದಿಲ್ಲ ಅಂತೇಳಿ ನನ್ನ ಸೋಲಿಸಿದರು. ಈಗ ಬೆಂಗಳೂರಿನಲ್ಲಿ ಕುಡಿಯೋ ನೀರಿನ ದಂಧೆ ಎಷ್ಟು ನಡೆಯುತ್ತಿದೆ ಎಂಬುದು ಮೋದಿಯ ಗಮನಕ್ಕೆ ಹೋಗಿದೆ ಎಂದರು.

ವಿ.ಸೋಮಣ್ಣ ಮಾತನಾಡಿ, ಸಿದ್ದರಾಮಯ್ಯ ಸಿಎಂ ಮಾಡಲು 86 ಶಾಸಕರ ಸಹಿ ಹಾಕಿಸಿ ದೇವೇಗೌಡರಿಗೆ ಕೊಟ್ಟಿದ್ದು ಇದೇ ಸೋಮಣ್ಣ. ಒಂದೇ ಬೂತ್‌ನಲ್ಲಿ 2 ಸಾವಿರ ಮತಗಳ ಲೀಡ್ ಕೊಡಿಸಿದ್ದು ಇದೇ ಸೋಮಣ್ಣ. ನೀವು ಮಾತನಾಡುವಾಗ ಅವರ ಅರ್ಹತೆ ಬಗ್ಗೆ ತಿಳಿಯಬೇಕಿದೆ. ನಿಮಗೇ ಅವಕಾಶ ಸಿಗ್ತು.  ನೀವು ಮುಖ್ಯಮಂತ್ರಿ ಆಗಿದ್ದೀರಿ. ಅರ್ಹತೆ ಇದ್ದೋರಿಗೆ ಸರಿಯಾದ ಅವಕಾಶ ಸಿಗೋದಿಲ್ಲ. ನೀವು ಎಲ್ಲೋ ಕೂತಿದ್ದೀರಿ ಅಂತಾ ಇನ್ನೊಬ್ಬರನ್ನು ಟೀಕೆ ಮಾಡಬೇಡಿ ಎಂದು ಕಿಡಿಕಾರಿದರು.

Advertisement

ನಾವು ಬಡವರ ಮಕ್ಕಳು ನಿಮ್ಮ ಹಾಗೇ ಶ್ರೀಮಂತರ ಮಕ್ಕಳಲ್ಲ. ನಾವು ಇನ್ನೋಬ್ಬರ ಬಗ್ಗೆ ರಾಜಕೀಯ ಪ್ರೇರಿತವಾಗಿ ಮಾತನಾಡಲ್ಲ. ಸೋಮಣ್ಣ ಹಿಂದೆ ಇಡೀ ಭಾರತ ದೇಶ ಇದೆ. ನರೇಂದ್ರ ಮೋದಿ, ಅಮಿತ್‌ಶಾ ಅಂತಹ ನಾಯಕರು ಇದಾರೇ. ನನಗೇ ಸಂಸ್ಕಾರ ಹೇಳಿಕೊಟ್ಟ ದೇವೇಗೌಡರು ಜತೆಗಿದ್ದಾರೆ. ನಾನು ಯಾರ ಬಗ್ಗೆ ಟೀಕೆ ಮಾಡೋದಿಲ್ಲ ಎಂದು ಪರೋಕ್ಷವಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಎಂಎಲ್‌ಸಿ ನಾರಾಯಣಸ್ವಾಮಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜಿನಪ್ಪ, ಬಿಜೆಪಿ ಯುವಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಪವನಕುಮಾರ್, ಗುರುಧತ್, ದಾಸಲುಕುಂಟೆ ರಘು ಸೇರಿದಂತೆ ಇತರರು ಇದ್ದರು.

3 ಗಂಟೆ ತಡವಾಗಿ ಸಮಾವೇಶ ಆರಂಭ
ಮೈತ್ರಿಪಕ್ಷದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಮವಾರ ಬೆ. 10 ಗಂಟೆಗೆ ಬರಬೇಕಿತ್ತು. ಆದರೇ ಕೆಲವು ಕಾರಣದಿಂದ 3 ಗಂಟೆ ತಡವಾಗಿ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಪರಿಣಾಮ ಸಮವೇಶ ತಡವಾಗಿ ಆರಂಭವಾಯಿತು. ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಜನ ಮುಖಂಡರು ಮತ್ತು ಕಾರ್ಯಕರ್ತರು ಬಿಸಿಲಿನ ತಾಪಕ್ಕೆ ಕಾದು ಕಾದು ಬೇಜಾರಿನಿಂದ ಹಿಂದಿರುಗಿದ ಘಟನೆ ನಡೆಯಿತು.

ಹಾಲಿ ಸಂಸದ ಬಸವರಾಜು ಗೈರು
ಮೈತ್ರಿಪಕ್ಷದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಾವೇಶದಲ್ಲೂ ಗೈರಾಗಿದ್ದ ತುಮಕೂರು ಹಾಲಿ ಸಂಸದ ಜಿ.ಎಸ್.ಬಸವರಾಜು ಕೊರಟಗೆರೆಯಲ್ಲಿ ಸೋಮವಾರ ನಡೆದ ಮಾಜಿ ಪ್ರಧಾನಿಗಳ ಸಮಾವೇಶದಲ್ಲೂ ಮತ್ತೆ ಗೈರು. ಕೊರಟಗೆರೆಯಲ್ಲಿ ನಡೆದ ವಿ.ಸೋಮಣ್ಣನವರ ಸುದ್ದಿಗೋಷ್ಟಿ ಸೇರಿದಂತೆ ಕೊರಟಗೆರೆ ಕ್ಷೇತ್ರದ ಬೂತ್‌ಮಟ್ಟದ ಸಭೆ ಮತ್ತು ಗ್ರಾಪಂಮಟ್ಟದ ಯಾವುದೇ ಸಮಾರಂಭದಲ್ಲಿ ಭಾಗವಹಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next