ಇಂಥ ನಿರ್ಧಾರಗಳು ವೆಚ್ಚವನ್ನು ಹೆಚ್ಚಿಸಿ, ಅಭಿವೃದ್ಧಿಗೆ ಕಡಿವಾಣ ಹಾಕಲಿದೆ. ಅಲ್ಲದೆ, ನಾವು ಹಿಮ್ಮುಖವಾಗಿ ಹೆಜ್ಜೆಯಿಟ್ಟಂತಾಗಲಿದೆ ಎಂದೂ ಹೇಳಿದೆ. ಹಲವು ರಾಜ್ಯಗಳು ಒಪಿಎಸ್ ಮರುಜಾರಿ ಮಾಡುವ ಕುರಿತು ಘೋಷಿಸುತ್ತಿರುವ ಹಾಗೂ ಆಶ್ವಾಸನೆಗಳನ್ನು ನೀಡುತ್ತಿರುವಂತೆಯೇ ಆರ್‌ಬಿಐನಿಂದ ಇಂಥ ಸಂದೇಶ ಹೊರಬಿದ್ದಿದೆ.
Advertisement
ಎಲ್ಲ ರಾಜ್ಯಗಳೂ ಹೊಸ ಪಿಂಚಣಿ ವ್ಯವಸ್ಥೆಯಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಿದರೆ, ಸಂಚಿತ ಹಣಕಾಸಿನ ಹೊರೆ ಎನ್‌ಪಿಎಸ್‌ಗಿಂತ 4.5 ಪಟ್ಟು ಹೆಚ್ಚಳವಾಗಲಿದೆ. ಜೊತೆಗೆ, 2060ರ ವೇಳೆಗೆ ಹೆಚ್ಚುವರಿ ಹೊರೆಯು ವಾರ್ಷಿಕವಾಗಿ ಜಿಡಿಪಿಯ ಶೇ.0.9ಕ್ಕೆ ತಲುಪಲಿದೆ. ಇದು 2040ರ ದಶಕದ ಆರಂಭದಲ್ಲಿ ನಿವೃತ್ತರಾಗುವವರ ಹಿರಿಯ ಒಪಿಎಸ್ ಪಿಂಚಣಿದಾರರ ಪಿಂಚಣಿ ಹೊರೆಯನ್ನೂ ಹೆಚ್ಚಿಸುತ್ತದೆ ಎಂದು ಹೇಳಿದೆ. ಇದೇ ವೇಳೆ, ಜನರಿಗೆ ಅನಗತ್ಯ ಸಬ್ಸಿಡಿ ಒದಗಿಸುವುದರಿಂದಲೂ ದೂರವಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ.
ಸಾಲ ಮನ್ನಾದ ಆಶ್ವಾಸನೆ ನೀಡುತ್ತೇವೆಂದು ಹಾದಿತಪ್ಪಿಸುವಂಥ ಜಾಹೀರಾತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಆರ್‌ಬಿಐ ಸೂಚನೆ ನೀಡಿದೆ. ಈ ರೀತಿಯ ಜಾಹೀರಾತು ನೀಡುವ ಸಂಸ್ಥೆಗಳು, ನೀವು ಬ್ಯಾಂಕುಗಳಿಗೆ ಬಾಕಿ ಪಾವತಿಸಬೇಕಾದ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತವೆ. ಇಂಥ ಚಟುವಟಿಕೆಗಳು ಹಣಕಾಸು ಸಂಸ್ಥೆಗಳ ಸ್ಥಿರತೆಯನ್ನು ಮತ್ತು ಠೇವಣಿದಾರರ ಹಿತಾಸಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಸಂಸ್ಥೆಗಳ ಜಾಹೀರಾತುಗಳಿಗೆ ಮಾರುಹೋದರೆ ನೇರ ಆರ್ಥಿಕ ನಷ್ಟಕ್ಕೆ ಸಿಲುಕುತ್ತೀರಿ ಎಂದೂ ಆರ್‌ಬಿಐ ಹೇಳಿದೆ.