ಹುಮನಾಬಾದ: ಪ್ರತಿಫಲಾಪೇಕ್ಷೆ ಇಲ್ಲದಿರುವುದೇ ನೈಜ ರಾಷ್ಟ್ರಸೇವೆ ಎಂದು ಚಿಟಗುಪ್ಪ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಂ.ಎಸ್.ಉಪ್ಪಿನ್ ಹೇಳಿದರು.
ಪಟ್ಟಣದ ಇಲ್ಲಿನ ಪೂಜ್ಯ ಶಿವಲಿಂಗ ಸ್ವತಂತ್ರ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಯ ವಿದ್ಯಾರ್ಥಿಗಳಿಗಾಗಿ ಹತ್ತಿರದ ಮಾಣಿಕನಗರದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಾಣ ಪಣಕ್ಕಿಟ್ಟು ದೇಶದ ಗಡಿಯಲ್ಲಿ ಗನ್ ಹಿಡಿದು ನಿಲ್ಲುವುದೊಂದೇ ರಾಷ್ಟ್ರ ಸೇವೆಯಲ್ಲ, ಸಮಾಜದಲ್ಲಿ ನಿರ್ಗತಿಕರು, ಅಸಹಾಯಕರಿಗೆ ಕೈಲಾದ ಸಹಾಯ ಮಾಡುವುದು ಮತ್ತು ರಾಷ್ಟ್ರದ ನೆಲ, ಜಲ ಸಂರಕ್ಷಿಸುವುದು ಕೂಡ ರಾಷ್ಟ್ರಸೇವೆ. ನಾವು ಕೇವಲ ನಮ್ಮ ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೇ ಸಾಲದು ಆಸುಪಾಸಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಸ್ವಚ್ಛತೆ ಮಹತ್ವ ಗೊತ್ತಿಲ್ಲದವರಿಗೆ ಅರಿವು ಮೂಡಿಸುವ ಕೆಲಸ ಶಿಬಿರಾರ್ಥಿಗಳು ಮಾಡಬೇಕು. ಜೊತೆಗೆ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಪರಿಚಯಿಸುವುದೇ ಶಿಬಿರದ ಮೂಲ ಉದ್ದೇಶ ಎಂದು ಹೇಳಿದರು.
ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಜಿ.ಟಿ.ದೊಡ್ಮನಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಪರಿಪಾಲನೆ. ಶಿಸ್ತಿಗೆ ಅತ್ಯಂತ ಮಹತ್ವ ನೀಡಿದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯರ್ಥ ಕಾಲಹರಣ ಮಾಡದೇ ಸಮಯದ ಸದ್ಬಳಕೆ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ಬಿ.ಎನ್.ಪಾಟೀಲ ಮಾತನಾಡಿದರು. ರೇವಣಪ್ಪ ಬಿರಾದಾರ, ಬಸವರಾಜ ಹಲಕರಟಿ ಮತ್ತಿತರರು ಇದ್ದರು.
ಉಷಾ ಪ್ರಾರ್ಥಿಸಿದರು. ಶಿವರಾಜ ಜವಳಗಿ ಸ್ವಾಗತಿಸಿದರು. ಶಿಬಿರಾಕಾರಿ ಮದನ್ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಜೆ.ಬಸವರಾಜ ನಿರೂಪಿಸಿದರು. ಲಕ್ಷ್ಮಿ ಓತಗಿಕರ್ ವಂದಿಸಿದರು.