ರಷ್ಯಾ ಮತ್ತು ಉಕ್ರೇನ್ ನಡುವೆ ಉಂಟಾಗಿರುವ ಸಂಘರ್ಷದಲ್ಲಿ ಬಸವಳಿದು ಹೋಗಿರುವುದು ನಿಸ್ಸಂಶಯವಾಗಿ ಜಗತ್ತಿನ ಜನರು. ಸದ್ಯ ಜಗತ್ತಿನಲ್ಲಿ ಚರ್ಚೆಯ ವಿಚಾರ ಏನೆಂದರೆ, ನಮ್ಮ ದೇಶ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಹಲವು ರಾಷ್ಟ್ರಗಳ ಸರಕಾರಗಳು ಮುಸುಕಿನಲ್ಲಿ ಆಕ್ಷೇಪ ಮಾಡುತ್ತಿವೆ. ಅಮೆರಿಕ ಸರಕಾರವಂತೂ ಪದೇ ಪದೆ ರಷ್ಯಾ ತೈಲ ಖರೀದಿಯ ಬಗ್ಗೆ ಪರೋಕ್ಷವಾಗಿ ಅಸಂತೃಪ್ತಿ ವ್ಯಕ್ತಪಡಿಸಿದೆ. ಆದರೆ, ದೇಶದ ಇಂಧನ ಅಗತ್ಯವನ್ನು ಸಮರ್ಥವಾಗಿಯೇ ಬೈಡೆನ್ ಆಡಳಿತಕ್ಕೆ ಮನವರಿಕೆ ಮಾಡಿದ್ದು ಮತ್ತು ಇಂಧನ ಅಗತ್ಯತೆಗಳಲ್ಲಿ ರಾಜಕೀಯ ಮಾಡಬೇಕಾದ ಅಗತ್ಯವೇನು ಎಂದು ಖಡಕ್ ಆಗಿಯೇ ಕೆಲವು ದಿನಗಳ ಹಿಂದೆ ವಿದೇಶಾಂಗ ಸಚಿವಾಲಯ ಪ್ರಶ್ನೆ ಮಾಡಿದ್ದು ಅಮೆರಿಕಕ್ಕೆ ನಾಟಿತ್ತು.
ಇದೀಗ ಯುನೈಟೆಡ್ ಕಿಂಗ್‌ಡಮ್‌ನ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಕೂಡ ಹೊಸದಿಲ್ಲಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗಿನ ಭೇಟಿಯ ವೇಳೆ ರಷ್ಯಾ ತೈಲ ಖರೀದಿ ಬೇಡವೆಂಬ ಬೋಧನೆಗೆ ನಾಟುವಂತೆ ಪ್ರತಿಕ್ರಿಯೆ ನೀಡಿದ ಅವರು ಐರೋಪ್ಯ ಒಕ್ಕೂಟಗಳೇ ಹೆಚ್ಚಿನ ಪ್ರಮಾಣದಲ್ಲಿ ಪುತಿನ್ ಸರಕಾರ ಉತ್ಪಾದನೆ ಮಾಡುವ ಕಚ್ಚಾ ತೈಲ ಖರೀದಿ ಮಾಡುತ್ತಿವೆ ಎಂದು ನೆನಪಿಸಿದ್ದಾರೆ. ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ಕೂಡ ಹೊಸದಿಲ್ಲಿಯಲ್ಲಿದ್ದಾರೆ. ಅವರ ಪ್ರವಾಸಕ್ಕೆ ಪೂರಕವಾಗಿ ಪುತಿನ್ ಸರಕಾರ ನಮ್ಮ ದೇಶಕ್ಕೆ 15 ಮಿಲಿಯ ಬ್ಯಾರೆಲ್ ಕಚ್ಚಾ ತೈಲವನ್ನು ಮಾರಲು ಮುಂದಾಗಿದೆ. ಫೆ. 24ರ ಮೊದಲಿದ್ದ ಬೆಲೆಗೆ ಅಂದರೆ ಪ್ರತೀ ಬ್ಯಾರೆಲ್‌ಗೆ 35 ಡಾಲರ್ ರಿಯಾಯಿತಿಯಲ್ಲಿ ನೀಡುವುದಾಗಿ ಪ್ರಕಟಿಸಿದೆ. ಜತೆಗೆ ನಮಗೆ ಬೇಕಾದ ರೀತಿಯಲ್ಲಿ ನೆರವು ನೀಡುವ ವಾಗ್ಧಾನವನ್ನು ಸಚಿವ ಲಾವ್ರೋ ಮಾಡಿದ್ದಾರೆ. ಉಕ್ರೇನ್ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದೂ ಕೇಂದ್ರಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.
ಕೇಂದ್ರ ಸರಕಾರ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂದು ವಾದಿಸುವ ಕೆಲವು ರಾಷ್ಟ್ರಗಳ ಸರಕಾರಗಳಲ್ಲಿ ಯಾವುದೇ ಹುರುಳಿಲ್ಲ. ಶೇ. 85ರಷ್ಟು ಇಂಧನ ಅಗತ್ಯಗಳು ಮಧ್ಯಪ್ರಾಚ್ಯ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೇಷ್ಯಾ (ರಷ್ಯಾ ಸೇರಿಕೊಂಡು) ಸೇರಿಕೊಂಡಿದೆ. ಈ ಪೈಕಿ ಮಧ್ಯಪ್ರಾಚ್ಯ ರಾಷ್ಟ್ರಗಳ ಪಾಲು ಶೇ.61.6. ಕೇಂದ್ರ ಸರಕಾರವೇ ಸಂಸತ್‌ನಲ್ಲಿ ನೀಡಿದ ಮಾಹಿತಿ ಪ್ರಕಾರ ರಷ್ಯಾದಿಂದ ಖರೀದಿ ಮಾಡಲಾಗುತ್ತಿರುವ ಕಚ್ಚಾ ತೈಲದ ಪ್ರಮಾಣ ಶೇ. 1. ಹೀಗಾಗಿ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳು ನಮ್ಮ ದೇಶದ ಇಂಧನ ಅಗತ್ಯಗಳ ಬಗ್ಗೆ ಮೂಗು ತೂರಿಸುವುದು ಖಂಡಿತಾ ಸಮರ್ಥನೀಯವಲ್ಲ.
ಯು.ಕೆ. ವಿದೇಶಾಂಗ ಸಚಿವೆ ಲಿಜ್ ಟ್ರಸ್ ತಮ್ಮ ಭಾರತ ಪ್ರವಾಸದ ವೇಳೆ, ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂದು ಬೋಧನೆ ನೀಡಲು ಹೊಸದಿಲ್ಲಿಗೆ ಬಂದದ್ದು ಅಲ್ಲವೆಂದು ಹೇಳಿಕೊಂಡರೂ, ಮೂಲ ಉದ್ದೇಶ ಅದುವೇ ಎನ್ನುವುದು ಸ್ಪಷ್ಟ. ಪಾಶ್ಚಾಮಾತ್ಯ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳು “ಹೇಳುವುದು ಶಾಸ್ತ್ರ ಇಕ್ಕುವುದು ಗಾಳ’ ಎಂಬ ನಾಣ್ಣುಡಿಯಂತೆ ವರ್ತಿಸುತ್ತಿವೆ. ಅಮೆರಿಕವೂ ಉಕ್ರೇನ್ ಕಾಳಗ ಶುರುವಾ ಗುವುದಕ್ಕಿಂತ ಮೊದಲು ಲಕ್ಷಾಂತರ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹ ಮಾಡಿ, ಇದೀಗ ತನ್ನ ದೇಶದಲ್ಲಿ ಬೆಲೆ ತಗ್ಗಿಸಲು ಮುಂದಿನ ನಿರ್ಧಾರದ ವರೆಗೆ ಪ್ರತೀ ದಿನ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಬಿಡುಗಡೆಗೆ ನಿರ್ಧರಿಸಿದೆ. ಅಮೆರಿಕ ಆ ರೀತಿ ಮಾಡುವುದಿದ್ದರೆ, ನಮ್ಮ ಇಂಧನ ಅಗತ್ಯಗಳಿಗೆ ಬೇಕಾದ ನಿರ್ಧಾರವನ್ನು ಕೇಂದ್ರ ಸರಕಾರವೇಕೆ ಕೈಗೊಳ್ಳಬಾರದು. ಈ ಬಗ್ಗೆ ಉತ್ತರಿಸಲು ಬೋಧನೆ ನೀಡುವ ರಾಷ್ಟ್ರಗಳ ಸರಕಾರಗಳಿಗೆ ಕಷ್ಟವಾದೀತು.