Advertisement
ಹೈಸ್ಕೂಲಿನಲ್ಲಿ ಹೆಚ್ಚಿನ ಸಹಪಾಠಿಗಳಿಗೆ ವಿಜಾnನ ಕಬ್ಬಿಣದ ಕಡಲೆಯಾಗಿತ್ತು. ಅದರಲ್ಲೂ ರಸಾಯನ ಶಾಸ್ತ್ರದಲ್ಲಿ ಬರುವ ರಾಸಾಯನಿಕ ವಸ್ತುಗಳ ಹೆಸರುಗಳನ್ನು ಎಷ್ಟು ಕಲಿತರೂ ಮರೆತುಹೋಗುತ್ತಿತ್ತು. ಇನ್ನು ಹಲವರಿಗೆ ಜೀವಶಾಸ್ತ್ರದಲ್ಲಿ ಅಭಿರುಚಿಯಿದ್ದರೂ ಅಧ್ಯಾಪಕರು ನೀಡುತ್ತಿದ್ದ ಉದಾಹರಣೆಗಳ ಹೊರತು ಬೇರೇನೂ ಸ್ಮತಿಯಲ್ಲಿ ಉಳಿಯುತ್ತಿರಲಿಲ್ಲ. ಇಂದಿನಷ್ಟು ಸಡಿಲಿಕೆ ಕೂಡ ಅಂದು ಇರಲಿಲ್ಲ. ಏಪ್ರಿಲ್ 10ರಂದು ಎಲ್ಲರೂ ದೇವಸ್ಥಾನದಲ್ಲಿ- “ದೇವರೇ, ಇದೊಂದು ಬಾರಿ ಪಾಸ್ ಮಾಡಿಸಪ್ಪ, ಮುಂದಿನ ವರ್ಷದಿಂದ ಖಂಡಿತಾ ಪ್ರಾರಂಭದಿಂದಲೇ ಓದುತ್ತೇನೆ’ ಎಂದು ಅಲವತ್ತುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
Related Articles
Advertisement
ನಮಗೆ ನಮ್ಮ ನಮ್ಮ ರಾಸಾಯನಿಕ ವಸ್ತುವಿನ ಹೆಸರು ಪರಿಚಯವಾದ ನಂತರ, ಹಾಜರಾತಿ ಕರೆಯುವ ಶೈಲಿಯನ್ನು ಪುನಃ ಬದಲಾಯಿಸಿದರು. ತದನಂತರ ನಮ್ಮ ಹಾಜರಾತಿಗೆ ಹೆಸರಿನ ಬದಲಾಗಿ ನಮಗೆ ಕೊಡಲಾದ ರಾಸಾಯನಿಕ ವಸ್ತುವಿನ ಹೆಸರನ್ನು ಕರೆಯುತ್ತಿದ್ದರು. ನಾವು ಪ್ರಸೆಂಟ್ ಮೇಡಂ ಎನ್ನುವ ಬದಲಾಗಿ ಅದರ ಸಂಕೇತವನ್ನು ಹೇಳಬೇಕಿತ್ತು. ಉದಾಹರಣೆಗೆ ನಾನು ಜಲಜನಕವಾಗಿದ್ದೆ. ಅವರು ಜಲಜನಕ ಎಂದು ಕರೆದಾಗ ನಾನು “ಎಚ್’ ಎಂದು ಪ್ರತಿಸ್ಪಂದಿಸುತ್ತಿದ್ದೆ.
ತರಗತಿಯ ನಾಯಕ ಅಥವಾ ನಾಯಕಿಯರು ತರಗತಿಯಲ್ಲಿ ಅಧ್ಯಾಪಕರಿಲ್ಲದಾಗ ಮಾತನಾಡಿದವರ ಹೆಸರನ್ನು ಪಟ್ಟಿ ಮಾಡಿ ಶಿಕ್ಷಕ/ಶಿಕ್ಷಕಿಯರಿಗೆ ನೀಡಬೇಕಿತ್ತು. ಹಾಗೆ ತರಗತಿಯಲ್ಲಿ ಗಲಾಟೆ ಮಾಡಿದವರ ಮೇಲೆ ಧಾರಿಣಿ ಮೇಡಂ ಕೊಡುವ ಶಿಕ್ಷೆ ಕಲಿಕಾ ರೂಪದಲ್ಲಿ ಇರುತ್ತಿತ್ತು. ಒಮ್ಮೆ ನನ್ನ ಮತ್ತು ಗೆಳತಿಯೊಬ್ಬಳ ಹೆಸರು ಆ ಚೀಟಿಯಲ್ಲಿತ್ತು. ಆಗ ಅವರು ನಮ್ಮನ್ನುದ್ದೇಶಿಸಿ-“ನಾಳೆ ನೀವಿಬ್ಬರೂ ಬ್ಯಾಕ್ಟೀರಿಯಾ ಆಗಿ ಹತ್ತು ನಿಮಿಷಗಳ ಕಾಲ ಚಿಕ್ಕ ವೈಜಾnನಿಕ ನಾಟಕ ಮಾಡಬೇಕು. ಇದೇ ನಿಮಗೆ ಶಿಕ್ಷೆ’ ಎಂದುಬಿಟ್ಟರು. ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಒಮ್ಮೆ ಹಾದಿಯಲ್ಲಿ ಎದುರುಬದುರಾದಾಗ ಹೇಗೆ ಸಂಭಾಷಣೆ ನಡೆಸಬಹುದು ಎಂದು ನಾನು ನನ್ನ ಗೆಳತಿ ಪ್ರಸ್ತುತಪಡಿಸಿದೆವು.
ಹೈಸ್ಕೂಲು ಶಿಕ್ಷಣ ಮುಗಿದು ಆಗಲೇ ಹದಿನೈದು ವರ್ಷಗಳು ಸಂದಿವೆ. ಯಾವ ಶಿಕ್ಷಕರನ್ನು ಮರೆತರೂ ಧಾರಿಣಿ ಮೇಡಂ ಅವರನ್ನು ಮರೆಯುವುದಿಲ್ಲ. ಎಲ್ಲಾ ಶಿಕ್ಷಕರೂ ಪುಸ್ತಕದಲ್ಲಿರುವುದನ್ನು ಕಲಿಸಬಲ್ಲರು. ಆದರೆ ವಿಶೇಷವಾಗಿ ಮಕ್ಕಳ ಮಾನಸಿಕ ಮಟ್ಟವನ್ನು ಅರ್ಥ ಮಾಡಿಕೊಂಡು ಕಲಿಸುವ ಶಿಕ್ಷಕರು ಮನಸ್ಸಿನಲ್ಲಿ ಗೌರವ ಮತ್ತು ಪ್ರೀತಿಯನ್ನು ಹಸಿರಾಗಿಸುತ್ತಾರೆ. ಅಂಥವರ ಪೈಕಿ ನಮ್ಮ ಧಾರಿಣಿ ಮೇಡಂ ಕೂಡ ಒಬ್ಬರು ಎಂದು ಹೇಳಲು ನನಗೆ ಹೆಮ್ಮೆ.
-ಚೇತನಾ ಶೆಣೈ, ಉಡುಪಿ