Advertisement

ಬೇರೆ ಇಲಾಖೆಯಿಂದ ಯೋಜನೆ ಕಿತ್ತುಕೊಂಡಿಲ್ಲ

12:06 PM Aug 04, 2018 | Team Udayavani |

ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿವಾರಣೆಗೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ 15 ಸಾವಿರ ಕೋಟಿ ರೂ. ಮೊತ್ತದ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಆರಂಭಿಸುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

Advertisement

ಯೋಜನೆ ಕುರಿತು  ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ 45 ದಿನ ಕಾಲಾವಕಾಶವಿದೆ. ಜತೆಗೆ  ಪರಿಸರವಾದಿಗಳ ಸಲಹೆ-ಸೂಚನೆ ಸಹ ಪಡೆಯಲಾಗುವುದು. ಅಂತಿಮವಾಗಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

“ಯೋಜನೆಗಾಗಿ 2874 ಮರಗಳನ್ನು ಮಾತ್ರ ತೆರವುಗೊಳಿಸಬೇಕಾಗುತ್ತದೆ. ನಾನು ಸಚಿವನಾದ ನಂತರ ರೂಪಿಸಿದ ಯೋಜನೆ ಇದಲ್ಲ ಅಥವಾ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದಲೇ ನಡೆಸುವ ಉದ್ದೇಶದಿಂದ, ನಾನು ಅದನ್ನು ಬೇರೆ ಇಲಾಖೆಯಿಂದ ಕಿತ್ತುಕೊಂಡಿಲ್ಲ,’ ಎಂದು ಸ್ಪಷ್ಟಪಡಿಸಿದರು.

2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ರೂಪಿಸಲಾಗಿತ್ತು. ಆ ನಂತರ ಬಿಬಿಎಂಪಿಯಿಂದ ಕಾಮಗಾರಿ ಕೈಗೊಳ್ಳಲು ತೀರ್ಮಾನವಾಗಿತ್ತು. ಅದು ಸಾಧ್ಯವಾಗದೆ ಕೆಆರ್‌ಡಿಲ್‌ಗೆ ಒಪ್ಪಿಸಲಾಗಿತ್ತು. 2007ರಿಂದ 2014 ರವರೆಗೆ ಯೋಜನೆ ಯಾವುದೇ ಹಂತ ತಲುಪಿರಲಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಮಹದೇವಪ್ಪ ಹಾಗೂ ಜಾರ್ಜ್‌ ಅವರು ಮತ್ತೆ ಯೋಜನೆಗೆ ಚಾಲನೆ ನೀಡಿ ಸಾಧ್ಯತಾ ವರದಿ ತಯಾರಿಸಲು 14 ಕೋಟಿ ರೂ. ಮೀಸಲಿಟ್ಟಿದ್ದರು ಎಂದು ಮಾಹಿತಿ ನೀಡಿದರು.

ವಿವಾದ ಎಳೆದುಕೊಳ್ಳಲು ಸಿದ್ಧರಿಲ್ಲ: ಸಾರ್ವಜನಿಕರು ಹಾಗೂ ಪರಿಸರವಾದಿಗಳು ಬೇಡ ಎಂದರೆ ನಮಗೂ ಬೇಡ. ಸ್ಟೀಲ್‌ ಬ್ರಿಡ್ಜ್ ಯೋಜನೆ ನೋಡಿಲ್ಲವೇ, ಅಂತಹ ವಿವಾದ ಮೈ ಮೇಲೆ ಎಳೆದುಕೊಳ್ಳಲು ನಾವು ಸಿದ್ಧರಿಲ್ಲ. ಪಾರದರ್ಶಕವಾಗಿ ಯೋಜನೆ ಜಾರಿಗೊಳಿಸಲಿದ್ದೇವೆ ಎಂದು ರೇವಣ್ಣ ಹೇಳಿದರು.

Advertisement

ಹಾಗಾದರೆ, ಜನತೆ ಬೇಡ ಎಂದಾದರೆ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ರದ್ದುಪಡಿಸುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಸಚಿವರು, ನಾನ್ಯಾಕೆ ಆ ರೀತಿ ಹೇಳಲಿ ಎಂದು ಉಲ್ಟಾ ಹೊಡೆದರು. ಬೇಕು-ಬೇಡಾ ಎಂದು ತೀರ್ಮಾನ ಮಾಡುವವನು ನಾನಲ್ಲ, ಮುಖ್ಯಮಂತ್ರಿಗಳು ಮಾಡುತ್ತಾರೆ. ಆಕ್ಷೇಪಣೆ ಬರುವ ಮೊದಲೇ ನಾನು ಏನೂ ಮಾತನಾಡುವುದಿಲ್ಲ ಎಂದರು.

ಎರಡು ವರ್ಷದಲ್ಲಿ ಆರು ಪಥ ಪೂರ್ಣ: ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಆರು ಪಥ ರಸ್ತೆ ನಿರ್ಮಾಣಕ್ಕೆ ಸೆಪ್ಟೆಂಬರ್‌ನಿಂದ ಭೂಮಿ ಬಿಟ್ಟುಕೊಡುವ ಪ್ರಕ್ರಿಯೆ ನಡೆಯಲಿದೆ. ಆರು ಪಥ ರಸ್ತೆ ಹಾಗೂ ಎರಡೂ ಕಡೆ ಸರ್ವಿಸ್‌ ರಸ್ತೆ ಬರಲಿದೆ.

ಒಟ್ಟಾರೆ ಯೋಜನೆಗೆ ರಾಜ್ಯ ಸರ್ಕಾರದಿಂದ ಅಗತ್ಯವಾದ ಸಹಕಾರ ನೀಡಿದರೆ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಶೇ.10 ರಷ್ಟು ಸೇವಾ ತೆರಿಗೆ ಇಳಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಹೊರೆ ಕಡಿಮೆಯಾಗಿದೆ ಎಂದು ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next