Advertisement

ಯೋಧನ ಮನೆಗಿಲ್ಲ ಕರೆಂಟ್‌ ಭಾಗ್ಯ

07:16 PM Jan 02, 2021 | Team Udayavani |

ಸಕಲೇಶಪುರ: ತಮ್ಮ ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ಯೋಧನ ಮನೆಗೆ ಎರಡು ವರ್ಷವಾದ್ರೂ ವಿದ್ಯುತ್‌ ಸಂಪರ್ಕ ಕಲ್ಪಿಸದೇ ಸೆಸ್ಕ್ನವರು ಸತಾಯಿಸುತ್ತಿದ್ದಾರೆ. ಇದರಿಂದ ಯೋಧನ ಕುಟುಂಬ ಕತ್ತಲೆಯಲ್ಲೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ.

Advertisement

ತಾಲೂಕಿನ ಹೆತ್ತೂರು ಹೋಬಳಿ ಹೊಂಗಡಹಳ್ಳ ಸಮೀಪದ ಕೊಂತನ ಮನೆ ಗ್ರಾಮದ ಎ.ಒ.ಉಮೇಶ್‌ 9 ವರ್ಷದಿಂದ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಕುಟುಂಬದ ಅನುಕೂಲಕ್ಕಾಗಿ ಮನೆಯನ್ನು ನಿರ್ಮಿಸಿದ್ದು, ಅದರಲ್ಲಿ ವಯಸ್ಸಾದ ಅಪ್ಪ-ಅಮ್ಮ, ಹೆಂಡತಿ ಮತ್ತು ಚಿಕ್ಕ ಮಗು ವಾಸುತ್ತಿದೆ.

ಜೀವ ಭಯದಲ್ಲೇ ಜೀವನ: ಕೊಂತನಮನೆ ಗ್ರಾಮ ಪಶ್ಚಿಮಘಟ್ಟದ ತಪ್ಪಲಿನಲ್ಲಿದ್ದು, ಕಾಡು ಪ್ರಾಣಿಗಳ ಕಾಟ ಹೆಚ್ಚಿದೆ. ಯೋಧನ ಮನೆಅಕ್ಕಪಕ್ಕ ಯಾವುದೇ ಮನೆ ಇಲ್ಲ, ಇತ್ತ ವಿದ್ಯುತ್‌ ಸಂಪರ್ಕವೂ ಇಲ್ಲದ ಕಾರಣ, ಯೋಧನ ಕುಟುಂಬ ಕತ್ತಲೆಯಲ್ಲೇ ಜೀವ ಭಯದೊಂದಿಗೆ ಬದುಕು ದೂಡುವಂತಾಗಿದೆ. ಮನೆಗೆ ವಿದ್ಯುತ್‌ ಸಂಪರ್ಕ ಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಯೋಧ ಉಮೇಶ್‌ ಅವರ ಕುಟುಂಬದವರಿಗೆ ಅಷ್ಟೊಂದು ಜನ ಸಂಪರ್ಕ ಇಲ್ಲ, ಹೊರ ಪ್ರಪಂಚದ ಅರಿವೂ ಅಷ್ಟಕಷ್ಟೆ. ಸೌಲಭ್ಯಕ್ಕೆ ಯಾರ ಬಳಿ ಹೋಗಬೇಕೆಂಬ ಮಾಹಿತಿಯೂ ಅವರಿಗೆ ಸಿಗುತ್ತಿಲ್ಲ, ಸ್ಥಳೀಯ ಜನಪ್ರತಿನಿಧಿಗಳೂ ಅವರಿಗೆ ಸಹಕಾರ ನೀಡುತ್ತಿಲ್ಲ. ವಿದ್ಯುತ್‌ ಸಂಪರ್ಕಕ್ಕಾಗಿ ಅಲೆದಾಡಿ ಸುಸ್ತಾದ ಕುಟುಂಬ, ತಮ್ಮ ಹಣೆ ಬರಹ ಇದ್ದಂತೆ ಆಗಲಿ ಎಂದು ಕತ್ತಲಿನಲ್ಲೆ ಕಾಲ ಕಳೆಯುತ್ತಿದೆ.

ಸಂಪರ್ಕ ಇಲ್ಲ: ಹೊಂಗಡಹಳ್ಳ ಪಂಚಾಯ್ತಿ ಒಂದರಲ್ಲೇ ಜಗಾಟ, ಬಾಗೆಮನೆ, ವರದಹಳ್ಳಿ, ಜಗಾಟೆ ಸೇರಿ 31ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಸೆಸ್ಕ್ ಕ್ರಮ ಕೈಗೊಳ್ಳಬೇಕಾಗಿದೆ. ಜನವಸತಿಪ್ರದೇಶದಿಂದ ದೂರದಲ್ಲಿರುವ ರೆಸಾರ್ಟ್‌, ಹೋಂಸ್ಟೇಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಅಧಿಕಾರಿಗಳು, ದೇಶ ಕಾಯುವ ಯೋಧನ ಮನೆಗೆ, ಬಡ ರೈತರಿಗೆ ಕರೆಂಟ್‌ ವ್ಯವಸ್ಥೆ ಮಾಡದಿರುವುದು ವಿಪರ್ಯಾಸ.

ಯೋಧನ ಕುಟುಂಬ ಇರುವ ಮನೆ ಒಂಟಿ ಯಾಗಿದೆ. ಅವರು ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವುದುತಡವಾಗಿದೆ. ನಾನು ಇತ್ತೀಚೆಗಷ್ಟೆ ಇಲ್ಲಿಅಧಿಕಾರವಹಿಸಿಕೊಂಡಿದ್ದೇನೆ. ಕೂಡಲೇ ಅವರ ಮನೆಗೆವಿದ್ಯುತ್‌ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ. ಭಾರತಿ, ಕಾರ್ಯಪಾಲಕ ಅಭಿಯಂತರರು, ಸೆಸ್ಕ್, ಸಕಲೇಶಪುರ ವಿಭಾಗ.

Advertisement

ದೇಶ ಕಾಯುವ ಯೋಧನ ಮನೆಗೆ ವಿದ್ಯುತ್‌ ನೀಡದ ಅಧಿಕಾರಿಗಳು, ಇನ್ನು ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆಸೇವೆ ಒದಗಿಸುತ್ತಾರೆ. ಕೂಡಲೇ ಸಂಬಂಧಪಟ್ಟ ಸೆಸ್ಕ್ ಎಂಜಿನಿಯರ್‌ ಕ್ರಮಕೈಗೊಳ್ಳಬೇಕಿದೆ. ಚಿದನ್‌, ಹೊಂಗಡಹಳ್ಳ ಗ್ರಾಮಸ್ಥ.

ಅರ್ಜಿ ಸಲ್ಲಿಸಿ ಹಲವು ತಿಂಗಳಾಗಿದ್ರೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಸದ್ಯ ಜಮ್ಮು – ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಮನೆಯವರ ಪರಿಸ್ಥಿತಿ ನೋಡಿದ್ರೆ ಆತಂಕ ಕಾಡುತ್ತದೆ. ಉಮೇಶ್‌, ಯೋಧ.

 

-ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next