Advertisement

Mangalore University ನಿವೃತ್ತರಿಗಿಲ್ಲ ನೆಮ್ಮದಿ

12:29 AM Aug 09, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಕೆಲವು ವರ್ಷ ಕಳೆದರೂ ಪಿಂಚಣಿ ಪಾವತಿಯಾಗಿಲ್ಲ. ಸುಮಾರು 50 ಮಂದಿಗೆ 21 ಕೋ. ರೂ. ಪಾವತಿ ಬಾಕಿಯಿದೆ. ಜತೆಗೆ 2024-25ನೇ ಸಾಲಿನಲ್ಲಿ 22 ಮಂದಿ ನಿವೃತ್ತಿ ಹೊಂದಲಿದ್ದು, ಹೆಚ್ಚುವರಿ 10. 80 ಕೋ. ರೂ. ಅಗತ್ಯವಿದೆ. ಆಂತರಿಕ ಸಂಪನ್ಮೂಲದ ಕೊರತೆಯಿಂದಾಗಿ ಪಿಂಚಣಿ ಪಾವತಿ ವಿಳಂಬವಾಗುತ್ತಿದೆ.

Advertisement

ವಿವಿಯಲ್ಲಿ 30-35 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಸುಮಾರು 15 ಪ್ರಾಧ್ಯಾಪಕರು ಸಹಿತ 50 ಮಂದಿಗೆ ಸಿಗಬೇಕಿದ್ದ 21 ಕೋ. ರೂ. ಮೊತ್ತದ ಪಿಂಚಣಿ ಸಿಕ್ಕಿಲ್ಲ. ಗ್ರಾಜ್ಯುಟಿ, ಇಎಲ್‌ ನಗದೀಕರಣ ಸಹಿತ ವಿವಿಧ ಸವಲತ್ತು ಸಿಗದೆ ನಿತ್ಯ ವಿ.ವಿ. ಸಹಿತ ವಿವಿಧ ಕಚೇರಿಗಳಿಗೆ ಅಲೆಯುವಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ನಿವೃತ್ತರಾಗಲಿರುವ 22 ಸಿಬಂದಿಗೆ ನಿವೃತ್ತಿ ಸೌಲಭ್ಯ, ಗಳಿಕೆ ರಜೆ ನಗದೀಕರಣ ಪಾವತಿಸಲು 10.80 ಕೋ. ರೂ. ಅಗತ್ಯವಿದೆ. ನಿವೃತ್ತರ ಬಾಕಿ ಹಣ ಪಾವತಿಸಲು 36.41 ಕೋ. ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರ 10 ಕೋ. ರೂ. ಮೊತ್ತ ಮಂಜೂರು ಮಾಡಿದೆ. ವಿವಿಯು ನಿವೃತ್ತ ಉದ್ಯೋಗಿಗಳ ಸೌಲಭ್ಯ ಪಾವತಿಗಾಗಿ ಕೊರತೆ ಬೀಳುವಂತಹ ಮೊತ್ತವನ್ನು ಆಂತರಿಕ ಸಂಪನ್ಮೂಲದಿಂದ ಹೊಂದಿಸಿಕೊಳ್ಳಲು ತೊಡಕು ಉಂಟಾಗಿದೆ. ಇದೇ ಕಾರಣದಿಂದ ಉಳಿಕೆ ಮೊತ್ತ ಬಿಡುಗಡೆಗೊಳಿಸುವಂತೆ 26.41 ಕೋ. ರೂ.ಗಳ ಅನುದಾನ ಮಂಜೂರು ಮಾಡಲು ಮರು ಪ್ರಸ್ತಾವನೆ ಕಳುಹಿಸಲಾಗಿದೆ.

ಇವುಗಳ ಜತೆ 7ನೇ ರಾಜ್ಯ ವೇತನ ಜಾರಿಯಿಂದ ಪಿಂಚಣಿ ಪರಿಷ್ಕೃತಗೊಳ್ಳಲಿದ್ದು, ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.ವಿವಿಯ ವ್ಯಾಪ್ತಿಯಲ್ಲಿದ್ದ ವಿವಿಧ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿರುವುದರಿಂದ ಅವುಗಳಿಂದ ಬರುತ್ತಿದ್ದ ಶುಲ್ಕ ಸಿಗುತ್ತಿಲ್ಲ. ಕೊರೊನಾ ಬಳಿಕ ಸರಕಾರದಿಂದ ಅನುದಾನವೂ ಬರುತ್ತಿಲ್ಲ. ಜತೆಗೆ ವಿವಿಯ ಘಟಕ ಕಾಲೇಜುಗಳ ನಿರ್ವಹಣೆಯೂ ಕಷ್ಟವಾಗಿ, ಉಪನ್ಯಾಸಕರು, ಸಿಬಂದಿಗೆ ಮೂರ್‍ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ಎದುರಾಗಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ.

ಹಲವು ಮನವಿ
ವಿವಿ ಕೋಟ್ಯಂತರ ಮೊತ್ತದ ಪಿಂಚಣಿ ಉಳಿಸಿಕೊಂಡಿದ್ದು, ತತ್‌ಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ದ.ಕ. ಜಿಲ್ಲೆಯ ಎಲ್ಲ ಶಾಸಕರು, ಸಂಬಂಧಪಟ್ಟ ಹಣಕಾಸು ಅಧಿ ಕಾರಿಗಳು, ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಗತಿಯಾಗಿಲ್ಲ ಎಂಬುದು ನಿವೃತ್ತ ಪ್ರಾಧ್ಯಾಪಕ ಪ್ರೊ| ಜಯಪ್ಪ ಅವರ ಮಾತು.

Advertisement

ಕಳೆದ 4 ವರ್ಷಗಳಿಂದ ನಿವೃತ್ತಿಯಾದ ಸುಮಾರು 50 ಮಂದಿಗೆ 21 ಕೋಟಿ ರೂ. ಪಾವತಿ ಬಾಕಿ ಇದೆ. ವರ್ಷ ಕಳೆದಂತೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ವಿಶ್ವ ವಿದ್ಯಾನಿಲಯದ ಅಂತರಿಕ ಸಂಪನ್ಮೂಲ ಬರಿದಾಗಿದ್ದು, ಸರಕಾರಕ್ಕೂ ಈ ಬಗ್ಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಸರಕಾರದ ಸ್ಪಂದನೆ ಹಾಗೂ ಹಣಕಾಸಿನ ವ್ಯವಸ್ಥೆಯಾದ ಕೂಡಲೇ ಪಾವತಿಸಲಾಗುವುದು. ಹೊರಗುತ್ತಿಗೆ ಆಧಾರದಲ್ಲಿ 187 ಮಂದಿಯನ್ನು ನೇಮಕ ಮಾಡಿದ್ದು, ಇದು ಅನಧಿಕೃತ ಎಂದು ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ 120 ಮಂದಿಯನ್ನು ತೆರವು ಮಾಡಲಾಗಿದೆ. ಉಳಿದವರನ್ನು ಹಂತ ಹಂತವಾಗಿ ಉದ್ಯೋಗದಿಂದ ಕೈಬಿಡಲಾಗುವುದು. ಈ ಮೂಲಕ ವಾರ್ಷಿಕವಾಗಿ ಸುಮಾರು 3 ಕೋ.ರೂ. ಉಳಿತಾಯದ ನಿರೀಕ್ಷೆ ಇದೆ.
-ಪ್ರೊ| ಪಿ.ಎಲ್‌. ಧರ್ಮ, ಮಂಗಳೂರು ವಿವಿ ಕುಲಪತಿ

35 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಸರಕಾರ ತಿಂಗಳಿಗೆ ನೀಡುವ ನಿವೃತ್ತಿ ವೇತನ ಸಿಗುತ್ತಿದೆ. ಆದರೆ ಸುದೀರ್ಘ‌ ಸೇವೆಗೆ ಸಿಗಬೇಕಾದ ಸರಿಸುಮಾರು 80 ಲಕ್ಷ ರೂ.ಯನ್ನು ವಿವಿ ಪಾವತಿಸಿಲ್ಲ. ವಿವಿಯನ್ನು ಸಂಪರ್ಕಿಸಿ ಬಾಕಿ ಇರುವ ಪಿಂಚಣಿ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ. ಆದರೆ ತಮ್ಮಲ್ಲಿ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ.
-ಪ್ರೊ| ಅಭಯ್‌ ಕುಮಾರ್‌ ಕೆ., ನಿವೃತ್ತರಾದ ಕನ್ನಡ ಪ್ರಾಧ್ಯಾಪಕರು

– ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next