Advertisement

ಈ ಬಾರಿ ರಾಜ್ಯಕ್ಕಿಲ್ಲ ರಾಷ್ಟ್ರಪತಿ ಪದಕ

01:36 AM Jan 26, 2019 | |

ಬೆಂಗಳೂರು: ದೇಶದಲ್ಲೇ ಉತ್ತಮ ಪೊಲೀಸ್‌ ಸೇವೆ ಹೊಂದಿರುವ ಹೆಗ್ಗಳಿಕೆಯ ರಾಜ್ಯ ಪೊಲೀಸ್‌ ಇಲಾಖೆಯ ಯಾವೊಬ್ಬ ಅಧಿಕಾರಿಗೂ ಈ ಬಾರಿ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಭಾಗ್ಯವಿಲ್ಲ. ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಉತ್ಸಾಹ, ಹುಮ್ಮಸ್ಸು, ಗೌರವ ಜೊತೆಗೆ ಸೇವೆ ಗುರುತಿಸಲಾಗಿದೆ ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ನೀಡಲಾಗುವ ರಾಷ್ಟ್ರಪತಿ ಪದಕ ಕೈ ತಪ್ಪಲು ರಾಜ್ಯದ ಐಪಿಎಸ್‌ ಅಧಿಕಾರಿಗಳ ಒಳಜಗಳ, ಸಮನ್ವಯದ ಕೊರತೆ, ಅಧಿಕಾರಿಗಳ ನಡುವಣ ಕಲಹ ನಿಭಾಯಿಸುವಲ್ಲಿ ಗೃಹ ಇಲಾಖೆ ವಿಫ‌ಲವಾಗಿರುವುದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಸೇವೆಯಲ್ಲಿ ಉತ್ತಮ ಸಾಧನೆ ತೋರಿದರೂ ತಮ್ಮನ್ನು ಪ್ರಶಸ್ತಿ ಪಟ್ಟಿಗೆ ಸೇರಿಸುತ್ತಿಲ್ಲ ಎಂದು ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ)ಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣಾ ಹಂತದಲ್ಲಿದ್ದರಿಂದ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಿಂದ ಅರ್ಹ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಪಟ್ಟಿಯನ್ನು ಗೃಹ ಇಲಾಖೆಗೆ ಕಳುಹಿಸಿಲ್ಲ. ಹೀಗಾಗಿ ಗೃಹ ಇಲಾಖೆ ನಿಗದಿತ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ. ಹೀಗಾಗಿ, ಯಾರಿಗೂ ಈ ಬಾರಿ ರಾಷ್ಟ್ರಪತಿ ಪದಕ ಸಿಗದಂತಾಗಿದೆ. ಅರ್ಜಿ ಸಲ್ಲಿಸಿದ ಅಧಿಕಾರಿಯ ಮನವೊಲಿಸಿ ಐಪಿಎಸ್‌ ಅಧಿಕಾರಿಗಳ ನಡುವಣ ಒಳಜಗಳವನ್ನು ಮಾತುಕತೆ ಮೂಲಕ ಬಗೆಹರಿಸಿದ್ದರೆ ಹಲವು ಅಧಿಕಾರಿಗಳು ಈ ಬಾರಿ ಪದಕ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಗೃಹ ಇಲಾಖೆ ಹೇಳುವುದೇನು?: ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ಐಪಿಎಸ್‌ ಅ ಧಿಕಾರಿಗಳಿಂದ ಹಿಡಿದು ಕಾನ್ಸ್‌ಟೇಬಲ್‌ವರೆಗೆ ಒಟ್ಟು 33 ಮಂದಿಯ ಹೆಸರನ್ನು ನವೆಂಬರ್‌ ಮೊದಲ ವಾರದಲ್ಲಿ ಸಿದ್ಧಪಡಿಸಿ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಿಂದ ಗೃಹ ಇಲಾಖೆಗೆ ರವಾನಿಸಲಾಗಿತ್ತು. ಅಲ್ಲಿಂದ ಕೇಂದ್ರ ಗೃಹ ಇಲಾಖೆಗೆ ರವಾನಿಸುವ ಮೊದಲು ಸಿಎಟಿಯಿಂದ ತಡೆಯಾಜ್ಞೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ರವಾನಿಸಲು ಸಾಧ್ಯ ವಾಗಲಿಲ್ಲ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ. 2018ರಲ್ಲಿ ಐಪಿಎಸ್‌ ಅಧಿಕಾರಿಗಳು ಸೇರಿ 25 ಸಿಬ್ಬಂದಿಗೆ ಪದಕ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next