Advertisement

ಕೋವಿಡ್ 19 ಮುಕ್ತ ಉಡುಪಿ ಘೋಷಣೆಗೆ ಪೂರಕ ಚಿತ್ರಣ

02:19 AM Apr 27, 2020 | Sriram |

ಉಡುಪಿ: ಉಡುಪಿ ಜಿಲ್ಲೆಯನ್ನು ಕೋವಿಡ್ 19 ಮುಕ್ತ ಎಂದು ಘೋಷಿಸಲು ಬೇಕಾದ ಪೂರಕ ಚಿತ್ರಣ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಸೋಂಕು ಲಕ್ಷಣವಿರುವವರು ಐಸೊಲೇಶನ್‌ ವಾರ್ಡ್‌ಗೆ ದಾಖಲಾಗಿಲ್ಲ ಮತ್ತು ಯಾವುದೇ ಕೋವಿಡ್ 19 ಶಂಕಿತರಿಂದಾಗಲಿ, ಕೋವಿಡ್ 19 ಸೋಂಕಿತರ ಸಂಪರ್ಕದವರಿಂದಾಗಲಿ ಗಂಟಲ ದ್ರವದ ಸಂಗ್ರಹ ನಡೆದಿಲ್ಲ.

Advertisement

ಶನಿವಾರ 16 ಜನರು ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದರೂ ಇವರು ಒಂದೋ ಉಸಿರಾಟದ ಸಮಸ್ಯೆ ಉಳ್ಳವರು ಅಥವಾ  ಜ್ವರ ಲಕ್ಷಣದವರು. ರವಿವಾರ ಎಂಟು ಜನರು ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದರು. ಅವರಲ್ಲಿ ಏಳು ಮಂದಿ ಉಸಿರಾಟದ ಸಮಸ್ಯೆ ಉಳ್ಳವರು ಮತ್ತು ಒಬ್ಬರು  ಜ್ವರ ಬಾಧೆಯವರು.

ಶನಿವಾರ 19 ಜನರ ಮಾದರಿ ಸಂಗ್ರಹಗಳನ್ನು ನಡೆಸಿದ್ದರೂ ಇದು ಕೂಡ ಉಸಿರಾಟದ ಸಮಸ್ಯೆಯವರು ಮತ್ತು ಜ್ವರ ಬಾಧೆಯವರು. ರವಿವಾರ 10 ಮಂದಿಯ ಮಾದರಿಗಳನ್ನು ಸಂಗ್ರಹಿಸ ಲಾಗಿದೆ. ಅವರಲ್ಲಿ ಉಸಿರಾಟದ ಸಮಸ್ಯೆ ಉಳ್ಳ ನಾಲ್ವರು,  ಜ್ವರದ ಐವರು, ಇತರ ಹಾಟ್‌ಸ್ಪಾಟ್‌ ಸಂಪರ್ಕದ ಒಬ್ಬರು ಇದ್ದಾರೆ.

ವಿಳಂಬ ಸಾಧ್ಯತೆ
ಕಿತ್ತಳೆ ವಲಯದಲ್ಲಿದ್ದ ಉಡುಪಿ ಹಸುರು ವಲಯಕ್ಕೆ ಬರಬೇಕಾದರೆ 28 ದಿನಗಳಿಂದ ಪಾಸಿಟಿವ್‌ ಪ್ರಕರಣ ದಾಖಲಾಗಿರಬಾರದು. ಮಾ. 29ರಂದು ಪಾಸಿಟಿವ್‌ ಪ್ರಕರಣ ದಾಖಲಾದ ಬಳಿಕ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ರವಿವಾರ ಹಸುರು ವಲಯ ಘೋಷಣೆಗೆ ಉಡುಪಿ ಜಿಲ್ಲೆ ಅರ್ಹವಾದರೂ ಇದನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆಯಷ್ಟೆ. ಕೊಡಗು ಜಿಲ್ಲೆ ಪಾಸಿಟಿವ್‌ ಪ್ರಕರಣವಿಲ್ಲದೆ ಈಗಾಗಲೇ 28 ದಿನಗಳಾದ ಅದನ್ನೂ ಹಸುರು ಜಿಲ್ಲೆಯಾಗಿ ಘೋಷಿಸದ ಕಾರಣ ಇನ್ನೂ ಒಂದೆರಡು ದಿನಗಳಾಗಬಹುದೆ ಎಂಬ ಸಂಶಯ ಮೂಡುತ್ತಿದೆ.

ರವಿವಾರ ಹೊಸದಾಗಿ ನೋಂದಣಿ ಮಾಡಿಕೊಂಡವರ ಸಂಖ್ಯೆ 50. ಈ ದಿನ 43 ಮಂದಿ 28 ದಿನಗಳ ಮತ್ತು 68 ಮಂದಿ 14 ದಿನಗಳ ಕ್ವಾರಂಟೈನ್‌ನ್ನು ಮುಗಿಸಿದ್ದಾರೆ.

Advertisement

556 ಮಂದಿ ಪ್ರಸಕ್ತ ಕ್ವಾರಂಟೈನ್‌ನಲ್ಲಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಒಬ್ಬರು ಸೇರ್ಪಡೆಯಾಗಿದ್ದು 36 ಮಂದಿ  ಕ್ವಾರಂಟೈನ್‌ನಲ್ಲಿದ್ದಾರೆ. ಐಸೊಲೇಶನ್‌ ವಾರ್ಡ್‌ನಿಂದ ಒಬ್ಬರು ಬಿಡುಗಡೆಗೊಂಡಿ ದ್ದಾರೆ. ರವಿವಾರ ಯಾರ ಪರೀಕ್ಷಾ ವರದಿಯೂ ಬಂದಿಲ್ಲ. 41 ಜನರ ವರದಿ ಯನ್ನು ನಿರೀಕ್ಷಿಸಲಾಗುತ್ತಿದೆ.

ಇಂದು ಘೋಷಣೆ ನಿರೀಕ್ಷೆ
ಒಂದು ತಿಂಗಳಿಂದ ಆರೋಗ್ಯ ಇಲಾಖೆ, ಜಿಲ್ಲಾಡಳಿತ ನಡೆಸಿದ ಯಶಸ್ವೀ ಕಾರ್ಯಾಚರಣೆಯ ದ್ಯೋತಕವಾಗಿ ಕಳೆದ 28 ದಿನಗಳಿಂದ ಯಾವುದೇ ಕೋವಿಡ್ 19 ಪಾಸಿಟಿವ್‌ ಪ್ರಕರಣ ದಾಖಲಾಗದ ಕಾರಣ ತಾಂತ್ರಿಕವಾಗಿ ಉಡುಪಿ ಹಸುರು ಜಿಲ್ಲೆಯಾಗಿದೆ. ಸೋಮವಾರ ಘೋಷಣೆಯಾಗುವ ನಿರೀಕ್ಷೆಯಿದೆ.

ದೂರವಾಗಿಲ್ಲ ಭೀತಿ
ಹಸುರು ಜಿಲ್ಲೆ ಘೋಷಣೆಯಾದ ಬಳಿಕ ಒಮ್ಮೆಲೆ ಚಟುವಟಿಕೆಗಳು ಆರಂಭಗೊಂಡು ಮತ್ತೆ ಸೋಂಕಿನ ಅಪಾಯ ತಲೆದೋರಬಹುದು ಎಂಬ ಭೀತಿಯೂ ಜಿಲ್ಲಾಡಳಿತಕ್ಕೆ ಇದೆ. ಪಕ್ಕದ ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ಭೀತಿ ತೀವ್ರ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ ನಿರ್ಬಂಧ ತೆರವುಗೊಳಿಸಿದರೆ ಸಮಸ್ಯೆ ಉಂಟಾಗಬಹುದು ಎಂಬ ಪ್ರಶ್ನೆಯೂ ಉದ್ಭವವಾಗುತ್ತಿದೆ.

ರವಿವಾರ ರಜಾ ದಿನವಾದ ಕಾರಣ ಘೋಷಣೆಯಾಗದೆ, ಸೋಮವಾರ ಹಸುರು ಜಿಲ್ಲೆ ಎಂದು ಘೋಷಣೆಯಾಗಲೂಬಹುದು. ಇದರ ನಿರೀಕ್ಷೆಯಲ್ಲಿದ್ದೇವೆ.
-ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next