ಹೊಸದಿಲ್ಲಿ: ನಿರ್ದಿಷ್ಟ ಪರೀಕ್ಷೆಗೆ ಗೈರಾಗುವ ವಿದ್ಯಾರ್ಥಿಗಾಗಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸುವ ನಿಯಮಗಳು ಯಾವುದು ನಮ್ಮಲ್ಲಿಲ್ಲ. ವಿದ್ಯಾರ್ಥಿಗೆ ಅನಾರೋಗ್ಯ ಅಥವಾ ಅಪಘಾತವಾಗಿದ್ದರಿಂದ ಪರೀಕ್ಷೆಗೆ ಗೈರಾದರೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
2021ರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮೂವರು ವಿದ್ಯಾರ್ಥಿಗಳು, ಕೊರೊನಾ ಪಾಸಿಟಿವ್ ಆಗಿದ್ದರಿಂದ ಅನಂತರ ನಡೆದ ಮುಖ್ಯ ಪರೀಕ್ಷೆಗೆ ಗೈರಾಗಿದ್ದರು. ಹಾಗಾಗಿ ಅವರು ತಮಗೆ ಮತ್ತೊಂದು ಅವಕಾಶ ಕಲ್ಪಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಯುಪಿಎಸ್‌ಸಿಗೆ ತನ್ನ ಅಹವಾಲು ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಅಫಿದಾವಿತ್ ಸಲ್ಲಿಸಿರುವ ಯುಪಿಎಸ್‌ಸಿ, ಮೇಲಿನಂತೆ ತಿಳಿಸಿದೆ.
ಇದನ್ನೂ ಓದಿ:ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ; ಏಮ್ಸ್ ಆಸ್ಪತ್ರೆಗೆ ದಾಖಲು
ಆದರೆ ಕೊರೊನಾ ಕಾರಣಕ್ಕೆ ಗೈರಾದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇತ್ಯಾದಿ ಅವಕಾಶ ಕಲ್ಪಿಸುವ ಹೊಣೆ ಕೇಂದ್ರ ಸಿಬಂದಿ ಹಾಗೂ ತರಬೇತಿ ಇಲಾಖೆಯದ್ದಾಗಿದೆ ಎಂದು ಅಫಿದಾವಿತ್‌ನಲ್ಲಿ ಯುಪಿಎಸ್‌ಸಿ ತಿಳಿಸಿದೆ.