ಮಹಾರಾಷ್ಟ್ರ:ಬಾಲಿವುಡ್ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪಾಟೇಕರ್ ಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಇದರೊಂದಿಗೆ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಮೊದಲ “ಮೀ ಟೂ” ಕೇಸ್ ಗೆ ಭಾರೀ ಹಿನ್ನಡೆಯಾದಂತಾಗಿದೆ.
ಖಾಸಗಿ ಚಾನೆಲ್ ವರದಿಯೊಂದರ ಪ್ರಕಾರ, ನಾನಾ ಪಾಟೇಕರ್ ವಿರುದ್ಧ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದ ದೂರನ್ನು ಮುಂಬೈ ಪೊಲೀಸರು ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಹಾಕುವ ಮೂಲಕ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ತಿಳಿಸಿದೆ.
ನಟಿ ತನುಶ್ರೀ ದತ್ತ ಅವರ ಆರೋಪದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಮುಂಬೈ ಪೊಲೀಸರು ಅಂಧೇರಿ ಕೋರ್ಟ್ ಗೆ ವರದಿ ಸಲ್ಲಿಸಿರುವುದಾಗಿ ಎಎನ್ ಐ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತನುಶ್ರೀ ವಕೀಲರಾದ ನಿತಿನ್, ಈ ಬಗ್ಗೆ ನಮಗೆ ಪೊಲೀಸರಿಂದ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಪ್ರಕರಣ ಕ್ಲೋಸ್ ಮಾಡಿದ್ದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
2008ರಲ್ಲಿ ಬಾಲಿವುಡ್ ನ “ಹಾರ್ನ್ ಓಕೆ ಪ್ಲೀಸ್” ಸಿನಿಮಾ ಚಿತ್ರೀಕರಣದ ವೇಳೆ ತನಗೆ ನಟ, ಚಿತ್ರದ ನಾಯಕ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿರುವುದಾಗಿ ನಟಿ ತನುಶ್ರೀ ದತ್ತ ದೂರು ದಾಖಲಿಸಿದ್ದರು. ಅಲ್ಲದೇ ಕೋರಿಗ್ರಾಫರ್, ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧವೂ ದೂರು ನೀಡಿದ್ದರು.
ತನುಶ್ರೀ ದತ್ತ ಆರೋಪದ ನಂತರ ಇಡೀ ದೇಶಾದ್ಯಂತ “ಮೀ ಟೂ” ಅಭಿಯಾನವೇ ನಡೆದಿತ್ತು. ಈ ಅಭಿಯಾನದಲ್ಲಿ ಹಲವು ನಟಿಯರು ಘಟಾನುಘಟಿ ನಟರು, ನಿರ್ಮಾಪಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿ ಪೋಸ್ಟ್ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.