Advertisement

ರಾಜಕೀಯ ನಿವೃತ್ತಿ ಇಲ್ಲ, ಬಿಜೆಪಿ ಸ್ಪರ್ಧಿಗೆ ನನ್ನ ಸಂಪೂರ್ಣ ಬೆಂಬಲ: ಎಸ್. ಅಂಗಾರ

02:18 PM Apr 14, 2023 | Team Udayavani |

ಸುಳ್ಯ: ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದ ನೋವಿನಿಂದ ಅಂದಿನ ದಿನದ ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೇನೆ. ಆದರೆ ಬಳಿಕ ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು.

Advertisement

ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದರು‌. ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆಯುತ್ತೇನೆ ಎಂದು ತಿಳಿಸಿದರು.

7 ಬಾರಿ ಸ್ಪರ್ಧೆ ಮಾಡಿದಾಗಲೂ ನಾನೆಂದೂ ನನಗೆ ಟಿಕೆಟ್ ಕೊಡಿ ಎಂದು ಕೇಳಕೊಂಡವನಲ್ಲ. ಟಿಕೆಟ್ ಗಾಗಿ ಲಾಬಿ ಮಾಡಿದವನೂ ಅಲ್ಲ. ಇಷ್ಟು ಬಾರಿಯೂ ಪಕ್ಷವೇ ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಸಾರ್ವಜನಿಕ ಜೀವನದಲ್ಲಿ ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದವನೂ ಅಲ್ಲ. ನನ್ನ ಜೀವನ ತೆರೆದ ಪುಸ್ತಕ ಯಾರು ಬೇಕಾದರೂ ಓದಬಹುದಿತ್ತು ಎಂದರು.

ಈ ಬಾರಿಯೂ ನಾನು ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂಬ ಹೇಳಿಕೆಯನ್ನು ಕೊಟ್ಟಿದ್ದೆ. ಬದಲಾವಣೆ ಮಾತುಕತೆ ಇಲ್ಲದ ಕಾರಣ ನಾನು ನಿರಾಳನಾಗಿದ್ದೆ. ಏಪ್ರಿಲ್ 11ರ ರಾತ್ರಿ ಟಿ.ವಿ. ನೋಡಿದಾಗಲೇ ನನಗೆ ಅವಕಾಶವಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಯಿತು. ಯಾರಲ್ಲಿ ಏನು ಹೇಳಬೇಕೆಂದೂ ಹೊಳೆಯಲಿಲ್ಲ. ಹೀಗಾಗಿ 12 ರಂದು ಬೆಳಗ್ಗೆ ನಾನು ಗೊಂದಲದಿಂದ ನನ್ನ ನಿರ್ಧಾರವನ್ನು ಪ್ರಕಟ ಮಾಡಿದೆ ಎಂದು ಹೇಳಿದರು.

ಅವರು ಒಬ್ಬ ಮನೆ ಕೆಲಸದವನ್ನು ಇಡುವಾಗಲೂ ಗಡುವು ಹಾಕಿ ತಿಳಿಸುವ ವ್ಯವಸ್ಥೆ ಇದೆ. 36 ವರ್ಷ ತೊಡಗಿಸಿಕೊಂಡ ನಾನು ಪರಿಸ್ಥಿತಿಯ ಬಗ್ಗೆ ನನಗೇ ಏನೂ ತೋಚದಂತಾಯಿತು ಎಂದು ತಿಳಿಸಿದರು.

Advertisement

ಬಳಿಕ ನನ್ನ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಚರ್ಚೆ ಆರಂಭವಾಗಿರುವುದು ಗಮನಿಸಿದ್ದೇನೆ. ಇದರಿಂದಾಗಿ ನನ್ನ ಕ್ಷೇತ್ರದ ಮತದಾರರಿಗೆ , ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ತಪ್ಪು ಸಂದೇಶ ಹೋಗುತ್ತಿರುವುದು ಸರಿಯಲ್ಲ. ನಿಜ ಸಂಗತಿ ತಿಳಿಸುವುದು ಅಗತ್ಯ ಅನ್ನಿಸಿದ್ದರಿಂದ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದರು.

ರಾಜಕೀಯದಲ್ಲಿ ಇಲ್ಲದಿದ್ದರೂ ಸಮಾಜದ ಮಧ್ಯೆ ನನ್ನ ಕೆಲಸ, ಕರ್ತವ್ಯ ನಿಲ್ಲುವುದಿಲ್ಲ. ಚುನಾಯಿತನಾಗುವ ಮೊದಲೂ ಸಮಾಜದೊಂದಿಗಿದ್ದೆ, ಇನ್ನು ಮುಂದೆಯೂ ಸಮಾಜದ ಜೊತೆಗಿರುತ್ತೇನೆ. ಕ್ಷೇತ್ರದ ಜನ ಸಮಸ್ಯೆ ಹೊತ್ತು ನನ್ನ ಬಳಿ ಬಂದಾಗ ನನ್ನ ಸಹಾಯ ನೀಡಲು ಹಿಂದಿನಂತೆಯೇ ಬದ್ಧನಿದ್ದೇನೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next