Advertisement
ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯಹೆದ್ದಾರಿ ಕಡಬ ಪೇಟೆಯ ಮೂಲಕವೇ ಹಾದುಹೋಗುತ್ತಿದೆ. ಪೇಟೆಯಲ್ಲಿ ವಾಹನಗಳು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಆಟೋಗಳು, ಬಾಡಿಗೆ ಜೀಪು, ಪಿಕಪ್, ಮಿನಿಬಸ್‌ಗಳು, ಟೆಂಪೋ ಟ್ರಾಕ್ಸ್‌ಗಳು ರಸ್ತೆಯ ಪಕ್ಕದಲ್ಲಿಯೇ ನಿಲುಗಡೆಯಾಗುವುದರಿಂದ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ವ್ಯಾಪಾರ ವ್ಯವಹಾರಗಳಿಗಾಗಿ ಪೇಟೆಗೆ ಬರುವ ಜನರಿಗೂ ಇಲ್ಲಿ ವಾಹನ ನಿಲ್ಲಿಸಲು ಸೂಕ್ತ ಜಾಗ ಇಲ್ಲ. ಪಂಚಾಯತ್ ನವರು ಪೇಟೆಯಲ್ಲಿ ಪಾರ್ಕಿಂಗ್ ಗಾಗಿ ರಸ್ತೆಯ ಪಕ್ಕದ ಗುಡ್ಡ ಅಗೆದು ಮಣ್ಣು ತೆಗೆದರೂ ವ್ಯವಸ್ಥಿತ ಪಾರ್ಕಿಂಗ್ ಕಾರ್ಯರೂಪಕ್ಕೆ ಬಂದಿಲ್ಲ. ಪಂಚಾಯತ್, ಕಂದಾಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಯೋಜನೆ ರೂಪಿಸಿ ಕಡಬದ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ.
ಪಂಚಾಯತ್ ವತಿಯಿಂದ ಕಡಬದಲ್ಲಿ ಶುಲ್ಕ ಸಹಿತ ಸುಸಜ್ಜಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲು ಮುಂದಾಗಿ ಹಲವು ವರ್ಷಗಳೇ ಕಳೆದವು. ಅದಕ್ಕಾಗಿ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದಲ್ಲಿ ರಸ್ತೆಯ ಪಕ್ಕ 2 ಕಡೆ ಹಾಗೂ ದೈವಗಳ ಮಾಡದ ಬಳಿ ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಯನ್ನು ಲಕ್ಷಾಂತರ ರೂ. ಪಂಚಾಯತ್ ಅನುದಾನ ವ್ಯಯಿಸಿ ಸಮತಟ್ಟುಗೊಳಿಸಲಾಗಿತ್ತು. ಸುಸಜ್ಜಿತ ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರು, ಸಣ್ಣ ಕೈತೋಟ ಹೀಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಸಂಸದರು, ಶಾಸಕರು, ಜಿ.ಪಂ.ಹಾಗೂ ತಾ.ಪಂ. ಅನುದಾನವನ್ನು ಕ್ರೋಡೀಕರಿಸಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಪಾರ್ಕಿಂಗ್ ಸ್ಥಳವನ್ನು ಜಿಲ್ಲಾಧಿಕಾರಿಗಳು ನೋಟಿಫಿಕೇಶನ್ ಮಾಡಬೇಕಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಕಡಬ ಆರಕ್ಷಕ ಉಪನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ವರದಿ ಕೂಡ ನೀಡಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಯಾವುದೇ ಕೆಲಸ ಆಗಿಲ್ಲ. ಶೀಘ್ರ ಕ್ರಮ
ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗಾಗಿ ಜಾಗ ಗುರುತಿಸಿ ಪಂಚಾಯತ್ ವತಿಯಿಂದ ಸಮತಟ್ಟು ಮಾಡಿಸಿದೆ. ಪಾರ್ಕಿಂಗ್ ವಲಯ ಎಂದು ನೋಟಿಫಿಕೇಶನ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಕೂಡ ಆಗಿದೆ. ಆದರೆ ಅಲ್ಲಿಂದ ಅಂತಿಮ ಆದೇಶ ಬಂದಿಲ್ಲ. ಈ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ಬರೆದುಕೊಳ್ಳಲಾಗುವುದು. ಶೀಘ್ರ ಆರ್‌ಟಿಒ, ಕಂದಾಯ, ಪೊಲೀಸ್, ವಾಹನ ಚಾಲಕ -ಮಾಲಕರು ಹಾಗೂ ವರ್ತಕರ ಸಭೆ ಕರೆದು ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಗ್ರಾ.ಪಂ.
Related Articles
ಕಡಬ ಪೇಟೆಯಲ್ಲಿ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಆಗಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಹಲವಾರು ಬಾರಿ ಈ ಬಗ್ಗೆ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿಲ್ಲ. ಒಂದು ಪೇಟೆಯಲ್ಲಿ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಬೇಕಿದ್ದರೆ ಸಮರ್ಪಕವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಅತ್ಯವಶ್ಯಕ. ಗ್ರಾಹಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಹೋದರೆ ಅದರಿಂದ ವ್ಯಾಪಾರಕ್ಕೂ ಹೊಡೆತ ಇದೆ. ಆದುದರಿಂದ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೇರಿಕೊಂಡು ಕಡಬ ಪೇಟೆಯಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
– ಸುಜಿತ್ ಪಿ.ಕೆ. ಕಾರ್ಯದರ್ಶಿ, ಕಡಬ ವರ್ತಕ ಸಂಘ
Advertisement
ವರದಿ ಸಲ್ಲಿಕೆಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಪಂಚಾಯತ್‌ನಿಂದ ವಾಹನ ಪಾರ್ಕಿಂಗ್ ಗಾಗಿ ಗುರುತಿಸಲ್ಪಟ್ಟ ಜಾಗಗಳ ಬಗ್ಗೆ ಜಿಲ್ಲಾಧಿಕಾರಿಯವರು ವರದಿ ಕೇಳಿದ್ದ ಹಿನ್ನೆಲೆಯಲ್ಲಿ ಠಾಣೆಯ ವತಿಯಿಂದ ಸ್ಥಳ ಪರಿಶೀಲನೆ ನಡೆಸಿ ಈ ಹಿಂದೇಯೇ ವರದಿ ಸಲ್ಲಿಸಲಾಗಿದೆ. ಆದರೆ ಆ ಬಳಿಕ ಪ್ರಕ್ರಿಯೆ ಯಾವ ಹಂತ ತಲುಪಿದೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ನಮಗೂ ಪಾರ್ಕಿಂಗ್ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಉದ್ದೇಶಿತ ಪಾರ್ಕಿಂಗ್ ವ್ಯವಸ್ಥೆ ಶೀಘ್ರ ಅನುಷ್ಠಾನಗೊಂಡರೆ ಒಳ್ಳೆಯದು.
– ಪ್ರಕಾಶ್ ದೇವಾಡಿಗ, ಕಡಬ ಆರಕ್ಷಕ ಉಪನಿರೀಕ್ಷಕರು. — ನಾಗರಾಜ್ ಎನ್.ಕೆ. ಕಡಬ