ಬರ್ಮಿಂಗ್‌ಹ್ಯಾಮ್ (ಇಂಗ್ಲೆಂಡ್): ಜೀವಕ್ಕೆ ಎಷ್ಟು ಮೌಲ್ಯವಿದೆ ಎನ್ನುವುದು ಸಾವಿಗೆ ಮುಖಾಮುಖಿಯಾದಾಗಲೇ ತಿಳಿಯುವುದು. ಸಾವಿನ ಸನಿಹಕ್ಕೆ ಹೋಗಿ ವಾಪಸ್ ಮರಳಿದಾಗ ನಮ್ಮಲ್ಲಿರುವ/ಇರದಿರುವ ಅಧಿಕಾರ, ಹಣ, ಆಸ್ತಿ ಎಲ್ಲವೂ ನಿರರ್ಥಕವೆನಿಸುತ್ತವೆ. ಅದೊಂದು ಬಹುದೊಡ್ಡ ಬದುಕಿನ ಪಾಠ.
ಇಂಗ್ಲೆಂಡ್‌ನ ಫುಟ್‌ಬಾಲ್ ತಾರೆ ಪೆಪೆ ರೀನಾ ಅವರಿಗೆ ಆಗಿದ್ದೂ ಇದೇ ಅನುಭವ. ಅವರು ಕೋವಿಡ್ 19 ವೈರಸ್ ನಿಂದ 25 ನಿಮಿಷ ಆಮ್ಲಜನಕವಿಲ್ಲದೇ ಪರದಾಡಿದ್ದರಂತೆ. ಆ ಹಂತದಲ್ಲಿ ನಿರಂತರ ಭೀತಿ ಕಾಡಿತ್ತು ಎಂದು ಪೆಪೆ ರೀನಾ ಅವರು ಹೇಳಿದ್ದಾರೆ.
ಇಂಗ್ಲೆಂಡ್‌ನ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಆ್ಯಸ್ಟನ್ ವಿಲ್ಲಾ ಫುಟ್‌ಬಾಲ್ ತಂಡದ ಗೋಲ್ ಕೀಪರ್ ಪೆಪೆ. 2 ವಾರದ ಹಿಂದೆ ಅವರಿಗೆ ಕೋವಿಡ್ 19 ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು. ಉಸಿರಾಟದ ಸಮಸ್ಯೆ, ಕಫ, ತೀವ್ರ ತಲೆಶೂಲೆ. ಪೆಪೆಗೆ ಎಂತಹ ಭಾವನೆ ಕಾಡಿತ್ತೆಂದರೆ, ಈ ತಲೆಶೂಲೆ ತನ್ನೆನ್ನೆಂದೂ ಬಿಟ್ಟು ಹೋಗುವುದೇ ಇಲ್ಲವೇನೋ ಎಂದು ಅವರು ಅಂದುಕೊಂಡಿದ್ದರಂತೆ.
ಈಗ ಅವರು 18 ದಿನಗಳ ಪ್ರತ್ಯೇಕವಾಸವನ್ನು ಮುಗಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರೇ ಹೇಳುವ ಪ್ರಕಾರ, ತಮಗೆ ದೊಡ್ಡ ಮನೆಯಿದೆ, ಕೈದೋಟವಿದೆ, ಹಣವಿದೆ. ಆದರೆ ಪುಟ್ಟ ಮನೆಗಳಲ್ಲಿ ಇಬ್ಬರು ಮಕ್ಕಳನ್ನಿಟ್ಟುಕೊಂಡು ಇರುವ ಅಪ್ಪಅಮ್ಮಂದಿರೇ ನಿಜವಾದ ಹೋರಾಟಗಾರರು ಎಂದು ಪೆಪೆ ಹೇಳುತ್ತಾರೆ.
ಆ 25 ನಿಮಿಷ
ನನ್ನ ಜೀವನದ ಅತ್ಯಂತ ಕೆಟ್ಟ ಘಳಿಗೆಯೆಂದರೆ ಆ 25 ನಿಮಿಷ. ಉಸಿರಾಟವೇ ನಿಂತುಹೋಯಿತೇನೋ ಎಂದುಕೊಂಡಿದ್ದೆ. ಅಷ್ಟು ಹೊತ್ತು ಆಮ್ಲಜನಕದ ಪೂರೈಕೆಯೇ ನಿಂತು ಹೋಗಿತ್ತು. ನಿಜಕ್ಕೂ ಹೆದರಿದ್ದು ಆಗಲೇ! ಸತತವಾಗಿ ಕಳವಳ, ಭೀತಿ ಕಾಡಿತು. ಇದ್ದಕ್ಕಿದ್ದಂತೆ ಗಂಟಲು ಮುಚ್ಚಿಕೊಂಡಿತು. ಮುಂದೆ ಏಳೆಂಟು ದಿನ ಮನೆಯಿಂದ ಅಲ್ಲಾಡಲಿಲ್ಲ ಎಂದು ಪೆಪೆ ಹೇಳಿದ್ದಾರೆ.