Advertisement

ಪಡಿತರ ವಿತರಣೆಗಿಲ್ಲ ಸಮಸ್ಯೆ

05:18 PM Feb 27, 2020 | Suhan S |

ಮಂಡ್ಯ: ಇನ್ನು ಮುಂದೆ ಸರ್ವರ್‌ ಸಮಸ್ಯೆಯಾದರೆ ಪಡಿತರ ಚೀಟಿದಾರರು ಪಡಿತರ ಪದಾರ್ಥಗಳು ಸಿಗುವುದಿಲ್ಲವೆಂಬ ಆತಂಕಪಡಬೇಕಿಲ್ಲ. ಜಿಲ್ಲಾಧಿಕಾರಿಗಳ ಮೌಖೀಕ ಸೂಚನೆಯಂತೆ ಪಡಿತರ ಆಹಾರ ಪದಾರ್ಥಗಳ ವಿತರಣೆಗೆ ಸೂಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಂತ್ರಿಕ ಸಮಸ್ಯೆ ನಿವಾರಣೆ: ಜನವರಿ ಮಾಹೆಯಲ್ಲಿ ಆಹಾರ ಇಲಾಖೆಯ ಸರ್ವರ್‌ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದ ಕಾರಣ ಪಾಸ್‌ ಮೂಲಕ ಪಡಿತರ ವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಸರ್ವರ್‌ ಸಮಸ್ಯೆಯಿಂದ ಇ-ಕೆವೈಸಿ ಕಾರ್ಯನಿರ್ವಹಣೆ ವಿಳಂಬವಾಗಿತ್ತು. ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡದಿದ್ದರಿಂದ ಸಮಸ್ಯೆ ಎದುರಾಗಿತ್ತು. ಈಗ ಆ ತಾಂತ್ರಿಕ ಸಮಸ್ಯೆ ಎಲ್ಲವನ್ನೂ ನಿವಾರಿಸಲಾಗಿದೆ. ಫೆಬ್ರವರಿ ತಿಂಗಳ ಪಡಿತರ ವಿತರಣೆಯಲ್ಲಿ ಯಾವ ಸಮಸ್ಯೆಯೂ ಎದುರಾಗಿಲ್ಲ ಎಂದು ತಿಳಿಸಿದರು. ಒಂದೊಮ್ಮೆ ಸರ್ವರ್‌ ಸಮಸ್ಯೆ ಮರುಕಳಿಸಿದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳ ಮೌಖೀಕ ಸೂಚನೆಯಂತೆ ಪಡಿತರದಾರರಿಗೆ ಆಹಾರ ಪದಾರ್ಥಗಳನ್ನು ತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಶೀಘ್ರ ಪಡಿತರ ಚೀಟಿ ವಿತರಿಸಿ: ಜಿಲ್ಲೆಯಲ್ಲಿ 18131 ಪಡಿತರ ಚೀಟಿಗಳಿಗೆ ಅರ್ಜಿ ಸ್ವೀಕರಿಸಲಾಗಿದೆ. ಅದರಲ್ಲಿ 16415 ಅರ್ಜಿ ವಿಲೇವಾರಿ ಮಾಡಲಾಗಿದೆ. 6713 ಅರ್ಜಿಗಳನ್ನು ತಿರಸ್ಕರಿಸಿ 1716 ಅರ್ಜಿ ಪರಿಶೀಲನೆ ನಡೆಯುತ್ತಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದಾ ಸಚಿವರ ಗಮನಕ್ಕೆ ತಂದರು. ಈ ಅರ್ಜಿಗಳನ್ನು ಮುಂದಿನ ಒಂದೂವರೆ ತಿಂಗಳೊಳಗೆ ವಿಲೇವಾರಿ ಮಾಡಬೇಕು. ಪಡಿತರ ಚೀಟಿಗಳನ್ನು ಫ‌ಲಾನುಭವಿಗಳಿಗೆ ದೊರಕಿಸುವಲ್ಲಿ ಯಾವುದೇ ವಿಳಂಬವಾಗಬಾರದು. ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿಗಳಿದ್ದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಶೀಘ್ರ ವಿಲೇವಾರಿ ಮಾಡುವಂತೆ ತಿಳಿಸಿದರು.

ಎರಡು ತಿಂಗಳು ಕಾಲಾವಕಾಶ: ಸರ್ಕಾರಿ ನೌಕರರು ಹಾಗೂ ಶ್ರೀಮಂತರು ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿದ್ದಲ್ಲಿ ಅದನ್ನು ಶರಣಾಗತಿ ಮಾಡುವುದಕ್ಕೆ ಇನ್ನೊಮ್ಮೆ ಕಾಲಾವಕಾಶ ನೀಡಲಾಗುತ್ತಿದೆ. ಮುಂದಿನ ಎರಡು ತಿಂಗಳೊಳಗೆ ಆ ಕಾರ್ಡ್‌ಗಳನ್ನು ಇಲಾಖೆ ಎದುರು ಶರಣು ಮಾಡಬೇಕು ಎಂದು ತಿಳಿಸಿದರು.

Advertisement

ರದ್ದು ಮಾಡುವ ಬದಲು ವರ್ಗಾವಣೆ: ಪ್ರತಿ ನ್ಯಾಯಬೆಲೆ ಅಂಗಡಿಗಳ ಎದುರು ಕರಪತ್ರ ಅಂಟಿಸಿ ಪಡಿತರ ಚೀಟಿಗಳನ್ನು ಶರಣಾಗತಿ ಮಾಡಲು ಮಾಹಿತಿ ರವಾನಿಸಬೇಕು. ಇನ್ನೊಂದೆಡೆ ಇಲಾಖಾ ವತಿಯಿಂದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವೂ ಮುಂದುವರಿಸಬೇಕು. ಈ ಸಮಯದಲ್ಲಿ ಸರ್ಕಾರಿ ನೌಕರರು ಅಥವಾ ಉಳ್ಳವರು ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಕಂಡುಬಂದಲ್ಲಿ ಅವುಗಳನ್ನು ರದ್ದು ಮಾಡುವ ಬದಲು ಎಪಿಎಲ್‌ಗೆ ವರ್ಗಾವಣೆ ಮಾಡುವಂತೆ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರಣ ಪ್ರಮಾಣಪತ್ರ ವಿತರಣೆ: ಮರಣ ಹೊಂದಿದ ಪಡಿತರ ಚೀಟಿ ಫ‌ಲಾನುಭವಿಗಳನ್ನು ಗುರುತಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌, ನಗರ ಪ್ರದೇಶದಲ್ಲಿ ನಗರಸಭೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿ ಪಿಡಿಒ, ವಿಎಗಳು ತಮ್ಮ ವ್ಯಾಪ್ತಿಯಲ್ಲಿ ಮೃತಪಟ್ಟವರ ಮರಣ ಪ್ರಮಾಣಪತ್ರಗಳನ್ನು ವಿತರಣೆ ಮಾಡುತ್ತಿದ್ದಾರೆ. ಈ ಮರಣ ಪ್ರಮಾಣಪತ್ರಗಳಲ್ಲಿ ಒಂದನ್ನು ರಾಜ್ಯ ಚುನಾವಣಾ ಆಯೋಗ, ಮತ್ತೂಂದನ್ನು ಆಹಾರ ಇಲಾಖೆಗೆ ರವಾನಿಸಲಾಗುತ್ತಿದೆ. ಅದರನ್ವಯ ಪಡಿತರ ಚೀಟಿ ಹಾಗೂ ಮತಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಉಪ ವಿಭಾಗಾಧಿಕಾರಿ ಸೂರಜ್‌, ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದಾ, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.

ವಯಸ್ಸಾದ 1.40 ಲಕ್ಷ ಕುಟುಂಬಗಳಿಗೆ ಪಡಿತರ :  ರಾಜ್ಯದಲ್ಲಿ ವಯಸ್ಸಾಗಿರುವ 1.40 ಲಕ್ಷ ಕುಟುಂಬಗಳಿಗೆ ಪಡಿತರ ವಿತರಣೆ ಮಾಡುವಂತೆ 30 ಜಿಲ್ಲೆಗಳ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು. ವಯಸ್ಸಾದವರ ಬೆರಳಿನ ಗುರುತು ಬಯೋಮೆಟ್ರಿಕ್‌ ನಲ್ಲಿ ದಾಖಲಾಗುತ್ತಿಲ್ಲ. ಹಲವಾರು ಕುಟುಂಬಗಳು ಪಡಿತರ ಪದಾರ್ಥಗಳನ್ನು ಪಡೆಯಲು ಅಂಗಡಿಗಳಿಗೆ ಬರಲಾಗುತ್ತಿಲ್ಲ. ಅಂತಹವರನ್ನು ಅಧಿಕಾರಿಗಳೇ ಗುರುತಿಸಿ ಅವರ ನೆರೆ-ಹೊರೆಯವರಿಗೆ ಕೊಡಲು ಫ‌ಲಾನುಭವಿಗಳು ಒಪ್ಪಿದರೆ ಅವರ ಮೂಲಕ ಪಡಿತರ ಪದಾರ್ಥಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸುವಂತೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು.

ಮೆಲಾಥಿನ್‌ ಬಗ್ಗೆ ಎಚ್ಚರವಹಿಸಲು ಸೂಚನೆ :  ಗೋದಾಮುಗಳಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಲು ಮೆಲಾಥಿನ್‌ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಅನ್ನಭಾಗ್ಯ ಮರಣಭಾಗ್ಯ ಕಲ್ಪಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ರಾಸಾಯನಿಕವನ್ನು ಇಲ್ಲಿ ಬಳಕೆ ಮಾಡುತ್ತಿಲ್ಲ ತಾನೇ ಎಂದು ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಮೆಲಾಥಿನ್‌ ಕೆಎಸ್‌ ಎಫ್ಸಿ ಗೋದಾಮುಗಳಲ್ಲಿ ಬಳಕೆ ಮಾಡುತ್ತಿಲ್ಲ. ಏಕೆಂದರೆ, ಅಲ್ಲಿ ಪಡಿತರ ಬಂದ ಕೆಲವೇ ದಿನಗಳಲ್ಲಿ ಖಾಲಿಯಾಗುತ್ತಿದೆ. ಈ ರಾಸಾಯನಿಕವನ್ನು ದೀರ್ಘ‌ಕಾಲ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಗೋದಾಮುಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ. ಮೆಲಾಥಿನ್‌ ರಾಸಾಯನಿಕ ಸಿಂಪರಣೆ ಮಾಡಿದ ಇಷ್ಟು ದಿನಗಳವರೆಗೆ ಆಹಾರ ಪದಾರ್ಥಗಳನ್ನು ಬಳಸಬಾರದು ಎಂಬ ನಿಯಮವಿರುವಂತೆಯೇ ಅದರ ಬಳಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಈ ರಾಸಾಯನಿಕ ಬಳಸುವ ಸಮಯದಲ್ಲಿ ತೀವ್ರ ಜಾಗ್ರತೆ ವಹಿಸುವ ಅವಶ್ಯಕತೆ ಇದೆ. ಇದರಿಂದ ಯಾವುದೇ ಅನಾಹುತ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಚಿವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next