Advertisement

ತೆರಿಗೆ ಬಾಕಿ ಇದ್ರೆ ನೀರು, ಕರೆಂಟಿಲ್ಲ!

10:54 AM Jan 06, 2020 | Suhan S |

ಬೆಂಗಳೂರು: ದೊಡ್ಡ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರ ಮನೆಗಳಿಗೆ ಸರಬರಾಜಾಗುತ್ತಿರುವ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಬಾಕಿ ವಸೂಲಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

Advertisement

ಈ ಕ್ರಮದ ಪ್ರಾಥಮಿಕ ಹಂತವಾಗಿ ಪ್ರತಿ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ತಲಾ 20 ಆಸ್ತಿ ಮಾಲೀಕರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಐದಾರು ವರ್ಷಗಳಿಂದ ನಿಗದಿತ ತೆರಿಗೆ ಸಂಗ್ರಹ ಗುರಿ ತಲುಪಲು ಪಾಲಿಕೆ ಸತತವಾಗಿ ವಿಫ‌ಲವಾಗಿದೆ. ಕಾರಣ, ಬಾಕಿದಾರರ ಮನೆ, ಕಟ್ಟಡದ ವಿದ್ಯುತ್‌ ಮತ್ತು ನೀರು ಸರಬರಾಜು ಸಂಪರ್ಕ ಸ್ಥಗಿತಗೊಳಿಸುವ ಬಗ್ಗೆ ಮೇಯರ್‌ ಎಂ.ಗೌತಮ್‌ಕುಮಾರ್‌, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದಾರೆ.

ಈ ಹಿಂದೆ ತೆರಿಗೆ ಪಾವತಿ ಮಾಡದವರ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಚಿಂತನೆ ಇತ್ತು. ಆದರೆ, ಸಾರ್ವಜನಿಕರ ಆಕ್ರೋಶದಿಂದ ಇದನ್ನು ಕೈಬಿಡಲಾಗಿತ್ತು. ಆದರೀಗ ಜಾಹೀರಾತು ತೆರಿಗೆ ಸೇರಿದಂತೆ ಇತರೆ ಆದಾಯಗಳು ಇಲ್ಲದಿರುವುದರಿಂದ ಪಾಲಿಕೆಗೆ ಆಸ್ತಿ ತೆರಿಗೆಯೇ ಮೂಲ ಆಧಾರವಾಗಿದೆ. ಹೀಗಾಗಿ, ಬಾಕಿ ಇರುವ  ಎಲ್ಲ ಆಸ್ತಿ ತೆರಿಗೆ ವಸೂಲಾತಿಗೆ ಈ ಕ್ರಮದ ಮೊರೆ ಹೋಗಲು ನಿರ್ಧರಿಸಲಾಗಿದೆ.

ನಗರದ ಅಭಿವೃದ್ಧಿ ಯೋಜನೆಗಳು ಮತ್ತು ತೆರಿಗೆ ಸಂಗ್ರಹ ಸಂಬಂಧ ಮೇಯರ್‌ ಎಂ.ಗೌತಮ್‌ ಕುಮಾರ್‌ ಇತ್ತೀ ಚಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ದ್ದರು. ಈ ವೇಳೆ ರಾಜ್ಯಪಾಲರು ನೀಡಿರುವ ಈ ಸಲಹೆಯನ್ನು ಅನುಷ್ಠಾನಗೊಳಿಸಲು ಮೇಯರ್‌ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಪ್ರಸಕ್ತ ವರ್ಷ 3500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆಯ ಮುಂದಿದ್ದು, ಈವರೆಗೆ 2400 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಗುರಿ ತಲುಪಲು ಇನ್ನು 1100 ಕೋಟಿ ರೂ. ಸಂಗ್ರಹಿಸಬೇಕು. ತೆರಿಗೆ ಬಾಕಿ ಉಳಿಸಿಕೊಂಡಿರುವವರಲ್ಲಿ ಹೆಚ್ಚಿನವರು ಶ್ರೀಮಂತರು ಎಂದು ತಿಳಿದುಬಂದಿದೆ.

ಪಟ್ಟಿ ಸಿದ್ಧಪಡಿಸಲು ಸೂಚನೆ: ನಿರೀಕ್ಷಿತ ಆದಾಯ ಸಂಗ್ರಹಕ್ಕಾಗಿ ಬೆಂಗಳೂರಿನ ಎಂಟು ವಲಯಗಳ ಜಂಟಿ ಆಯುಕ್ತರು, ತಮ್ಮ ವಲಯಗಳಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 20 ಮಂದಿ ಆಸ್ತಿ ಮಾಲೀಕರ ಪಟ್ಟಿ ಸಿದ್ಧಪಡಿಸಲು ಮೇಯರ್‌ ತಿಳಿಸಿದ್ದಾರೆ. ಜ.7ರಂದು ಈ ಪಟ್ಟಿ ಮೇಯರ್‌ ಕೈ ಸೇರಲಿದ್ದು, ಬಳಿಕ ಜಲಮಂಡಳಿ ಅಧ್ಯಕ್ಷರು ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚೆ ನಡೆಸಲಿದ್ದಾರೆ. ತೆರಿಗೆ ಬಾಕಿ ಉಳಿಸಿ ಕೊಂಡವರ ಹೆಸರು, ವಿಳಾಸವಿರುವ ಪಟ್ಟಿಯನ್ನು ನೀಡಿ ಅವರ ಮನೆಗಳಿಗೆ ನೀರು ಸರಬರಾಜು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಸೂಚಿಸಲಿದ್ದಾರೆ.

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿವಲಯದಲ್ಲಿ ತಲಾ 20ರಂತೆ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ 160 ಮಾಲೀಕರ ಮನೆಯ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು.  –ಎಂ.ಗೌತಮ್‌ ಕುಮಾರ್‌, ಮೇಯರ್

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next