ಸಾಗರ: ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬೇಳೂರಿಗೆ ಟಿಕೆಟ್ ಘೋಷಣೆಯಾದಾಗ ಬಳಿಕ ಕಾಂಗ್ರೆಸ್‌ನಿಂದ ಕಾಲ್ಕಿತ್ತ ನಾಯಿ ನರಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಜತೆಯಲ್ಲಿ ರಾಜಕೀಯವಾಗಿ ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ, ಇನ್ನೊಬ್ಬರನ್ನು ಹೆದರಿಸಿ, ಬೇರೆಯವರಿಗೆ ಹೆದರಿಕೊಂಡು ನಾನು ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರವಾಗಿ ಪ್ರತಿಕ್ರಿಯಿಸಿದರು.
ಮಂಗಳವಾರ ಪಟ್ಟಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಪಕ್ಷ ಬಿಟ್ಟವರನ್ನು ಮರು ಸೇರ್ಪಡೆಯ ಪ್ರಶ್ನೆಯೇ ಇಲ್ಲ. ಅಂಥ ದುಷ್ಟ ಕೂಟವನ್ನು ಸೇರಿಸಿಕೊಳ್ಳಲು ನಾನು ಬಿಡುವುದಿಲ್ಲ. ಅವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಜಿಲ್ಲೆಯಲ್ಲಿ ಬೇಳೂರು ವೇಗಕ್ಕೆ ತಡೆಯೊಡ್ಡುವ ಶಕ್ತಿ ಯಾರಿಗೂ ಇಲ್ಲ. ನನ್ನ ಶಿಫಾರಸು ಪತ್ರಗಳಿಗೆ ತಡೆಯೊಡ್ಡುವವರು ಯಾರೂ ಇಲ್ಲ ಎಂದು ವಿಶ್ವಾದ ವ್ಯಕ್ತಪಡಿಸಿದರು.
ನಾನು ಮೂರು ಬಾರಿ ಶಾಸಕನಾಗಿದ್ದು, ಓರ್ವ ಹಿರಿಯ ಶಾಸಕನಾಗಿದ್ದೇನೆ. ನನ್ನ ಅಭಿವೃದ್ಧಿ ವೇಗಕ್ಕೆ ಅಡ್ಡಗಾಲು ಹಾಕಲು ಯಾರೇ ಪ್ರಯತ್ನ ಪಟ್ಟರೂ ಸಹಿಸಿಕೊಳ್ಳುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿ ವಿಷಯದಲ್ಲಿ ನನ್ನನ್ನು ಕಡೆಗಣಿಸುತ್ತಿದ್ದಾರೆ. ಇದರ ಬಗ್ಗೆ ನನ್ನ ವಿರೋಧವಿದೆಯೇ ವಿನಾ ವೈಯಕ್ತಿಕ ದ್ವೇಷ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಪಕ್ಷದ ಆಂತರಿಕ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದ್ದು, ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಸುಮಾರು 2.5 ವರ್ಷ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯನ್ನೇ ನಡೆಸಿಲ್ಲ. ನಗರಸಭೆಗೂ ಒಂದು ವರ್ಷ ಕಾಯಿಸಿದ್ದರು. ಹೀಗಾಗಿ ಅವರು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ನಗರಸಭೆ, ಪಟ್ಟಣ ಪಂಚಾಯತಿಗಳ ಅಧ್ಯಕ್ಷರ ಹುದ್ದೆ ಮೀಸಲಾತಿ ಕುರಿತು ಇತ್ತೀಚೆಗೆ ಚರ್ಚೆ ನಡೆದಿದ್ದು, ಸದ್ಯದಲ್ಲೇ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಹಿಂದಿನ ಶಾಸಕರು ಅಭಿವೃದ್ಧಿಯ ಮಾತನಾಡುತ್ತಾರೆ. ಅವರು ಮೊದಲು ಒಂದೂವರೆ ವರ್ಷ ಅನುದಾನವನ್ನೇ ತಂದಿರಲಿಲ್ಲ. ನಾನು ಅನುದಾನ ತರುತ್ತಿದ್ದೇನೆ ಎಂದು ಪ್ರಚಾರ ಮಾಡುವುದಿಲ್ಲ. ಹಣ ತಂದು ಕಾಮಗಾರಿ ಮುಗಿಸಿ, ಆ ಮೂಲಕ ನನ್ನ ಸಾಧನೆ ತೋರಿಸುತ್ತೇನೆ.
-ಗೋಪಾಲಕೃಷ್ಣ ಬೇಳೂರು, ಶಾಸಕ