Advertisement

ಇಂದಿನಿಂದ ಹೆಲ್ಮೆಟ್ ಧರಿಸದಿದ್ದರೆ ಪೆಟ್ರೋಲ್ ಇಲ್ಲ!

08:52 AM Aug 02, 2019 | Team Udayavani |

ಬೆಂಗಳೂರು: ದ್ವಿಚಕ್ರ ವಾಹನ ಸವಾರರೆ, ಇನ್ಮುಂದೆ ಹೆಲ್ಮೆಟ್ ಧರಿಸದೆ ಪೆಟ್ರೋಲ್ ಬಂಕ್‌ಗಳಿಗೆ ಹೋದರೆ ವಾಹನಗಳಿಗೆ ಪೆಟ್ರೋಲ್ ಹಾಕುವುದಿಲ್ಲ!

Advertisement

ಹೌದು, ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ನಿಯಂತ್ರಣ ಹಾಗೂ ಸಾವು, ನೋವುಗಳನ್ನು ತಪ್ಪಿಸುವ ಸಲುವಾಗಿ ಇಂತಹದೊಂದು ಹೊಸ ಪ್ರಯೋಗಕ್ಕೆ ಮುಂದಾಗಿರುವ ಸಂಚಾರ ಪೊಲೀಸರು, ಆ.1ರಿಂದಲೇ ಜಾರಿಗೆ ಬರುವಂತೆ ಸೂಚಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌, ಭಾರತ್‌ ಪೆಟ್ರೋಲಿಯಂ, ಇಂಡಿಯನ್‌ ಆಯಿಲ್. ಶೆಲ್ ಮತ್ತು ಇತರೆ ಪೆಟ್ರೋಲ್ ಮಾರಾಟ ಕಂಪನಿ ಸೇರಿ ನಗರದ ಎಲ್ಲ ಪೆಟ್ರೋಲ್ ಬಂಕ್‌ಗಳು ಹಾಗೂ ಅಸೋಸಿಯೇಷನ್‌ಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದ್ದು, ಒಂದೆರಡು ದಿನಗಳಲ್ಲಿ ಸಭೆ ಕರೆದು ನೇರವಾಗಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ ಕೇಂದ್ರ ಸರ್ಕಾರ 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದು, ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಮೋಟಾರು ವಾಹನ ಕಾಯ್ದೆ-1988 ಕಲಂ 129ರ ಪ್ರಕಾರ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಧರಿಸುವುದು ಕಡ್ಡಾಯ. ಬೆಂಗಳೂರಿನಲ್ಲಿ ದಶಕಗಳಿಂದ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದ್ದು, ಮೂರು ವರ್ಷಗಳಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಈ ಹೊಸ ಪ್ರಯೋಗದ ಬಗ್ಗೆ ನಗರದಲ್ಲಿರುವ 44 ಸಂಚಾರ ಪೊಲೀಸ್‌ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಇದು ಕಾನೂನು ಅಲ್ಲ. ವಾಹನ ಸವಾರರ ಹಿತದೃಷ್ಟಿಯಿಂದ ಅಪಘಾತ ಪ್ರಮಾಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಹೆಚ್ಚು ಹೆಲ್ಮೆಟ್ ಧರಿಸದೆ ಸವಾರರು ಮೃತಪಟ್ಟ ಸಂಖ್ಯೆ ಪ್ರಮಾಣ ಹೆಚ್ಚಾಗಿದೆ. ಸಣ್ಣ ಅಪಘಾತವಾದರೂ ಮೊದಲು ತಲೆಗೆ ಗಾಯವಾಗುತ್ತದೆ. ಹೆಲ್ಮೆಟ್ ಧರಿಸಿದ್ದರೆ ಗಾಯವಾಗುವುದು ಅಥವಾ ಸಾವಿನ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next