ಈ ಜಗತ್ತಿನಲ್ಲಿ ಮಾತಿಗಿರುವಷ್ಟು ಪ್ರಾಧಾನ್ಯತೆ ಮೌನಕ್ಕೂ ಇದೆಯೆಂದರೆ ಇದರ ಬೆಲೆ ಅಮೂಲ್ಯವಾದದು. ಮಾತು ಮತ್ತು ಮೌನ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚು ಮಾತನಾಡಿ ವಾಚಾಳಿಯಾಗುವುದಕ್ಕಿಂತ ಮೌನಧರಿಸಿ ಯೋಗಿಯಾಗುವುದು ಲೇಸು. ಮನಸಿನ ಚಂಚಲತೆಯನ್ನು ತಡೆಯಲು ಮೌನವೆಂಬುದು ಒಂದು ಪ್ರಬಲವಾದ ಆಯುಧ ಅಲ್ಲದೆ ಶ್ರೀ ಪತಂಜಲಿ ಮಹರ್ಷಿಗಳು ತಮ್ಮ ಯೋಗಶಾಸ್ತ್ರ ಕೃತಿಯಲ್ಲಿ ಧ್ಯಾನವೆಂಬ ಪ್ರಾಣಾಯಾಮದಿಂದ ಮೌನವನ್ನು ಧರಿಸಬಹುದು ಎಂದಿದ್ದಾರೆ.
ಅತಿ ಮಾತನಾಡಿ ಪರರ ನಿಂದೆಗೆ ಗುರಿಯಾಗುವುದಕ್ಕಿಂತ ಸುಮ್ಮನಿದ್ದು ಜ್ಞಾನಿಯಾಗುವುದು ಲೇಸಲ್ಲವೆ. ಮಾತು ಸರ್ವರನ್ನು ಗೆದ್ದರೆ, ಮೌನ ಎಲ್ಲವನ್ನು ಗೆಲ್ಲುತ್ತದೆ. ಹಾಗಾಗಿಯೆ ಜ್ಞಾನಿಗಳು ಹೆಚ್ಚು ಮೌನವಾಗಿಯೆ ಇರುತ್ತಾರೆ. ಮಾತಿನಿಂದಾಗದ ಕೆಲಸಗಳನು ಮೌನ ಮಾಡಿ ತೋರಿಸುತ್ತದೆ.
ಮಾತಿಗೆ ಒಂದು ಮಾರ್ಗವಿದ್ದರೆ ಮೌನಕ್ಕೆ ನೂರಾರು ಮಾರ್ಗಗಳಿವೆ. ಮಾತಾಡಿ ಜಗಳಗಳನ್ನು ಎದುರು ಹಾಕಿಕೊಂಡು ನೂರೆಂಟು ಪಡಿಪಾಟಲು ಎದುರಿಸುವ ಬದಲು ಮೌನವಾಗಿದ್ದು ಸರ್ವಕಾಲದಲ್ಲೂ ವಿಜಯವನ್ನು ಸಾಧಿಸಬಹುದು.
ಮಾತು ಬೆಳ್ಳಿ ಮೌನ ಬಂಗಾರ ಎಂದು ಹಿರಿಯರು ಹೇಳಿದ ನುಡಿಮುತ್ತು ಸರ್ವಕಾಲಕೂ ಸತ್ಯ. ಏಕೆಂದರೆ ಮೌನಕ್ಕಿರುವಷ್ಟು ತೂಕ ಮಾತಿಗೆ ಇಲ್ಲ. ಅದಕ್ಕಾಗಿಯೆ ಮೌನವನ್ನು ಬಂಗಾರಕ್ಕೆ ಹೋಲಿಸಲಾಗಿದೆ. ಬಂಗಾರ ಹೇಗೆ ಪುಟಕ್ಕಿಟ್ಟಷ್ಟು ಹೊಳಪು ನೀಡುತ್ತದೆಯೋ ಅದರಂತೆ ಮೌನ ಧರಿಸಿದಷ್ಟು ವ್ಯಕ್ತಿಯ ಬೆಲೆ ಹೆಚ್ಚುತ್ತಲೆ ಹೋಗುತ್ತದೆ. ಯಾವುದೇ ಒಂದು ಕಲಹ ನಡೆದಾಗ ಹಿರಿಯರು ಹೇಳುವ ವಿಚಾರ ನೀನು ಮಾತಾಡಬೇಡ ಸುಮ್ಮನಿರು ಎಂದು ಹೇಳಿ ಮೌನಕ್ಕೆ ಪೀಠಿಕೆ ಹಾಕುತ್ತಾರೆ. ಅಲ್ಲಿಗೆ ಜಗಳ ಮುಕ್ತಾಯದ ಹಂತ ತಲುಪುತ್ತದೆ. ಮಾತಿಗೆ ಮಾತುಬೆಳೆದು ಯುದ್ದವಾಗುವ ಮೊದಲು ಮೌನಕ್ಕೆ ಶರಣುಹೋದಾಗ ಎಲ್ಲರೂ ಶಾಂತವಾಗುತ್ತದೆ. ಕೆಲವೊಂದು ಕ್ಲಿಷ್ಟಕರವಾದ ಸಂದರ್ಭದಲ್ಲಿ ಮೌನವನು ಧರಿಸುವುದು ಉತ್ತಮವೆನಿಸುತ್ತದೆ. ಹಾಗಾಗಿ ನಾವು ನೀವೆಲ್ಲ ಮೌನಕೆ ಶರಣಾಗಿ ಸುಖ ಜೀವನವ ನೋಡೋಣ.
-ಶಂಕರಾನಂದ, ಹೆಬ್ಟಾಳ