Advertisement

POP ಗಣಪ ಬೇಡ- ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸರಕಾರ ತೀರ್ಮಾನ

02:32 AM Sep 16, 2023 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನ ಗಣೇಶನ ಹಬ್ಬದ ವೇಳೆ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ)ನಿಂದ ಗಣಪತಿ ತಯಾರಿ, ಮಾರಾಟ, ಜಲಸ್ತಂಭನ ಮಾಡಿದರೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ಕಾದಿದೆ.

Advertisement

ಪರಿಸರ ಸಹ್ಯವಾಗಿ ವಿಘ್ನ ನಿವಾರಕನ ಹಬ್ಬ ಆಚರಿಸಲು ಅನುಕೂಲವಾಗುವಂತೆ ಶುಕ್ರವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಪರಿಸರ ಖಾತೆ ಸಚಿವ ಈಶ್ವರ್‌ ಖಂಡ್ರೆ ಈ ಆದೇಶ ಹೊರಡಿಸಿದ್ದಾರೆ. ಪರಿಸರದಿಂದ ಹುಟ್ಟಿದ ಗಣಪನಿಗೆ ಶ್ರದ್ಧೆ, ಭಕ್ತಿ ಸಮರ್ಪಿಸಲು ಪರಿಸರಸ್ನೇಹಿ ಮೃಣ್ಮಯ ಗಣೇಶ ಮೂರ್ತಿಯೇ ಸೂಕ್ತ. ಹೀಗಾಗಿ ಪಿಒಪಿ ಗೌರಿ, ಗಣಪತಿಯ ವಿಗ್ರಹಗಳನ್ನು ಪೂಜೆಗೆ ಬಳಸದಂತೆ ಜನರಿಗೆ ಮನವಿ ಮಾಡಿದ್ದಾರೆ.

ನಮ್ಮ ಗಣೇಶ ಚತುರ್ಥಿಯ ವ್ರತ ಕಥೆಯಲ್ಲಿ ಮಣ್ಣಿನ ಗಣೇಶನನ್ನು ಪೂಜಿಸಿ ನೀರಿನಲ್ಲಿ ವಿಸರ್ಜಿಸಬೇಕು ಎಂಬ ಉಲ್ಲೇಖವಿದೆ. ಪಿಒಪಿ ಮೂರ್ತಿಗಳನ್ನು ಪೂಜಿಸಿ, ವಿಸರ್ಜಿಸಿ ದರೆ ಪರಿಸರಕ್ಕೆ ಹಾನಿಯಾಗುತ್ತದೆ. ಇದು ಭಗವಂತನಿಗೆ ನಾವು ಮಾಡುವ ಅಪಚಾರ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌, ಪಿಒಪಿ ಬಳಕೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಸರ ಇಲಾಖೆ, ಪೊಲೀಸ್‌ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಸಮಿತಿ ಸದಸ್ಯರು ಪರಸ್ಪರ ಸಹಕಾರದಿಂದ ಕಾರ್ಯೋ ನ್ಮುಖರಾಗಬೇಕು. ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಪಿಒಪಿ ಗಣಪನ ವಿಚಾರದಲ್ಲಿ ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವಂತೆಯೂ ಸೂಚಿಸಿದರು.

ಜಾಗೃತಿ ಮೂಡಿಸಲು ಸಲಹೆ
ಪರಿಸರ ಉಳಿಸುವ ಸಂಬಂಧ ಶಾಲಾ, ಕಾಲೇಜುಗಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು. ಮನೆಗಳಲ್ಲಿ ಪರಿಸರಸ್ನೇಹಿ ಗಣಪನನ್ನು ಪೂಜಿಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವರು ಸಲಹೆ ನೀಡಿದರು.

Advertisement

ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ ?
1974ರ ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣೆ) ಕಾಯ್ದೆ ಕಲಂ 33(ಎ) ಅನ್ವಯ ಈ ರೀತಿಯ ವಿಗ್ರಹಗಳ ಉತ್ಪಾದನ ಘಟಕ ಮುಚ್ಚಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆ. ಇಂತಹ ವಿಗ್ರಹಗಳನ್ನು ಜಲ ಮೂಲಗಳಿಗೆ ವಿಸರ್ಜಿಸುವುದು ಕಲಂ 24ರ ಸ್ಪಷ್ಟ ಉಲ್ಲಂಘನೆ. ಅಲ್ಲದೆ ಕಲಂ 41 ಮತ್ತು 43ರ ಪ್ರಕಾರ ಶಿಕ್ಷಾರ್ಹವೂ ಹೌದು. ಈ ಅಪರಾಧಕ್ಕೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ 6 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶ ಇದೆ. 1986ರ ಕೇಂದ್ರ ಪರಿಸರ ಸಂರಕ್ಷಣೆ ಕಾಯ್ದೆ ಕಲಂ 15ರಡಿ ಕೂಡ 1 ಲಕ್ಷ ರೂ. ದಂಡ ಮತ್ತು 5 ವರ್ಷದ ಕಾರಾಗೃಹ ಶಿಕ್ಷೆಗೆ ಅವಕಾಶ ಇದೆ.

ಕರಾವಳಿ ಜನರಿಗೆ ಅಭಿನಂದನೆ
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶೇ. 90ಕ್ಕೂ ಹೆಚ್ಚು ಜನರು ಮಣ್ಣಿನ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದು, ಆ ಜಿಲ್ಲೆಗಳ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಇತರ ಜಿಲ್ಲೆಗಳ ಜನರೂ ಇದೇ ಪದ್ಧತಿ ಅನುಸರಿಸುವಂತೆ ಮನವಿ ಮಾಡುತ್ತೇನೆ ಎಂದು ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಹಿಂದಿನಿಂದಲೂ ಮಣ್ಣು ಅಥವಾ ಅರಿಶಿನದಿಂದ ತಯಾರಿಸಿದ ಮೂರ್ತಿ ಗಳನ್ನೇ ಪೂಜಿಸಿ, ವಿಸರ್ಜಿಸುವ ಪದ್ಧತಿ ಇತ್ತು. ಇತ್ತೀಚೆಗಿನ ದಿನಗಳಲ್ಲಿ ಪಿಒಪಿಯಿಂದ ತಯಾರಿಸಿದ ಮೂರ್ತಿಗಳನ್ನು ಪೂಜಿಸುವ ಕೆಟ್ಟ ಪದ್ಧತಿ ಬೆಳೆದುಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠ ಕೂಡ ಈ ವಿಚಾರದಲ್ಲಿ ದಂಡನೆ ನೀಡುವಂತೆ ಸ್ಪಷ್ಟ ಆದೇಶ ನೀಡಿದೆ. ಹೀಗಾಗಿ ಕರಾವಳಿಯ ಪದ್ಧತಿಯನ್ನೇ ಎಲ್ಲರೂ ಅನುಸರಿಸುವುದು ಉತ್ತಮ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next